ಖರ್ಗೆ ಪುತ್ರನಿಗೆ ಕೊಟ್ಟ ಸಿಎ ನಿವೇಶನದ ಬಗ್ಗೆ ಟೀಕಿಸುವ ಛಲವಾದಿ ನಾರಾಯಣಸ್ವಾಮಿ ಒಬ್ಬ 'ಶೆಡ್' ಗಿರಾಕಿ!

By Sathish Kumar KH  |  First Published Aug 29, 2024, 5:52 PM IST

ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಬೆಂಗಳೂರು (ಆ.29): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ. ಇಂಥವರು ನಮಗೆ ಪಾಠ ಮಾಡಲು ಬರುತ್ತಾರೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಎರಡು ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಅವರು, 'ರಾಹುಲ್ ಖರ್ಗೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ; ಎಂಜಿನಿಯರಿಂಗ್ ಪದವೀಧರರು. ಡಿಆರ್ ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂಥ ಅರ್ಹರಿಗೆ ಸಿ.ಎ. ನಿವೇಶನ ಕೊಡದೆ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರಕಾರದ ವಶಕ್ಕೆ ಪಡೆಯುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ಕೋಟಿ ಕೋಟಿ ಒಡೆಯನಾದರೂ ಮೀಸಲಾತಿಯಡಿ ಸಿಎ ನಿವೇಶನ ಪಡೆದ ಖರ್ಗೆ ಪುತ್ರ!

ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇಕಡ 5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, `ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.

ನಾರಾಯಣಸ್ವಾಮಿ 2006ರಲ್ಲಿ 'ಬೃಂದಾವನ್ ಸಾಫ್ಟ್ವೇರ್' ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ವಿವರಿಸಿದರು.

ದೇಶಕ್ಕೆಲ್ಲ ಉಪದೇಶ ಮಾಡೋ ಖರ್ಗೆ ಮಗನಿಗೆ ಕೆಐಎಡಿಬಿ ಜಾಗವೇ ಬೇಕಿತ್ತಾ? ಕೇಂದ್ರ ಸಚಿವ ಹೆಚ್‌ಡಿಕೆ ವಾಗ್ದಾಳಿ

ನಾರಾಯಣಸ್ವಾಮಿ ರಾಜಕೀಯದಲ್ಲಿ ಮೇಲಕ್ಕೆ ಬರಲು ಖರ್ಗೆಯವರೇ ಕಾರಣರು. ಅವರು ರೈಲ್ವೆ ಸಚಿವರಾಗಿದ್ದಾಗ ಈ ವ್ಯಕ್ತಿಯನ್ನು ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಆದರೂ ನಾರಾಯಣಸ್ವಾಮಿ ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ. ಹೀಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಮೇಲೇರಬಹುದು ಎನ್ನುವ ಭ್ರಮೆಯಲ್ಲಿ ಅವರಿರಬಹುದು ಎಂದು ಪಾಟೀಲ ಕುಟುಕಿದ್ದಾರೆ.

click me!