
ಡಿಸಿಎಂ ಯಾರ ದುಡ್ಡಲ್ಲಿ ವಾಚ್ ಖರೀದಿಸಿದ್ದಾರೆ ಹೇಳಲಿ?:ಎಚ್‌ಡಿಕೆ
ಮಂಡ್ಯ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾರ ದುಡ್ಡಲ್ಲಿ ವಾಚ್ ಖರೀದಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಡಿಕೆಶಿ ಯವರು 24 ಲಕ್ಷ ರು.ನ ವಾಚ್ ಕಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಬ್ಬರೂ ಎಷ್ಟು ಲಕ್ಷ ಬೆಲೆಯ ವಾಚ್ ಕಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ. ಅದನ್ನು ಹೇಗೆ ಖರೀದಿ ಮಾಡಿದ್ದಾರೆಂಬುದು ಮುಖ್ಯ. ಅವರ ದುಡಿಮೆಯ ದುಡ್ಡಿನಲ್ಲಿ ಖರೀದಿ ಮಾಡಿದ್ದಾರಾ ಹೇಗೆ ಎನ್ನುವುದು ಮುಖ್ಯ. ಅದನ್ನು ಬಹಿರಂಗಪಡಿಸಲಿ ಎಂದು ಹೇಳಿದರು.
ಇದನ್ನೂ ಓದಿ: ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನನ್ನ ದುಡ್ಡಲ್ಲಿ ಎಷ್ಟು ವಾಚ್ ಬೇಕಾದರೂ ಖರೀದಿಸುವೆ: ಡಿಕೆಶಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಹೆಚ್‌ಡಿಕೆ ಮಾತಿಗೆ ತಿರುಗೇಟು ನೀಡಿದ್ದಾರೆ. 'ನನ್ನ ದುಡ್ಡಲ್ಲಿ ಎಷ್ಟು ವಾಚ್ ಬೇಕಾದರೂ ಖರೀದಿಸುವ ಶಕ್ತಿ ನನಗಿದೆ. ಅದು ನನ್ನ ವೈಯಕ್ತಿಕ ವಿಷಯ' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. 'ಡಿಕೆಶಿ ಯಾರ ದುಡ್ಡಲ್ಲಿ ವಾಚ್ ಖರೀದಿಸಿದ್ದಾರೆ ಹೇಳಲಿ' ಎಂಬ ಎಚ್ಚಿಕೆ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, 'ಯಾರು ಪ್ಯಾಂಟ್ ಹಾಕ್ತಾರೆ, ವಾಚ್ ಕಟ್ತಾರೆ, ಕನ್ನಡಕ ಹಾಕ್ಕೋತ್ತಾರೆ ಎಂಬುದನ್ನೆಲ್ಲಾ ಪ್ರಶ್ನೆ ಮಾಡೋಕೆ ನಾನು ಹೋಗಲ್ಲ. ಅದು ಅವರವರ ವೈಯಕ್ತಿಕ ವಿಚಾರ, ಆಸೆ. ನಾನು ಲಕ್ಷ ಮೌಲ್ಯದ ವಾಚ್ ಕಟ್ಟೇನೆ, ಅದು ನನ್ನ ಆಸ್ತಿ, ನನ್ನ ಶ್ರಮ, ನನ್ನ ವೈಯಕ್ತಿಕ ಅಭಿರುಚಿ, ನನ್ನ ದುಡ್ಡಲ್ಲಿ ಎಷ್ಟು ವಾಚ್ ಬೇಕಾದರೂ ಖರೀದಿಸುವೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಲೆಕ್ಕ ಕೊಡ್ತೇನೆ ಎಂದರು.
ಬಿಜೆಪಿಗರ ಬಳಿ ಕೋಟಿ ರು.ವಾಚ್‌ಗಳಿವೆ, ಚೆಕ್ ಮಾಡಿ: ಕಾಶಪ್ಪನವರ
ಮತ್ತೊಂದೆ ಇದೇ ವಿಚಾರಕ್ಕೆ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನಾಯಕರ ಬಳಿ ₹1 ಕೋಟಿ ಹಾಗೂ ₹2 ಕೋಟಿಯ ದುಬಾರಿ ವಾಚ್ ಗಳಿವೆ. ಕೇಂದ್ರ ತನಿಖಾ ಸಂಸ್ಥೆಗಳು ಒಮ್ಮೆಯಾದ್ರೂ ಅವರ ಮನೆ ಚೆಕ್ ಮಾಡಲಿ ಎಂದು ಶಾಸಕ ವಿಜಯಾನಂದ ಕಾಶಪನ ವರ ಸವಾಲು ಹಾಕಿದರು. ಸಿಎಂ ಹಾಗೂ ಡಿಸಿಎಂ ದುಬಾರಿ ವಾಚ್ ಕಟ್ಟಿದ್ದಾರೆ ಎಂಬ ಬಿಜೆಪಿ ಟೀಕೆಗೆ ಶನಿವಾರ ಕೂಡಲ ಸಂಗಮದಲ್ಲಿ ತಿರುಗೇಟು ನೀಡಿದ ಕಾಶಪ್ಪನವರ್ ಹಿಂದೆ ಮಾಜಿ ಡಿಸಿಎಂ ಈಶ್ವರಪ್ಪ ನವರ ಮನೆಯಲ್ಲಿ ಹಣದ ಕೌಂಟಿಂಗ್ ಮಷಿನ್ ಸಿಕ್ಕಿತ್ತು. ಬಿಜೆಪಿ ಅವರ ಬಳಿ 1 ಕೋಟಿ, ₹2 ಕೋಟಿ ಮೊತ್ತದ ವಾಚ್‌ಗಳಿವೆ. ಇದೇನ್ ₹40 ಲಕ್ಷದ ವಾಚ್. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದಾಖಲೆ ಕೊಟ್ಟಿದ್ದೇನೆ ಅಂದಿದ್ದಾರೆ. ಡಿಕ್ಲೇರ್ ಮಾಡಿದರೂ ಈ ರೀತಿ ಹೇಳುವುದು ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ: ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.