ಗುತ್ತಿಗೆ ಸಿಬ್ಬಂದಿಗೆ 5 ಲಕ್ಷವರೆಗೆ ಕ್ಯಾಶ್‌ಲೆಸ್‌ ಚಿಕಿತ್ಸೆ: ಸಚಿವ ಎಚ್‌.ಕೆ.ಪಾಟೀಲ್‌

Kannadaprabha News   | Kannada Prabha
Published : Jun 20, 2025, 07:53 AM IST
HK Patil

ಸಾರಾಂಶ

ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷ ರು. ವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಜಾರಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಬೆಂಗಳೂರು (ಜೂ.20): ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3 ಲಕ್ಷ ಸಿಬ್ಬಂದಿ ಹಾಗೂ ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷ ರು. ವರೆಗೆ ನಗದು ರಹಿತ ಆರೋಗ್ಯ ಯೋಜನೆಗೆ ಜಾರಿಗೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಭೆ ಮುಕ್ತಾಯಗೊಂಡ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಆರೋಗ್ಯ ಇಲಾಖೆ ಮೂಲಕ ಈ 3 ಲಕ್ಷ ಸಿಬ್ಬಂದಿ ಮತ್ತು ಅವರ ಅಲಂಬಿತರಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೂಲಕ ವಾರ್ಷಿಕ 5 ಲಕ್ಷ ರು. ವರೆಗೆ ನಗದು ರಹಿತ ಚಿಕಿತ್ಸೆಯ ಆರೋಗ್ಯ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸಿಬ್ಬಂದಿಯಿಂದ ಮಾಸಿಕ 100 ರು. ವಂತಿಕೆ ಮತ್ತು ಸರ್ಕಾರದಿಂದ ಉಳಿದ ಹಣವನ್ನು ಭರಿಸಲಾಗುತ್ತದೆ ಎಂದು ವಿವರಿಸಿದರು.

ನಾಮ ನಿರ್ದೇಶನ ಅಧಿಕಾರ ಸಚಿವರಿಗೆ: ಕರ್ನಾಟಕ ನೋಂದಣಿ ಸಂಘಗಳ ಕಾಯ್ದೆ ಪ್ರಕಾರ ಸಂಘಗಳಾಗಿ ನೋಂದಾಯಿಸಲಾದ ಆರೋಗ್ಯ ರಕ್ಷಾ ಸಮಿತಿಗಳ ಆಡಳಿತ ಮತ್ತು ಸಾಮಾನ್ಯ ಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರದಲ್ಲಿ ಬದಲಾವಣೆ ಮಾಡಲು ಸಂಪುಟ ಸಭೆ ಸಮ್ಮತಿಸಿದೆ. ಇದರಿಂದ ಎಲ್ಲಾ ಜಿಲ್ಲಾ ಸಮಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅವಕಾಶ ಇನ್ನು ಮುಂದೆ ಆರೋಗ್ಯ ಸಚಿವರಿಗ ಸಿಗಲಿದೆ ಎಂದು ಸಚಿವರು ವಿವರಿಸಿದರು.

ಅನುಭವ ಮಂಟಪ ವೆಚ್ಚ ಪರಿಷ್ಕರಣೆ: ಕಂದಾಯ ಇಲಾಖೆಯಿಂದ ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಅನುಭವ ಮಂಟಪದ ಕಾಮಗಾರಿ ವೆಚ್ಚವನ್ನು 613 ಕೋಟಿ ರು. ಬದಲಿಗೆ 742 ಕೋಟಿ ರು.ಗೆ ಹೆಚ್ಚಿಸುವ ಪರಿಷ್ಕೃತ ಅಂದಾಜಿಗೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಪಾರ್ಶ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ‘ಹಬ್‌ ಮತ್ತು ಸ್ಟೋಕ್‌’ ಮಾದರಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ‘ಸ್ಟೋಕ್‌’ ಆಗಿ ಕಾರ್ಯ ನಿರ್ವಹಿಸುವ ಹುಬ್ಬಳ್ಳಿಯ ಕಿಮ್ಸ್‌ ಸಂಸ್ಥೆಯು ಅನುಷ್ಠಾನಗೊಳಿಸುವ ಯೋಜನೆಯ ವೆಚ್ಚವನ್ನು 8.97 ಕೋಟಿ ರು.ಗಳಿಂದ 12.87 ಕೋಟಿ ರು.ಗಳ ಪರಿಷ್ಕತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಭೆಯಲ್ಲಿ ಒಪ್ಪಿಗೆ ದೊರಕಿದೆ ಎಂದು ಸಚಿವರು ತಿಳಿಸಿದರು.

ಇತರೆ ನಿರ್ಧಾರಗಳು: ಉಳಿದಂತೆ ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಬಸಾಪುರ ಗ್ರಾಮದ ಹೆಸರನ್ನು ಅಲ್ಲಿನ ಜನರ ಒತ್ತಾಯದ ಮೇರೆಗೆ ‘ಗೇರುಗುಡ್ಡ ಬಸಾಪುರ’ ಎಂದು ಮರುನಾಮಕರಣ ಮಾಡಲು ಒಪ್ಪಿಗೆ. ರಾಜ್ಯ ವಿಪ್ಪತ್ತು ಉಪಶಮನ ನಿಧಿಯಡಿ ಅನುಮೋದಿಸಿರುವ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಶಿಲಹಳ್ಳಿ ಗ್ರಾಮದ ಬಳಿ ಕೃಷ್ಣಾ ನದಿಯ ಉಪನದಿಗೆ ಅಡ್ಡಲಾಗಿ ಹೈಲೆವೆಲ್‌ ಮೈನರ್‌ ಸೇತುವೆ ನಿರ್ಮಾಣ ಹಾಗೂ ಹುಬ್ಬಳ್ಳಿ ನಗರದ ರಾಜನಾಲೆಗೆ ಒಟ್ಟು 23.51 ಕೋಟಿ ರು. ಅಂದಾಜು ಮೊತ್ತದ ಕಾಮಗಾರಿ, ರಾಯಚೂರು ಜಿಲ್ಲೆಯ ಕುರುಬರ ಸಂಘಕ್ಕೆ ಕನಕದಾಸ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ಸಿಯತಾಲಾಬ್‌ ಬಡಾವಣೆಯಲ್ಲಿ ರಾಯಚೂರು ಮಹಾನಗರ ಪಾಲಿಕೆಗೆ ಸೇರಿದ 1200 ಚ.ಅಡಿ ವಿಸ್ತೀರ್ಣದ ಖಾಲಿ ನಿವೇಶನವನ್ನು ರಿಯಾಯಿತಿ ದರದಲ್ಲಿ ನೀಡಲು ಒಪ್ಪಿಗೆ ಸಿಕ್ಕಿದೆ ಎಂದು ವಿವರಿಸಿದರು. ಇದೇ ವೇಳೆ ಆರೋಗ್ಯ ರಕ್ಷಾ ಸಮಿತಿಗಳ ಬದಲಾವಣೆ ಆರೋಗ್ಯ ಸಚಿವರು ನಾಮನಿರ್ದೇಶನ ಮಾಡುವ ಅವಕಾಶ ನೀಡುವ ನಿಯಮ ಬದಲಾವಣೆಗೂ ಸಂಪುಟ ಒಪ್ಪಿಗೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ