
ಬೆಂಗಳೂರು (ಆ.08): ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಘಟನೆ, ಧರ್ಮಸ್ಥಳದಲ್ಲಿ ಗಲಾಟೆ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಹಿತಕರ ಘಟನೆಗಳ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಘಟನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ಸಣ್ಣ ಘಟನೆ ಎಂದು ಹೇಳಿ ನಿರ್ಲಕ್ಷಿಸಿದ್ದರು.
ಆದರೆ, ಈಗ ಒಂದರ ನಂತರ ಮತ್ತೊಂದು ಘಟನೆಗಳು ನಡೆಯುತ್ತಲೇ ಇವೆ. ಇಂತಹ ಘಟನೆಗಳಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಕುರಿತು ಕೂಡಲೇ ಗೃಹ ಸಚಿವರು ಗಮನ ಹರಿಸಬೇಕು ಎಂದರು. ಧರ್ಮಸ್ಥಳದ ವಿಚಾರವಾಗಿ ಎಸ್‌ಐಟಿ ರಚನೆಯನ್ನು ಸ್ವಾಗತಿಸಿ, ಪಾರದರ್ಶಕ ತನಿಖೆಗೆ ಕೋರಲಾಗಿತ್ತು. ಆದರೆ, ಪತ್ರಕರ್ತರ ಮೇಲೆ ದಾಳಿ ನಡೆದಿರುವುದು ಖಂಡನೀಯ. ದಾಳಿಕೋರರ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಸರ್ಕಾರದಿಂದ ದಲಿತರ ಹಣ ದುರ್ಬಳಕೆ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕಳೆದ ಎರಡೂವರೆ ವರ್ಷಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ರಾಜ್ಯದಲ್ಲಿ ಶೋಷಿತ ಸಮುದಾಯವನ್ನು ಮತಬ್ಯಾಂಕಾಗಿ ಬಳಸಿಕೊಳ್ಳುತ್ತಿದೆ. ಆ ಸಮುದಾಯಗಳಿಗೆ ಹಿಂದಿನಿಂದಲೂ ವಂಚಿಸುತ್ತಾ ಬಂದಿದೆ ಎಂದು ಕಿಡಿಕಾರಿದರು. ಶೋಷಿತ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಿಚಾರಗಳಿಗೆ ಬಳಸಿಕೊಳ್ಳಬೇಕಾದ ಅನುದಾನವನ್ನು ಗ್ಯಾರಂಟಿಗಳಿಗೆ ವರ್ಗಾಯಿಸಿ ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಬಿಜೆಪಿ ಇದರ ವಿರುದ್ಧ ನಿರಂತರ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತಾ ಬಂದಿದೆ ಎಂದರು.
11,896 ಕೋಟಿ ರು. ಅನುದಾನ ವರ್ಗಾವಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ಶೋಷಿತ ಸಮುದಾಯಗಳನ್ನು ವಂಚಿಸುವ ಕಾರ್ಯ ಮುಂದುವರೆಸಿದ್ದಾರೆ. 2025-26ರಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 11,896 ಕೋಟಿ ರು. ಅನುದಾನವನ್ನು ಮತ್ತೊಮ್ಮೆ ಇತರ ಕಾರ್ಯಕ್ರಮಗಳಿಗೆ ವರ್ಗಾಯಿಸಿದ್ದಾರೆ. ಈ ಮೂಲಕ ಸಮುದಾಯಗಳಿಗೆ ವಂಚಿಸುತ್ತಿದ್ದಾರೆ. ಈ ಕುರಿತು ಸದನದಲ್ಲಿ ಚರ್ಚೆ ಮಾಡಲಿದ್ದೇವೆ. ಸರ್ಕಾರದ ಕಿವಿ ಹಿಂಡುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.