ವಿಜಯೇಂದ್ರ ಪಟ್ಟಾಭಿಷೇಕ: ಮತ್ತೊಮ್ಮೆ ಬಿಎಸ್‌ವೈ ಆಶೀರ್ವಾದ ಪಡೆದುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ!

By Kannadaprabha News  |  First Published Nov 16, 2023, 6:23 AM IST

ಪಕ್ಷಕ್ಕೆ ಹೊಸ ಚೈತನ್ಯ ನೀಡುವ ಸಂಕಲ್ಪ ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಪ್ರತಿಜ್ಞೆಯೊಂದಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ.ವಿಜಯೇಂದ್ರ ಅಧಿಕೃತವಾಗಿ ಪದಗ್ರಹಣ ಮಾಡಿದ್ದಾರೆ. 


ಬೆಂಗಳೂರು (ನ.16): ಪಕ್ಷಕ್ಕೆ ಹೊಸ ಚೈತನ್ಯ ನೀಡುವ ಸಂಕಲ್ಪ ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಪ್ರತಿಜ್ಞೆಯೊಂದಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ.ವಿಜಯೇಂದ್ರ ಅಧಿಕೃತವಾಗಿ ಪದಗ್ರಹಣ ಮಾಡಿದ್ದಾರೆ. ಇನ್ನು ವಿಜಯೇಂದ್ರರ ಸವಾಲಿನ ಕೆಲಸ ಆರಂಭವಾಗಲಿದ್ದು, ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪುಟಿದೇಳುವಂತೆ ಮಾಡುವ ಹೊಣೆಗಾರಿಕೆ ವಹಿಸಲಾಗಿದೆ. ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ವಿಶೇಷ ಪೂಜೆ ಬಳಿಕ ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ನಿಕಟಪೂರ್ವ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ನೂತನ ಅಧ್ಯಕ್ಷ ವಿಜಯೇಂದ್ರ ಅವರಿಗೆ ಕೇಸರಿ ಶಾಲು ಹೊದಿಸಿ ಸನ್ಮಾನಿಸಿದರು. 

ಈ ವೇಳೆ ರಾಜ್ಯಾಧ್ಯಕ್ಷರ ಆಸನದಲ್ಲಿ ಕುಳಿತು ಸಹಿ ಮಾಡಿದ ವಿಜಯೇಂದ್ರ ಅಧಿಕೃತವಾಗಿ ಮುದ್ರೆ ಒತ್ತಿದರು. ಬಳಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರ್ಷೋದ್ಗಾರಗಳ ನಡುವೆ ಜವಾಬ್ದಾರಿ ವಹಿಸಿಕೊಂಡರು. ಬಿಜೆಪಿ ಧ್ವಜವನ್ನು ನಳಿನ್‌ ಕುಮಾರ್‌ ಕಟೀಲ್‌ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ವಿಧ್ಯುಕ್ತವಾಗಿ ಬಿಟ್ಟುಕೊಟ್ಟು ಶುಭ ಹಾರೈಸಿದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್‌.ಈಶ್ವರಪ್ಪ, ಮುರುಗೇಶ್‌ ನಿರಾಣಿ, ಬಿ.ಶ್ರೀರಾಮುಲು ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುವ ಮೂಲಕ ವಿಜಯೇಂದ್ರ ಅವರು ಹೊಸ ಪರ್ವ ಆರಂಭಿಸಿದರು.

Tap to resize

Latest Videos

ವಿಜಯೇಂದ್ರ ಕಾರ್ಯನಿರ್ವಹಣೆಯಿಂದ ಬಿಜೆಪಿಗೆ ಲಾಭ: ಜೆ.ಪಿ.ನಡ್ಡಾ

ವಿಜಯೇಂದ್ರ ಮುಂದೆ ಸವಾಲು: 47ರ ಹರೆಯದ ಚಿಕ್ಕ ವಯಸ್ಸಿನಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪುಟಿದೇಳುವಂತೆ ಮಾಡಲು ವಿಜಯೇಂದ್ರ ಅವರಿಗೆ ಈ ಸ್ಥಾನ ನೀಡಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಹೋಮ-ಹವನ: ಅಧಿಕಾರ ಸ್ವೀಕಾರಕ್ಕೂ ಮುನ್ನ ಬಿಜೆಪಿ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಪೂಜೆಯಲ್ಲಿ ಪಕ್ಷದ ಹಲವು ಮುಖಂಡರು ಭಾಗಿಯಾಗಿದ್ದರು. ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸಿದ ನಂತರ ವಿಜಯೇಂದ್ರ ಅವರು, ಭಾರತ ಮಾತೆ, ಪಕ್ಷದ ಸಂಸ್ಥಾಪಕ ಜಗನ್ನಾಥ ರಾವ್ ಜೋಶಿ ಮತ್ತಿತರ ಪ್ರಮುಖರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕಚೇರಿಗೆ ಬರುವ ಮೊದಲು ವಿಜಯೇಂದ್ರ ಅವರು ಡಾಲರ್ಸ್‌ ಕಾಲೋನಿಯ ಧವಳಗಿರಿ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದೆ ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು. ಬಳಿಕ ಬಿಜೆಪಿ ಕಚೇರಿಗೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಬಿಜೆಪಿ ಕಚೇರಿಯಲ್ಲಿ ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದ ಬಳಿಕವೂ ವಿಜಯೇಂದ್ರ ಅವರು ತಂದೆ ಯಡಿಯೂರಪ್ಪ ಅವರಿಂದ ಮತ್ತೊಮ್ಮೆ ಆಶೀರ್ವಾದ ಪಡೆದುಕೊಂಡರು.

ವಿಜಯೇಂದ್ರ ಆಯ್ಕೆಯಿಂದ ಹಿರಿಯ ಬಿಜೆಪಿಗರಿಗೆ ಬೇಸರ: ಸಚಿವ ಶಿವರಾಜ ತಂಗಡಗಿ

ಸೇಬಿನ ಹೂವಿನ ಹಾರ: ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಹೊರಗೆ ಬಂದ ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಹೂಗುಚ್ಛ ನೀಡಿ ಅಭಿನಂದನೆಗಳ ಸುರಿಮಳೆಗೈದರು. ಅಲ್ಲದೇ, ವಿಶೇಷ ಪೇಟ ಹಾಕಿ ಸೇಬಿನಿಂದ ಮಾಡಿದ ಬೃಹತ್‌ ಹಾರ ಹಾಕಿ ಸನ್ಮಾನಿಸಿದರು. ಈ ಮೂಲಕ ಕಾರ್ಯಕರ್ತರು ವಿಜಯೇಂದ್ರ ಮೇಲಿನ ಅಭಿಮಾನ ಮೆರೆದರು. ಕಳೆದ ಶುಕ್ರವಾರ ನ.10ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯೇಂದ್ರ ಅವರನ್ನು ಕರ್ನಾಟಕ ಘಟಕದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಸುಮಾರು ಆರು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ.

click me!