
ಬೆಂಗಳೂರು (ಆ.20): ಸಾಮಾಜಿಕ ಮತ್ತು ಶೈಕ್ಷಣಿಕ ಮರು ಸಮೀಕ್ಷೆ (ಜಾತಿಗಣತಿ) ಹಿನ್ನೆಲೆಯಲ್ಲಿ ಆ.22ರಂದು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸಮಾಲೋಚನಾ ಸಭೆ ಹಮ್ಮಿಕೊಂಡಿದ್ದು, ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ಸಚಿವ ಈಶ್ವರ್ ಖಂಡ್ರೆ ನಿವಾಸದಲ್ಲಿ ಲಿಂಗಾಯತ ಸಚಿವರು ಹಾಗೂ ಶಾಸಕರು ಸಭೆ ನಡೆಸಿ ಜಾತಿಗಣತಿ ಕುರಿತು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಹೇಗೆ ಜಾಗೃತಿ ಮೂಡಿಸಬೇಕು ಎಂಬ ಕುರಿತು ಚರ್ಚಿಸಿದರು. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಶಾಸಕರಾದ ಶರಣಬಸಪ್ಪ ದರ್ಶನಾಪುರ್ ಸೇರಿದಂತೆ ಹಲವರು ನಾಯಕರು ಭಾಗವಹಿಸಿದ್ದರು.
ಈ ಸಭೆಯಲ್ಲಿ ಚರ್ಚಿಸಿದ ಅಂಶಗಳು ಹಾಗೂ ಆ.22 ರಂದು ಸಭೆ ನಡೆಸುವ ಕುರಿತು ಈಶ್ವರ್ ಖಂಡ್ರೆ ಅವರು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ವಿಧಾನಸಭೆ ಮೊಗಸಾಲೆಯಲ್ಲಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಶ್ವರ ಖಂಡ್ರೆ ನಿವಾಸದಲ್ಲಿ ಸಭೆ: ಸೋಮವಾರ ರಾತ್ರಿ ಈಶ್ವರ ಖಂಡ್ರೆ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಜಾತಿಗಣತಿ ವೇಳೆ ಉಂಟಾಗುವ ಸವಾಲು ಹಾಗೂ ಗೊಂದಲಗಳನ್ನು ಬಗೆಹರಿಸಲು ಆ.22 ರಂದು ಸಮಾಲೋಚನಾ ಸಭೆ ನಡೆಸಲು ತೀರ್ಮಾನಿಸಲಾಯಿತು. ಸಮುದಾಯದ ಮುಂದಿನ ಕಾರ್ಯಚಟುವಟಿಕೆ ನಿರ್ಧರಿಸಲು ವೀರಶೈವ-ಲಿಂಗಾಯತ ನಾಯಕರು ಪಕ್ಷಾತೀತವಾಗಿ ಸಭೆ ಸೇರಬೇಕು. ಈ ಜಾತಿಗಣತಿ ವೇಳೆಯಲ್ಲಾದರೂ ಗೊಂದಲಗಳು ಉಂಟಾಗದಂತೆ ಎಲ್ಲ ಸಮುದಾಯದ ನಾಗರಿಕರೂ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.