
ಹಾಸನ: ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಜೊತೆ ಸೇರಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮನುವಾದಿಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಬೇಕು ಎಂಬ ಕುಮಾರಸ್ವಾಮಿ ಅವರ ಸಲಹೆಗೆ ಕಿಡಿಕಾರಿದ್ದ ಸಿದ್ದರಾಮಯ್ಯ, ಬಿಜೆಪಿ ಜೊತೆ ಸೇರಿದ ಮೇಲೆ ಕುಮಾರಸ್ವಾಮಿಯವರು ಮನು ವಾದಿಯಾಗಿದ್ದಾರೆ ಎಂದು ಟೀಕಿಸಿದರು. ಅಹಿಂದಗೆ ಸಿದ್ದರಾಮಯ್ಯ ಕೊಡುಗೆ ಏನು? ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ರೈತರಿಗೆ ಮಣ್ಣಿನ ಮಗ (ಎಚ್.ಡಿ. ದೇವೇಗೌಡ)ನ ಪುತ್ರ (ಎಚ್‌ಡಿಕೆ) ಕೊಡುಗೆ ಏನು?' ಎಂದು ಪ್ರಶ್ನಿಸಿದರು. 'ನಮ್ಮ ಸರ್ಕಾರ ಭಾಗ್ಯಗಳನ್ನ ರೂಪಿಸಿರುವುದು ಬಡವರು. ಹೆಣ್ಣು ಮಕ್ಕಳು, ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಕಾರ್ಮಿಕರಿಗಾಗಿ ಇವೆಲ್ಲಾ ಅಹಿಂದಪರ ಅಲ್ವಾ?. ಕೇಂದ್ರ ಸಚಿವರಾದವರು ಅದೇ ರೀತಿ ಮಾತನಾಡಬೇಕು. ಅವರು ರೈತನ ಮಗ ಅಲ್ಲವೆ?. ಮಂಡ್ಯದ ರೈತರಿಗೆ ಏನು ಕೊಡುಗೆ ಕೊಟ್ಟಿದ್ದಾರೆ?. ನಿನ್ನ ಫೈನಾನ್ಸ್, ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಕೇಂದ್ರ ಜಿಎಸ್ಟಿ ಕಡಿಮೆ ಮಾಡಿರುವುದರಿಂದ ರಾಜ್ಯಕ್ಕೆ 12 ಸಾವಿರ ಕೋಟಿ ರು.ನಷ್ಟ ಆಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವರಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರಾ?' ಎಂದರು. 'ಟೀಕೆ ಮಾಡುವುದಕ್ಕೋಸ್ಕರ ಮಾತನಾಡಬಾರದು. ಗ್ಯಾರಂಟಿಗಳಿಗೆ 1.08 ಲಕ್ಷ ಕೋಟಿ ರು. ಖರ್ಚು ಮಾಡಿದ್ದೇವೆ. ಬೇಕಾದರೆ ಪರಿಶೀಲಿಸಲಿ' ಎಂದರು.
ಮಂಡ್ಯ: ಇತ್ತ ಮಂಡ್ಯದಲ್ಲಿ ಮಾತನಾಡಿದ ಹೆಚ್ ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ಅವರ ಎಲ್ಲಾ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಮಕ್ಕಳಿಗೆ ಸಂಸ್ಕಾರಕಲಿಸುವುದು ಸರ್ಕಾರಗಳ ಕರ್ತವ್ಯ. ಅದಕ್ಕಾಗಿ ಭಗವದ್ಗೀತೆಯನ್ನು ಶಾಲಾಪಠ್ಯದಲ್ಲಿ ಸೇರಿಸುವಂತೆ ಹೇಳಿದ್ದೇನೆ. ಮಕ್ಕಳನ್ನು ಮತಾಂತರ ಮಾಡುವಂತೆ ಹೇಳಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿಯವರು ಬಿಜೆಪಿ ಜೊತೆ ಸೇರಿ ಮನುವಾದಿಯಾಗಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ಪ್ರತಿಕ್ರಿಯಿಸಿ, 'ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ, ಕಳೆದ 10 ವರ್ಷದಿಂದ ಅಹಿಂದ ಹೆಸರಿನಲ್ಲಿ ಮಜಾ ಮಾಡಿದ್ದಾರೆ. ಸಿದ್ದರಾಮಯ್ಯರಿಂದ ಅಹಿಂದಕ್ಕೆ ಸಿಕ್ಕ ಕೊಡುಗೆ ಏನು?, ಅಹಿಂದ ಸಮಸ್ಯೆಯನ್ನು ಎಷ್ಟು ಬಗೆಹರಿಸಿದ್ದಾರೆ?. ಅಹಿಂದದಲ್ಲಿ ಹಲವು ಸಣ್ಣ ಜಾತಿಗಳಿವೆ. ಆ ಸಮಾಜಗಳಿಗೆ ಅವರ ಕೊಡುಗೆ ಏನು?, ಯಾರಿಗೆ ಆದ್ಯತೆ ಕೊಟ್ಟಿದ್ದಾರೆ? ಎಂದು ಪ್ರಶ್ನೆಗಳ ಸುರಿಮಳೆಗೈದರು.
ಸಿಎಂ ಆಗಿ ಸಿದ್ದರಾಮಯ್ಯನವರು ಮಕ್ಕಳ ಬದುಕು, ಸಮಾಜವನ್ನು ಯಾವ ರೀತಿ ಬೆಳೆಸುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ರಾಜ್ಯದಲ್ಲಿ ಕೊಲೆ, ಅತ್ಯಾ*ಚಾರ, ಅಪರಾಧ ಕೃತ್ಯಗಳು ಹೆಚ್ಚುತ್ತಿದೆ. ಕೆಟ್ಟ ವಾತಾವರಣ ಸೃಷ್ಟಿಯಾಗಿದೆ. ಅದಕ್ಕಾಗಿ ಮಕ್ಕಳಿಗೆ ಬದುಕಿನ ನಿಯಮಾವಳಿ ಜೊತೆ ಸಂಸ್ಕಾರ ಕಲಿಸಬೇಕಿದೆ' ಎಂದರು.
'ಈಗಿನ ಸಮಾಜ ವೇಗವಾಗಿ ಬೆಳೆಯುತ್ತಿದೆ. ತಾಯಿ ಹೃದಯ ಎಂಬುದು ಇಲ್ಲ. ನಾನು ಚಿಕ್ಕವನಾಗಿದ್ದಾಗ ನೋಡಿದ ಸಮಾಜ ಈಗಿಲ್ಲ, ಈಗಿನ ಸಂಬಂಧ, ಸಮಾಜ ಸರಿಪಡಿಸುವ ನಿಟ್ಟಿನಲ್ಲಿ ಭಗವದ್ಗೀತೆ ಕಲಿಸುವುದಕ್ಕೆ ಹೇಳಿದ್ದೇನೆ. ಆದರೆ, ಸಿದ್ದರಾಮಯ್ಯ ತಲೆಯಲ್ಲಿರುವುದು ಸಮಾಜದಲ್ಲಿ ಘರ್ಷಣೆ ಮಾಡುವುದಷ್ಟೇ' ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.