
ಬೆಂಗಳೂರು (ಜೂ.20): ಪ್ರತಿಯೊಂದು ಕೆಲಸಕ್ಕೂ ಲಂಚ, ಅಲೆದಾಟ, ವಿಳಂಬ ನೀತಿಯ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹೆಚ್ಟುವರಿ ಆಯುಕ್ತರ ಕಚೇರಿಗಳು ಮತ್ತು ತಹಸೀಲ್ದಾರ್ ಕಚೇರಿಗಳಿರುವ ಕಂದಾಯ ಭವನಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಇಂಥ ಕೆಲಸಕ್ಕೆ ಇಂತಿಷ್ಟು ಲಂಚ ಆಗುತ್ತದೆ ಎನ್ನುವ ‘ಲಂಚದ ದರ ಫಲಕವನ್ನೇ ಅಳವಡಿಸಿಬಿಡಿ’ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬೆವರಿಳಿಸಿದರು.
ದಿಢೀರ್ ಭೇಟಿಗೆ ಥಂಡಾ ಹೊಡೆದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಚಿವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ತಡವರಿಸಿದರು. ತಹಸೀಲ್ದಾರ್ ಆದೇಶ ಮಾಡಿದ ಬಳಿಕ ಥಂಬ್ ಇಂಫ್ರೆಷನ್ ನೀಡಲು ಐದು ತಿಂಗಳು ಬೇಕೇ? ನೀವು ಪಾಳೆಗಾರ ಸಾಹೇಬರೇ? ಸಲಾಮ್ ಹೊಡೆದು, ಪಾದ ಪೂಜೆ ಮಾಡಿ ಕೆಲಸ ಮಾಡಿಕೊಡಿ ಎಂದು ಕೇಳಬೇಕಾ? ಇಂತಹ ಎಷ್ಟು ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದೀರಾ? ತೋರಿಸಿ ಎಂದು ಜಿಲ್ಲಾಧಿಕಾರಿ ಎದುರೇ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಇಂತಹ ಒಂದೊಂದು ಕೆಲಸಕ್ಕೆ ರನ್ನಿಂಗ್ ರೇಟ್ ಎಷ್ಟಿದೆ? ಬೋರ್ಡ್ ಇದಿಯಾ? ಎಲ್ಲಿದೆ? ಇಲ್ಲದಿದ್ದರೆ ಹಾಕಿ ಬಿಡಿ. ಪಾಪ ಜನರಿಗೆ ಕೆಲಸ ಆಗಬೇಕು. ನೀವು ಕೇಳಿದಷ್ಟು ಕೊಟ್ಟು ಹೋಗುತ್ತಾರೆ. ಏನು ಮಾಡಲಾಗದು. ಅವರು ಕೂಡ ಬದುಕಬೇಕಲ್ಲವೇ? ಅವರೇನು ಕೊಡುವುದಿಲ್ಲ ಅಂತಾ ಹೇಳುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಮಧ್ಯಪ್ರವೇಶಿಸಿದ ಅಧಿಕಾರಿಯೊಬ್ಬರು. ಆ ಕಡತ ನಮ್ಮ ಬಳಿ ಇಲ್ಲ. ಕೇಸ್ ವರ್ಕರ್ ಬಳಿಯಿದೆ ಎಂದಾಗ, ಅದನ್ನು ತರಿಸಿಕೊಂಡು ಕೆಲಸ ಮುಗಿಸಬಹುದಲ್ಲವೇ? ಏನಾದರೂ ವ್ಯತ್ಯಾಸಗಳಿದ್ದರೆ ಕಡತವನ್ನು ತಿರಸ್ಕರಿಸಬೇಕಲ್ಲವೇ? ಅದನ್ನು ಬಿಟ್ಟು ಬಾಕಿ ಉಳಿಸಿಕೊಂಡಿರುವುದು ಏಕೆ? ಎಂದು ಸಚಿವರು ಪ್ರಶ್ನಿಸಿದರು.
ಬೆಂಗಳೂರು ದಕ್ಷಿಣ ತಹಸೀಲ್ದಾರ್ ಕಚೇರಿ ರೆಕಾರ್ಡ್ ರೂಮ್‌ಗೆ ಭೇಟಿ ಮಾಡಿದ ಸಚಿವರು, ದಾಖಲೆಗಳು ಸ್ಕ್ಯಾನಿಂಗ್ ಮಾಡಿ ಅಪ್ಲೋಡ್ ಮಾಡಲು ನಿಧಾನ ಆಗುತ್ತಿರುವುದನ್ನು ಪ್ರಶ್ನಿಸಿದರು. ಹಾಜರಾತಿ ಪುಸ್ತಕ ಪರಿಶೀಲಿಸಿದ ಸಚಿವರು, ತಹಸೀಲ್ದಾರ್ ಕವಿತಾ ಅವರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದಿರುವುದನ್ನು ಗಮನಿಸಿದರು. ರಜೆ ಹಾಕಿದ್ದಾರೆಯೇ? ಎಂದು ಅಧಿಕಾರಿಯೊಬ್ಬರನ್ನು ಕೇಳಿದಾಗ, ಫೀಲ್ಡ್ ವಿಸಿಟ್‌ಗೆ ಹೋಗಿದ್ದಾರೆ ಎಂದರು. ಆದರೆ, ಮೂವ್‌ಮೆಂಟ್ ರಿಜಿಸ್ಟರ್‌ನಲ್ಲಿ ನಮೂದಿಸದೆ ಒಒಡಿ ಎಂದು ನಮೂದಿಸಿರುವುದನ್ನು ಸಚಿವರು ಪ್ರಶ್ನೆ ಮಾಡಿದರು.
ಮ್ಯಾನೇಜರ್‌ಗೆ ಏನೂ ಗೊತ್ತಿಲ್ಲ: ನಮ್ಮನ್ನೇ ಗಿರಕಿ ಹೊಡೆಸುವ ನೀವು, ಸಾಮಾನ್ಯ ಜನರಿಗೆ ಏನೆಲ್ಲಾ ಆಟವಾಡುತ್ತೀರಿ. ಮ್ಯಾನೇಜರ್ ಆಗಿರುವ ನಿಮಗೆ ಈ ಕಚೇರಿಯಲ್ಲಿನ ಸಾಮಾನ್ಯ ಸಂಗತಿಗಳು ಗೊತ್ತಿಲ್ಲವೇ? ಎಂದು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿ ಮ್ಯಾನೇಜರ್ ಪಾಂಡುರಂಗ ಅವರನ್ನು ಸಚಿವರು ಇದೇ ವೇಳೆ ತರಾಟೆಗೆ ತೆಗೆದುಕೊಂಡರು.
ಗೈರು ಹಾಜರಿ, ಹಾಜರಾತಿ ಪುಸ್ತಕದಲ್ಲಿ ಮತ್ತೊಬ್ಬರಿಂದ ಸಹಿ: ಹಾಜರಾತಿ ಪುಸ್ತಕ ತೆಗೆದುಕೊಂಡ ಸಚಿವರು, ಒಬ್ಬಬ್ಬ ಸಿಬ್ಬಂದಿಯ ಹೆಸರು ಕೂಗಿ ಹಾಜರಾತಿ ತೆಗೆದುಕೊಂಡರು. ಈ ವೇಳೆ ಅನೇಕ ಸಿಬ್ಬಂದಿ ತಮ್ಮ ಕುರ್ಚಿಯಲ್ಲಿ ಇಲ್ಲದನ್ನು ಗಮನಿಸಿ ಜಿಲ್ಲಾಧಿಕಾರಿಯವರ ಮೂಲಕ ನೋಟ್ ಮಾಡಿಸಿದರು. ಕೆಲಸದ ಮೇಲೆ ಬೇರೆ ಬೇರೆ ಕಚೇರಿಗಳಿಗೆ ಹೋಗಿದ್ದಾರೆ ಎಂದು ಕಾರಣ, ನೆಪಗಳನ್ನು ಹಾಜರಿದ್ದ ಕೆಲ ಸಿಬ್ಬಂದಿ ನೀಡಿದರು. ಗೈರು ಹಾಜರಾಗಿದ್ದ ಸಿಬ್ಬಂದಿಯ ಹಾಜರಾತಿಯನ್ನು ಬೇರೊಬ್ಬರು ಹಾಕಿರುವುದನ್ನು ಸಚಿವ ಕೃಷ್ಣ ಬೈರೇಗೌಡ ಪತ್ತೆ ಮಾಡಿದರು. ಕೆಲಸದ ಮೇಲೆ ಹೊರಗೆ ಹೋದಾಗ ಮೂವ್ಮೆಂಟ್ ರಿಜಿಸ್ಟರ್‌ನಲ್ಲಿ ನಮೂದಿಸಬೇಕಲ್ಲವೇ ಎಂದು ಸಚಿವ ಕೃಷ್ಣ ಬೈರೇಗೌಡ ಕೇಳಿದರು.
ವರದಿ ಪಡೆದು ಕ್ರಮ-ಸಚಿವ: ಎಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಬಗ್ಗೆ ದಿನಾಲೂ ದೂರುಗಳು ಬರುತ್ತವೆ. ಹಣಕ್ಕಾಗಿ ಪೀಡಿಸುವುದು, ಕೆಲಸಕ್ಕಾಗಿ ಅಲೆದಾಡಿಸುವ ಕುರಿತು ದೂರುಗಳಿವೆ. ನಾನು ಬಂದಾಗಲೂ ಎ.ಸಿ ಸೇರಿದಂತೆ ಕೆಲವು ಅಧಿಕಾರಿ ಮತ್ತು ಸಿಬ್ಬಂದಿ ಇರಲಿಲ್ಲ. ಬೆಂಗಳೂರು ಉತ್ತರ ಮತ್ತು ದಕ್ಷಿಣ ಎ.ಸಿ.ಯವರ ನಡವಳಿಕೆ ಬಗ್ಗೆ ಸಾರ್ವಜನಿಕರ ದೂರುಗಳು ಇವೆ. ರೆಕಾರ್ಡ್ ರೂಮ್ ಬಗ್ಗೆ ದೂರುಗಳು ಇವೆ. ಬೇರೆ ಕಡೆ ಹೋಗಿ ಭೇಟಿ ಮಾಡಿದರೆ ಮಾತ್ರ ದಾಖಲೆಗಳು ಸಿಗುತ್ತವೆ ಎಂದು ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಪರಾಮರ್ಶೆ ಮಾಡಿ ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ.
ಸಣ್ಣ ಕೆಲಸಕ್ಕೂ ಜನರನ್ನು ಪದೇ ಪದೇ ಅಲೆದಾಡಿಸುತ್ತಾರೆ. ಕಚೇರಿಯಲ್ಲಿ ಯಾವ ಕೆಲಸಕ್ಕೆ ಯಾರನ್ನು ಭೇಟಿ ಮಾಡುವುದು ಎನ್ನುವ ಮಾಹಿತಿಯೇ ಗೊತ್ತಾಗುವುದಿಲ್ಲ. ಕಚೇರಿಗೆ ಬಂದರೆ ಅಧಿಕಾರಿಗಳು ಇರುವುದಿಲ್ಲ. ಸಾರ್ವಜನಿಕರು ತಮಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲು ಖಾಸಗಿ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಬೇಕು. ಕೆಲಸ ಮಾಡಿಸಿಕೊಳ್ಳಲು ಹಣ ಕೊಡಬೇಕು.
- ಕೃಷ್ಣ ಬೈರೇಗೌಡ, ಕಂದಾಯ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.