
ಬೆಂಗಳೂರು, (ಮೇ.24): ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಘೋಷಿಸಿದ್ದಾರೆ. ಆದ್ರೆ, ಕೊನೆ ಕ್ಷಣದಲ್ಲಿ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ಕೈತಪ್ಪಿದೆ. ಇದರಿಂದ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ವಿಜಯೇಂದ್ರ ಅವರು ತಮ್ಮ ಅಭಿಮಾನಿಗಳಿಗೆ ಪತ್ರದ ಮೂಲಕ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಪಕ್ಷಕ್ಕಾಗಿ ದುಡಿಯೋಣ, ಬೆಂಬಲಿಗರು ಮತ್ತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ ಎಂದಿದ್ದಾರೆ.
ಈ ಬಗ್ಗೆ ಮನವಿ ಮಾಡಿರುವ ಬಿ.ವೈ.ವಿಜಯೇಂದ್ರ, ಪಕ್ಷ ಗುರುತಿಸಿದವರಿಗೆ ಟಿಕೆಟ್ ನೀಡಿದೆ, ನಾವು ಪಕ್ಷದ ಸಿಪಾಯಿಗಳು, ಪಕ್ಷಕ್ಕಾಗಿ ದುಡಿಯೋಣ. ಯಾರೂ ಬೆಂಬಲಿಗರು ಮತ್ತು ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸುವುದು ಟೀಕೆ ಮಾಡುವುದು ಸರಿಯಾದ ಕ್ರಮವಲ್ಲ. ಪಕ್ಷ ಮುಂದಿನ ದಿನಗಳಲ್ಲಿ ತಮ್ಮನ್ನು ಗುರುತಿಸಲಿದೆ ಎಂದು ಬೆಂಬಲಿಗರಿಗೆ ವಿಜಯೇಂದ್ರ ಮನವಿ ಮಾಡಿದ್ದಾರೆ.
ಕೊನೆ ಕ್ಷಣದಲ್ಲಿ ವಿಜಯೇಂದ್ರಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್
ಘಟಾನುಘಟಿ ನಾಯಕರಿಗೆ ಶಾಕ್
ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಘೋಷಿಸಿದ್ದು, ಘಟಾನುಘಟಿ ನಾಯಕರ ಮಧ್ಯೆ ಅಚ್ಚರಿ ಹೆಸರುಗಳನ್ನ ಹೈಕಮಾಂಡ್ ಅಂತಿಮಗೊಳಿಸಿದೆ. ಇನ್ನು ಪರಿಷತ್ ಪ್ರವೇಶ ಪಡೆದು ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕೆಂಬ ಉತ್ಸಾಹದಲ್ಲಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹೈಕಮಾಂಡ್ ನಿರಾಸೆ ಮೂಡಿಸಿದೆ.
ಹೌದು... ನಾಲ್ಕು ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಹೈಕಮಾಂಡ್‌ಗೆ ರವಾನಿಸಿತ್ತು. ರಾಜ್ಯ ಬಿಜೆಪಿ ಪಟ್ಟಿಯಲ್ಲಿ ಬಿವೈ ವಿಜಯೇಂದ್ರ ಅವರ ಹೆಸರು ಶಿಫಾರಸ್ಸು ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಪಕ್ಕಾ ಎನ್ನಲಾಗಿತ್ತು. ಆದ್ರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡಲು ನಿರಾಕರಿಸಿದೆ.
ಈ ಮೂಲಕ ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಹೊರಟಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಆಶಯಕ್ಕೆ ಹೈಕಮಾಂಡ್ ತಣ್ಣೀರೆರಚಿದೆ. ವಿಜಯೇಂದ್ರಗೆ ಟಿಕೆಟ್ ದೊರಕಲಿದೆ ಎಂದೇ ಭಾವಿಸಿದ್ದ ಎಲ್ಲ ನಾಯಕರಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ವಿಜಯೇಂದ್ರ ಆಸೆಗೆ ತಣ್ಣೀರು
ಯೆಸ್..ರಾಜ್ಯ ಬಿಜೆಪಿ ಕೋರ್ ಕಮಿಟಿ ತಮ್ಮ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ಫುಲ್ ಖುಷ್ ಆಗಿದ್ದರು, ಅಲ್ಲದೇ ಖುದ್ದು ದೆಹಲಿಗೆ ತೆರಳಿ ಕೇಂದ್ರ ನಾಯಕರನ್ನ ಭೇಟಿ ಮಾಡಿ ನಗು ಮುಖದಲ್ಲೇ ವಾಪಸ್ ಆಗಿದ್ದರು. ಇದರಿಂದ ಅವರಿಗೆ ಟಿಕೆಟ್ ಫಿಕ್ಸ್ ಅಂತಾಲೇ ಅವರ ಅಭಿಮಾನಿಗಳು ಫುಲ್ ಖಷಿಯಾಗಿದ್ದರು. ಅಲ್ಲದೇ ಪರಿಷತ್‌ಗೆ ಆಯ್ಕೆ ಮೂಲಕ ಬೊಮ್ಮಾಯಿ ಸಂಪುಟ ಸೇರುತ್ತಾರೆ ಎನ್ನಲಾಗಿತ್ತು. ಇದು ವಿಜಯೇಂದ್ರ ಆಸೆ ಕೂಡ ಆಗಿತ್ತು. ಆದ್ರೆ, ಅಂತಿಮವಾಗಿ ಎಲ್ಲಾ ಉಲ್ಟಾ ಆಗಿದ್ದು, ವಿಜಯೇಂದ್ರ ಆಸೆಗೆ ಹೈಕಮಾಂಡ್ ತಣ್ಣೀರು ಸುರಿದಿದೆ. ಇದರಿಂದ ವಿಜಯೇಂದ್ರ ಹಾಗೂ ಅವರ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.