ರಾಜ್ಯಪಾಲರ ಕಚೇರಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಕೇಂದ್ರ ಸರ್ಕಾರ: ಸಚಿವ ದಿನೇಶ್‌ ಗುಂಡೂರಾವ್‌

By Kannadaprabha NewsFirst Published Aug 1, 2024, 10:59 PM IST
Highlights

ರಾಜ್ಯಪಾಲರ ಕಚೇರಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಒಂದು ಕೆಟ್ಟ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದರು. 

ಬಾಗಲಕೋಟೆ (ಆ.01): ರಾಜ್ಯಪಾಲರ ಕಚೇರಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಒಂದು ಕೆಟ್ಟ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಗವರ್ನರ್ ಬಗ್ಗೆ ನಮಗೆ ಸಂಶಯ ಬರ್ತಿದೆ. ಏಕೆಂದರೆ ಎಲ್ಲೋ ಒಂದು ಕಡೆ ಬೇರೆ ಬೇರೆ ರಾಜ್ಯಗಳಲ್ಲಿ, ರಾಜ್ಯಪಾಲರ ದುರುಪಯೋಗಪಡಿಸಿಕೊಳ್ಳುವ ಇತಿಹಾಸ ಅನೇಕ ನಿದರ್ಶನಗಳಿವೆ ಎಂದ ಹೇಳಿದರು.

ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಇರಬಹುದು. ಕೇರಳ, ದೆಹಲಿಯಲ್ಲಿ ಎಲ್ಲ ಕಡೆ ಇದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ನಮ್ಮ ರಾಜ್ಯಪಾಲರು ಈ ತರಹ ಮಾಡುತ್ತಾರೆ ಅಂತ ಅನ್ಕೊಂಡಿರಲಿಲ್ಲ. ಇವತ್ತು ಅವರು ಕೇಂದ್ರದ ಕೈಗೊಂಬೆಯಾಗಿ, ಬಿಜೆಪಿ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ನಮಗೆ ಬರುತ್ತಿದೆ. ಅದು ಒಳ್ಳೆಯದಲ್ಲ. ಏಕೆಂದರೆ ಈಗ ಸಿಎಂ ಅವರಿಗೇನೆ ನೋಟಿಸ್ ಕೊಡುವ ಕೆಲಸ ಮಾಡಿದ್ದಾರೆ ರಾಜ್ಯಪಾಲರು. ಯಾವುದರಲ್ಲಿಯೂ ಏನು ಆಧಾರಗಳಿಲ್ಲ. ಅಂತಹ ಒಂದು ವಿಷಯದ ಬಗ್ಗೆ ಕಾನೂನು ಸಲಹೆ ಪಡೆಯದೇ ನೇರವಾಗಿ ಒಬ್ಬ ಸಿಎಂಗೆ ನೋಟಿಸ್ ಕೊಡ್ತಿನಿ ಅಂದರೆ ಈ ರಾಜ್ಯಪಾಲರ ಬಗ್ಗೆ ಮತ್ತಿನ್ನೇನು ಹೇಳಬೇಕು. ಖಂಡಿತವಾಗಿಯೂ ಇದು ಒಪ್ಪುವ ಮಾತಲ್ಲ ಎಂದು ಆಕ್ರೋಶ ಹೊರಹಾಕಿದರು..

Latest Videos

ಜನತಂತ್ರ ವ್ಯವಸ್ಥೆಯಲ್ಲಿ ರಾಜ್ಯಪಾಲರು ಸರ್ಕಾರದ ಮಂತ್ರಿಮಂಡಲದ ಶಿಫಾರಸಿನ ಮೇರೆಗೆ ಜವಾಬ್ದಾರಿ ನಿರ್ವಹಣೆ ಮಾಡಬೇಕು. ರಾಜಕೀಯ ಮಾಡೋದಕ್ಕೆ ರಾಜ್ಯಪಾಲರು ಈ ಕೆಲಸ ಮಾಡಬಾರದು. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ತರಹ ರಾಜ್ಯಪಾಲರನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಜೆಪಿಯ ವ್ಯವಸ್ಥೆಯಾಗಿದೆ. ಎಲ್ಲ ರಾಜ್ಯಗಳಲ್ಲಿ ಸರ್ಕಾರ ಅಸ್ಥಿರಗೊಳಿಸಬೇಕು. ಆಯಾ ಸರ್ಕಾರವನ್ನು ಬೀಳಿಸಬೇಕು ಬೇರೆ ಪಕ್ಷ ಅಧಿಕಾರದಲ್ಲಿದ್ದಾಗ ಆಡಳಿತ ನಡೆಸಲು ಬಿಡಬಾರದು. ಗೊಂದಲ ಸೃಷ್ಟಿ ಮಾಡಬೇಕು ಎಂಬ ಹುನ್ನಾರಗಳನ್ನು ಕೇಂದ್ರದ ಬಿಜೆಪಿ ಮಾಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಪತನ ಬಿಜೆಪಿಗರ ಕನಸು: ಶಾಸಕ ಕೊತ್ತೂರು ಮಂಜುನಾಥ್‌

ಕೇಂದ್ರದ ಆಯವ್ಯಯದಲ್ಲಿ ನಮಗೆ ದುಡ್ಡು ಕೊಡೋದಿಲ್ಲ. ಮಹದಾಯಿ, ಭದ್ರಾ ಮೇಲ್ದಂಡೆ ಇರಬಹುದು. ಬರಗಾಲದ ಅನುದಾನ ಪಡೆದುಕೊಳ್ಳಲು ನಾವು ಸುಪ್ರೀಂ ಕೋರ್ಟ್‌ಗೆ ಹೋಗಿ ಅನುದಾನ ತರತಕ್ಕ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಬಂತು. ನಮ್ಮ ರಾಜ್ಯಕ್ಕೆ ಯಾವ ವ್ಯವಸ್ಥೆ ಮಾಡದೇ ಸರ್ಕಾರ ತೆಗೆಯಬೇಕು ಎಂಬ ಉದ್ದೇಶದಿಂದ ಹುನ್ನಾರ ಸಂಚುಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಈ ಕಾರ್ಯಕ್ಕೆ ರಾಜ್ಯಪಾಲರನ್ನು ಬಳಸಿಕೊಳ್ಳೋದು ಕೆಟ್ಟ ಬೆಳವಣಿಗೆ ಎಂದು ಕಿಡಿಕಾರಿದರು.

click me!