ಸಂಪುಟ ವಿಸ್ತರಣೆ ಮತ್ತೆ ನೆನೆಗುದಿಗೆ: ಜಿಜ್ಞಾಸೆಯಲ್ಲೇ ದೆಹಲಿಯಿಂದ ವಾಪಸಾದ ಸಿಎಂ ಬೊಮ್ಮಾಯಿ

By Kannadaprabha NewsFirst Published Jan 18, 2023, 3:38 AM IST
Highlights

ಬಿಜೆಪಿ ಕಾರ್ಯಕಾರಿಣಿಯಲ್ಲಿ ನಡೆಯದ ಮಾತುಕತೆ, ವರಿಷ್ಠರ ಜತೆ ಸಂಪುಟ ಚರ್ಚೆಗೆ ಸಿಗದ ಅವಕಾಶ, ಅನಿಶ್ಚಿತತೆಯಲ್ಲೇ ವಾಪಸಾದ ಸಿಎಂ ಬೊಮ್ಮಾಯಿ.  

ಬೆಂಗಳೂರು(ಜ.18):  ಸುದೀರ್ಘ ಅವಧಿಯಿಂದ ನೆನೆಗುದಿಗೆ ಬಿದ್ದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಇನ್ನೂ ಅನಿಶ್ಚಿತವಾಗಿಯೇ ಇದೆ. ಎರಡು ದಿನಗಳ ಕಾಲ ದೆಹಲಿಯಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ವೇಳೆ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರು ಪಾಲ್ಗೊಂಡಿದ್ದರೂ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದು ಬಂದಿದೆ.

ಹಾಗಂತ ಸಂಪುಟ ವಿಸ್ತರಣೆ ಆಗುವುದೇ ಇಲ್ಲವೇ ಎಂಬ ಪ್ರಶ್ನೆಗೆ ಬಿಜೆಪಿ ನಾಯಕರ ಬಳಿ ಸ್ಪಷ್ಟ ಉತ್ತರವಿಲ್ಲ. ವಿಸ್ತರಣೆ ಆಗಬಹುದು ಅಥವಾ ಆಗದೆಯೂ ಇರಬಹುದು ಎಂಬ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಹ ಮಾತು ಕೇಳಿಬರುತ್ತದೆ.
ಮುಖ್ಯಮಂತ್ರಿ ಸೇರಿದಂತೆ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಎರಡು ದಿನಗಳ ಕಾಲ ಮುಖಾಮುಖಿ ಆಗುವುದರಿಂದ ಸಹಜವಾಗಿಯೇ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಿ ನಿರ್ಧಾರ ಹೊರಬೀಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹತ್ತಾರು ಪ್ರಮುಖ ವಿಷಯಗಳು ಚರ್ಚೆ ನಡೆಯಬೇಕಾಗಿದ್ದರಿಂದ ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಗೆದ್ರೆ ಬಿಜೆಪಿ ಬಿ-ರಿಪೋರ್ಟ್‌ಗಳ ತನಿಖೆ: ಡಿ.ಕೆ.ಶಿವಕುಮಾರ್‌

ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಕೇವಲ ಮೂರು ತಿಂಗಳು ಬಾಕಿ ಉಳಿದಿರುವಾಗ ಈಗ ಸಂಪುಟ ವಿಸ್ತರಣೆ ಮಾಡಿ ಇಲ್ಲದ ಗೊಂದಲವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಅಭಿಪ್ರಾಯವೂ ಪಕ್ಷದ ಹಲವು ನಾಯಕರಲ್ಲಿದೆ. ಈ ಜಿಜ್ಞಾಸೆಯಲ್ಲೇ ದೆಹಲಿಯಿಂದ ವಾಪಸಾಗಿರುವ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಚುನಾವಣೆಯ ಸಿದ್ಧತೆಯತ್ತ ಗಮನಹರಿಸಲು ಮುಂದಾಗಿದ್ದಾರೆ.

ಈ ನಡುವೆ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಯಾವುದೇ ಶಾಸಕರೂ ಆಸೆ ಇಟ್ಟುಕೊಂಡಿಲ್ಲ. ಚುನಾವಣೆ ಸಮೀಪಿಸಿದ ಈ ಹೊತ್ತಿನಲ್ಲಿ ಕ್ಷೇತ್ರದತ್ತ ಗಮನ ಹರಿಸಬೇಕಾಗಿರುವುದು ಮುಖ್ಯವಾಗಿರುವುದರಿಂದ ಸಚಿವ ಸ್ಥಾನ ಬೇಡ ಎಂಬ ಭಾವನೆಯನ್ನೇ ಅನೇಕರು ಹೊಂದಿದ್ದಾರೆ. ತಮ್ಮ ವಿರುದ್ಧದ ಆರೋಪಗಳಿಂದ ರಾಜೀನಾಮೆ ನೀಡಿ ಸಂಪುಟದಿಂದ ಹೊರಬಂದಿದ್ದ ಕೆ.ಎಸ್‌.ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಅವರಿಬ್ಬರು ಮಾತ್ರ ಮತ್ತೊಮ್ಮೆ ಸಚಿವ ಸ್ಥಾನ ಅಲಂಕರಿಸುವ ಮೂಲಕ ತಮ್ಮ ಮೇಲಿನ ಕಳಂಕ ತೊಳೆದುಕೊಳ್ಳಲು ಬಯಸಿದ್ದಾರೆ.

click me!