ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿದ ಬಿಜೆಪಿಗೆ ಈಗ ಮತ್ತೆ ತನ್ನ ಮತಗಳ ಕ್ರೋಢಿಕರಿಸುವ ತವಕ. ಲೋಕಸಭಾ ಚುನಾವಣೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟ ಕಾಂಗ್ರೆಸ್ ಗೆ ಮತ್ತೆ ಮರಳಿ ಪಡೆವ ಹಠ. ಇದಕ್ಕಾಗಿ ಎಲ್ಲ ತಂತ್ರ, ಪ್ರತಿತಂತ್ರಗಳ ಲೆಕ್ಕಾಚಾರ ನಡೆಯುತ್ತಿದೆ. ಜಿಲ್ಲೆಯಲ್ಲಿ ಲಿಂಗಾಯತ, ಈಡಿಗ, ಮುಸ್ಲಿಂ, ಬ್ರಾಹ್ಮಣ, ಕುರುಬ, ಹಿಂದುಳಿದ ಮತ್ತು ದಲಿತ ಸಮುದಾಯಗಳ ಮತ ಬ್ಯಾಂಕ್ ಇಲ್ಲಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ(ಮಾ.31): ಅನೇಕ ಹೋರಾಟಗಳಿಗೆ ನಾಂದಿ ಹಾಡಿದ, ಸಮಾಜವಾದಿ ಚಳವಳಿ ಉತ್ತುಂಗಕ್ಕೇರಿಸಿದ ಮಲೆನಾಡಿನ ರಾಜಧಾನಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲೀಗ ಜಾತಿ ಲೆಕ್ಕಾಚಾರಗಳದ್ದೇ ಅಬ್ಬರ. ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಜಾತಿಗಳ ಲೆಕ್ಕಾಚಾರದಲ್ಲಿ ಚುನಾವಣಾ ತಂತ್ರ ರೂಪಿತವಾಗುತ್ತಿದೆ.
undefined
ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿದ ಬಿಜೆಪಿಗೆ ಈಗ ಮತ್ತೆ ತನ್ನ ಮತಗಳ ಕ್ರೋಢಿಕರಿಸುವ ತವಕ. ಲೋಕಸಭಾ ಚುನಾವಣೆಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟ ಕಾಂಗ್ರೆಸ್ ಗೆ ಮತ್ತೆ ಮರಳಿ ಪಡೆವ ಹಠ. ಇದಕ್ಕಾಗಿ ಎಲ್ಲ ತಂತ್ರ, ಪ್ರತಿತಂತ್ರಗಳ ಲೆಕ್ಕಾಚಾರ ನಡೆಯುತ್ತಿದೆ. ಜಿಲ್ಲೆಯಲ್ಲಿ ಲಿಂಗಾಯತ, ಈಡಿಗ, ಮುಸ್ಲಿಂ, ಬ್ರಾಹ್ಮಣ, ಕುರುಬ, ಹಿಂದುಳಿದ ಮತ್ತು ದಲಿತ ಸಮುದಾಯಗಳ ಮತ ಬ್ಯಾಂಕ್ ಇಲ್ಲಿದೆ.
ಸಚಿವ ಮಧು ಬಂಗಾರಪ್ಪ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ: ಬಿ.ವೈ.ರಾಘವೇಂದ್ರ
ಲಿಂಗಾಯತ, ಬ್ರಾಹ್ಮಣ ಮತಗಳು ಬಹುತೇಕ ಬಿಜೆಪಿ ಬೆಂಗಾವಲಿಗೆ ಇದ್ದರೆ, ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಛತ್ರಿಯಡಿ ಇದೆ. ಉಳಿದಂತೆ ಎಲ್ಲ ಜಾತಿಗಳೂ ಎಲ್ಲ ಪಕ್ಷಗಳಲ್ಲೂ ಹಂಚಿ ಹರಿದು ಹೋಗಿದೆ. ಒಂದು ಕಾಲದಲ್ಲಿ ಬಂಗಾರಪ್ಪ ಹಿಂದೆಯೇ ಇದ್ದ ಈಡಿಗ ಮತ ಬ್ಯಾಂಕ್ 2006ರ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಇಬ್ಭಾಗವಾಗಿದೆ.
ಈಡಿಗ ಮತ ಒಗ್ಗೂಡಿಸಲು ಕಾಂಗ್ರೆಸ್ ತಂತ್ರ:
ಈಡಿಗ ಮತ ಬ್ಯಾಂಕ್ ನ್ನು ತಮ್ಮ ಹಿಡಿತದಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಲೆಕ್ಕಾಚಾರದಲ್ಲಿ ತಂತ್ರಗಾರಿಕೆ ನಡೆಯುತ್ತಿದೆ. ಈ ಬಾರಿ ಈಡಿಗರ ಒಟ್ಟುಗೂಡಿಸಿ ಬಂಗಾರಪ್ಪ ಪುತ್ರಿಯ ಗೆಲ್ಲಿಸಬೇಕು. ಇದಕ್ಕಾಗಿ ತಮ್ಮೊಳಗಿನ ಭಿನ್ನಾಭಿಪ್ರಾಯ ಮರೆಯಬೇಕು ಎಂಬ ಸೂಚನೆ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಪಕ್ಷದ ಎಲ್ಲ ಈಡಿಗ ಮುಖಂಡರಿಗೂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 2004ರಲ್ಲಿ ಬಂಗಾರಪ್ಪ ಗೆಲುವು ಸಾಧಿಸಿದ್ದೇ ಕಡೆಯದು. ಆ ಬಳಿಕ ಈಡಿಗ ಸಮುದಾಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಸಿಕ್ಕಿಲ್ಲ ಎಂಬ ಮಾತು ಇವರು ಆಡಿದ್ದಾರಲ್ಲದೆ, ಬಂಗಾರಪ್ಪ ಅವರ ಕುಟುಂಬಕ್ಕೆ ನ್ಯಾಯ ಕಲ್ಪಿಸಲು ಇದು ಕೊನೆಯ ಅವಕಾಶ. ಹೀಗಾಗಿ ಎಲ್ಲರೂ ಒಂದಾಗಬೇಕೆಂಬ ಸಂದೇಶ ಕಳುಹಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಅನ್ಯಾಯ: ಕೆ.ಎಸ್.ಈಶ್ವರಪ್ಪ ಆರೋಪ
ಈಡಿಗ, ಒಬಿಸಿ ಮತಗಳ ಸೆಳೆಯಲು ಬಿಜೆಪಿ ಯೋಜನೆ:
2008 ಮತ್ತು 2009ರ ಚುನಾವಣೆಯಲ್ಲಿನ ಬಂಗಾರಪ್ಪ ಸೋಲಿಗೆ ಈಗಲಾದರೂ ನ್ಯಾಯ ಒದಗಿಸಬೇಕೆಂಬ ಇರಾದೆ ಇದರ ಹಿಂದಿದೆ ಎನ್ನಲಾಗಿದೆ. ಇದೊಂದು ವಿಚಾರದಲ್ಲಿ ಕುಟುಂಬ ಕಲಹ ಕೂಡ ಮರೆಯಬೇಕೆಂಬ ಮಾತು ಅವರು ಆಡಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ತನ್ನದೇ ತಂತ್ರಗಾರಿಕೆ ಮೂಲಕ ಈ ಮತ ಬ್ಯಾಂಕ್ ನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಬಳಿಕ ಪಕ್ಷದ ವೇದಿಕೆಯಿಂದ ದೂರವಿದ್ದ ಕುಮಾರ್ ಬಂಗಾರಪ್ಪರನ್ನು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದ ವೇಳೆ ವೇದಿಕೆಗೆ ಬರುವಂತೆ ಮಾಡಿ ದೊಡ್ಡ ಲಾಭ ಮಾಡಿಕೊಂಡಿದೆ. ಜೊತೆಗೆ ಶಾಸಕ ಹರತಾಳು ಹಾಲಪ್ಪ ಮತ್ತು ಇತರೆ ಎರಡನೇ ಹಂತದ ಮುಖಂಡರ ಕರೆದು ಟಾಸ್ಕ್ ನೀಡಲಾಗುತ್ತಿದೆ. ಇದೇ ರೀತಿ ಹಿಂದುಳಿದ ವರ್ಗದ ಮತಗಳ ಸೆಳೆಯಲು ಎರಡೂ ಪಕ್ಷಗಳ ಮುಖಂಡರು ಲೆಕ್ಕಾಚಾರ ಹಾಕಿದ್ದು, ಪ್ರತಿ ಜಾತಿಯ ಮುಖಂಡರು ಮತ್ತು ಮಠಗಳ ಸ್ವಾಮೀಜಿಗಳ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ. ಮುಂದೆ ಅವಕಾಶ ಕೊಡುವ ಆಶ್ವಾಸನೆ ನೀಡುತ್ತಿದ್ದಾರೆ. ದಲಿತ ಸಮುದಾಯದ ಮತಗಳ ಸೆಳೆಯಲು ಕೂಡ ಇದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಮುಖ್ಯವಾಗಿ ಜಾತಿಯ ಲೆಕ್ಕಾಚಾರದಲ್ಲಿಯೇ ಚುನಾವಣಾ ತಂತ್ರಗಳ ಆರಂಭದ ಹಂತದಲ್ಲಿ ಮಾಡಲಾಗುತ್ತಿದೆ.
ಜೆಡಿಎಸ್ ನೊಂದಿಗಿನ ಮೈತ್ರಿ ಬಿಜೆಪಿಗೆ ಲಾಭವಾಗುವುದೇ?
ಜಿಲ್ಲೆಯಲ್ಲಿ ಜೆಡಿಎಸ್ ಮತಗಳು ದೊಡ್ಡ ಪ್ರಮಾಣದಲ್ಲಿ ಸದ್ಯ ಇರದಿದ್ದರೂ, ಒಕ್ಕಲಿಗ ಮತಗಳು ದೊಡ್ಡ ಪ್ರಮಾಣದಲ್ಲಿಯೇ ಇದೆ. ಈ ಮೊದಲು ಇದರಲ್ಲಿ ದೊಡ್ಡ ಪ್ರಮಾಣದ ಮತ ಜೆಡಿಎಸ್ ಕಡೆಗೆ ಇತ್ತು. ಮುಖ್ಯವಾಗಿ ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಒಕ್ಕಲಿಗ ಮತಗಳು ದೊಡ್ಡ ಪ್ರಮಾಣದಲ್ಲಿದೆ. ಇದೀಗ ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಸಹಜವಾಗಿಯೇ ದೊಡ್ಡ ಪ್ರಮಾಣದಲ್ಲಿ ಈ ಮತಗಳು ಬಿಜೆಪಿಗೆ ಬರಬಹುದು ಎಂಬ ಲೆಕ್ಕಾಚಾರ ಮೇಲ್ನೋಟಕ್ಕೆ ಇದೆ. ಆದರೆ ಈ ಮತಗಳ ಒಡೆಯಲು ಕಾಂಗ್ರೆಸ್ ಕೂಡ ಬೇರೆಯದೇ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಮತ್ತು ಆರ್. ಎಂ. ಮಂಜುನಾಥ್ ಗೌಡ ಕಾಂಗ್ರೆಸ್ ನ ಪ್ರಬಲ ನಾಯಕರಾಗಿರುವುದರಿಂದ ಈ ಮತಗಳು ಕೈ ಬಿಟ್ಟು ಹೋಗದಂತೆ ಪ್ರಯತ್ನ ಆರಂಭಿಸಿದ್ದಾರೆ. ಒಟ್ಟಾರೆ ಜಾತಿಯ ಲೆಕ್ಕಾಚಾರದಲ್ಲಿಯೇ ಮತಗಳ ಕ್ರೋಢೀಕರಣದ ತಂತ್ರ ನಡೆಯುತ್ತಿದೆ.