ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಭರಾಟೆ ಮುಗಿದು ಗುರುವಾರ ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಕಾರ್ಯಕರ್ತರೊಡನೆ ಸೋಲುಗೆಲುವಿನ ಲೆಕ್ಕಾಚಾರದಲ್ಲಿ ಮಗ್ನರಾದರು.
ನಂಜನಗೂಡು (ಮೇ.12): ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಭರಾಟೆ ಮುಗಿದು ಗುರುವಾರ ಬಿಜೆಪಿ ಅಭ್ಯರ್ಥಿ ಬಿ. ಹರ್ಷವರ್ಧನ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಕಾರ್ಯಕರ್ತರೊಡನೆ ಸೋಲುಗೆಲುವಿನ ಲೆಕ್ಕಾಚಾರದಲ್ಲಿ ಮಗ್ನರಾದರು. ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಬಿ. ಹರ್ಷವರ್ಧನ್ ಅವರು ತಮ್ಮ ಮೈಸೂರಿನ ನಿವಾಸದಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಪ್ರತಿ ಮತಗಟ್ಟೆಯಲ್ಲಿ ನಡೆದಿರುವ ಶೇಕಡವಾರು ಮತಗಳನ್ನು ಪರಿಶೀಲಿಸಿಕೊಂಡು ಪ್ರತಿ ಮತಗಟ್ಟೆಯಲ್ಲಿ ಇಂತಿಷ್ಟು ಮತಗಳು ನಮಗೆ ಸಿಗಬಹುದು ಎಂಬ ಲೆಕ್ಕಾಚಾರದ ಚರ್ಚೆಯಲ್ಲಿ ತೊಡಗಿಕೊಂಡಿದ್ದರು.
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಈ ಬಾರಿ ನಾನು ನನ್ನ ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದೇನೆ. ಕ್ಷೇತ್ರದಲ್ಲಿ 823 ಕೋಟಿಗೂ ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ಕಾರಣದಿಂದಾಗಿ ಮತದಾರರಿಗೆ ಮನವರಿಕೆ ಮಾಡಿ ಮರುಆಯ್ಕೆ ಮಾಡುವಂತೆ ಮನವೊಲಿಸಲಾಗಿತ್ತು. ಕ್ಷೇತ್ರದಲ್ಲಿ ಎಲ್ಲೆಡೆ ಅನುಕಂಪವನ್ನು ಮೀರಿ ಅಭಿವೃದ್ದಿಯಿಂದಾಗಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ಪಡೆಯಲು ಯಶಸ್ವಿಯಾಗಿದ್ದೇವೆ, ಆದ್ದರಿಂದ ನನ್ನ ಅಂದಾಜಿನ ಪ್ರಕಾರ ಈ ಬಾರಿ ಸುಮಾರು 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಬಹುದು ಎಂಬ ವಿಶ್ವಾಸವಿದೆ ಎಂದರು.
'ಮೈತ್ರಿಗೆ ಸಿದ್ಧ', ಸರ್ಕಾರ ಮಾಡೋದಾದ್ರೆ ಕಂಡಿಷನ್ಸ್ ಅಪ್ಲೈ: ಸಿಂಗಾಪುರದಲ್ಲಿ ಎಚ್‌ಡಿಕೆ ರಾಜಕೀಯ ಲೆಕ್ಕಾಚಾರ
ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಕ್ಷೇತ್ರದಲ್ಲಿ ನನ್ನ ತಂದೆ 2 ಬಾರಿ ಸಂಸದರಾಗಿ ಮಾಡಲಾಗಿದ್ದ ಅಭಿವೃದ್ಧಿ ಕಾರ್ಯಗಳಿಂದ ಮತ್ತು ನನ್ನ ತಂದೆಯು ಬಿಟ್ಟುಹೋಗಿದ್ದ ಅಪಾರ ಜನಸಂಖ್ಯೆಯ ಅಭಿಮಾನಿಗಳು, ಮಹಿಳೆಯರು, ತಾಯಂದಿರು ನನ್ನನ್ನು ಕೈ ಹಿಡಿದಿದ್ದಾರೆ. ಎಲ್ಲ ವರ್ಗದ ಜನರೂ ಕೂಡ ಪಕ್ಷಾತೀತವಾಗಿ ನನಗೆ ಬೆಂಬಲ ನೀಡಿ ಹೆಚ್ಚಿನ ಮತ ನೀಡಿರುವ ಕಾರಣ ಈ ಬಾರಿ ನನ್ನ ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈಕಮಾಂಡ್ ನನಗೆ ಸಿಎಂ ಸ್ಥಾನ ನೀಡಿದರೆ ತಿರಸ್ಕರಿಸಲಾರೆ: ಡಾ.ಜಿ.ಪರಮೇಶ್ವರ್
ಹೆಚ್ಚಿನ ಬೆಟ್ಟಿಂಗ್: ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದ ಕಾರಣದಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಭರ್ಜರಿ ಬೆಟ್ಟಿಂಗ್ ನಡೆದಿರುವ ಬಗ್ಗೆ ವರದಿಯಾಗಿದೆ. ಪಟ್ಟಣದ ಟೀ ಕ್ಯಾಂಟೀನ್, ಬೇಕರಿಗಳಲ್ಲಿ ಮಾತುಕತೆಯ ಚರ್ಚೆಯಲ್ಲಿ ತೊಡಗಿಕೊಂಡಿದ್ದು, ಕಾರ್ಯಕರ್ತರು ಲಕ್ಷಗಟ್ಟಲೆ ಹಣ, ಜಮೀನುಗಳನ್ನು ಬಾಜಿಯಲ್ಲಿ ಇಟ್ಟಿರುವ ಬಗ್ಗೆ ಮಾಹಿತಿ ಒದಗಿಬಂದಿದೆ. ತೀವ್ರ ಚರ್ಚೆಗೆ ಒಳಗಾಗಿರುವ ನಂಜನಗೂಡು ಕ್ಷೇತ್ರದಲ್ಲಿ ಅನುಕಂಪ ಕೈಹಿಡಿದು ದರ್ಶನ್ ಧ್ರುವ ಅವರಿಗೆ ವಿಜಯಲಕ್ಷ್ಮಿ ಕೈ ಹಿಡಿಯುವಳೋ? ಅಥವಾ ಹರ್ಷವರ್ಧನ್ ಅವರ ಅಭಿವೃದ್ದಿಗೆ ಜಯ ದೊರಕುವುದೋ ವಿಜಯಲಕ್ಷ್ಮಿ ಯಾರಿಗೆ ಒಲಿಯುವಳು ಎಂಬುದನ್ನು ಕಾದು ನೋಡಬೇಕಿದೆ.