
ತುಮಕೂರು (ಮೇ.02): ದೇಶದಲ್ಲಿ ಜಾತಿ ಗಣತಿ ಮಾಡುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಹಾಗಾಗಿ ರಾಜ್ಯ ಸರ್ಕಾರದ ಜಾತಿ ಗಣತಿಗೆ ಬೆಲೆ ಇಲ್ಲ. ಈ ಜಾತಿ ಗಣತಿ ವರದಿ ತನ್ನಿಂದ ತಾನಾಗಿಯೇ ನಿಷ್ಕ್ರಿಯವಾಗುತ್ತದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹೇಳಿದರು. ನಗರದಲ್ಲಿ ಶಾಸಕ ಜ್ಯೋತಿಗಣೇಶ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿಗೆ ಯಾವುದೇ ಕಿಮ್ಮತ್ತಿಲ್ಲ. ಹಾಗಾಗಿ ಈ ಸರ್ಕಾರದ ಜಾತಿ ಗಣತಿ ಹೊರಟು ಹೋಗಿದೆ.
ದೇಶದ ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ಮಾಡಲಿದೆ ಎಂದು ಅವರು ತಿಳಿಸಿದರು. ಒಂದು ದೇಶ, ಒಂದು ಚುನಾವಣೆ, ಮಹಿಳಾ ಮೀಸಲಾತಿ ಬಿಲ್, ಜಾತಿ ಗಣತಿ ಇವೆಲ್ಲಾ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಚಿಂತನೆ. ರಾಜ್ಯ ಸರ್ಕಾರ ವಿನಾಕಾರಣ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು ಉತ್ತಮ ಎಂದರು. ನಮ್ಮದು ಜಾತ್ಯಾತೀತ ರಾಷ್ಟ್ರ. ಸುಮಾರು ವರ್ಷಗಳಿಂದ ಜಾತಿ ಗಣತಿ ಮಾಡಬೇಕು ಎಂಬ ಕೂಗಿತ್ತು. ಹಾಗಾಗಿ ಈಗ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡಲು ಕ್ರಮ ಕೈಗೊಂಡಿದೆ.
ಆದರೆ ಕಾಂಗ್ರೆಸ್‌ನವರು ಕೇಂದ್ರದಲ್ಲಿ ಇಷ್ಟು ವರ್ಷ ಅಧಿಕಾರದಲ್ಲಿದ್ದರಲ್ಲಾ ಅವರು ಏಕೆ ಜಾತಿ ಗಣತಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ದೇಶದ ಜ್ವಲಂತ ಸಮಸ್ಯೆಗಳಿಗೆ ಪ್ರಧಾನಿ ಮೋದಿಯವರು ಪರಿಹಾರ ಕಂಡುಕೊಂಡಿದ್ದಾರೆ. ಈವರೆಗೆ 25 ಕೋಟಿ ಕುಟುಂಬಗಳನ್ನು ಮೇಲ್ಪಂಕ್ತಿಗೆ ತಂದಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದಿಂದ ಮೋದಿ ವಿರುದ್ಧದ ಗಾಯಬ್ ಪೋಸ್ಟ್ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಸಂಸ್ಕೃತಿ, ಸಂಸ್ಕಾರ ಇಲ್ಲದವರು. ಹಾಗಾಗಿ ಹೀಗೆ ಮಾಡಿದ್ದಾರೆ. ದೇಶದ ಅರಿವಿಲ್ಲದವರಿಗೆ, ಇಂತಹ ಹುಚ್ಚರನ್ನು ಕಟ್ಟಿಕೊಂಡು ನಾವೇನು ಮಾಡಲಿಕ್ಕೂ ಆಗಲ್ಲ ಎಂದರು.
ಬಿಬಿಎಂಪಿ ಎಲೆಕ್ಷನ್ ವಿಳಂಬಕ್ಕೆ ಗ್ರೇಟರ್ ಬೆಂಗಳೂರು ರಚನೆ: ಸೋಮಣ್ಣ
ದೇಶದ ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್‌ನವರು ಈ ರೀತಿ ಅಪಮಾನ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಕೀಳರಿಮೆ ಹೋಗುವ ತನಕ ಅವರು ಉದ್ದಾರ ಆಗುವುದಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಕೇವಲ 10 ವರ್ಷದಲ್ಲಿ ದೇಶವನ್ನು 50 ವರ್ಷ ಮುಂದಕ್ಕೆ ಕೊಂಡೊಯ್ದಿದ್ದಾರೆ. 5 ದಶಕಗಳಿಗೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.