ಪಕ್ಷದ ನಾಯಕರ ಇಂತಹ ಪ್ರತ್ಯೇಕ ಸಭೆಗಳು ನನಗೆ ಹೊಸದೇನಲ್ಲ. ಸಮಸ್ಯೆಗೆ ಹೆದರಿ ಓಡಿಹೋಗಲ್ಲ. ಯಡಿಯೂರಪ್ಪ ಅವರು ಎದುರಿಸಿದ ಅನೇಕ ಸವಾಲುಗಳನ್ನು ನೋಡಿ ಬೆಳೆದಿದ್ದೇನೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ - ಬಿವೈ ವಿಜಯೇಂದ್ರ
ದಾವಣಗೆರೆ (ಸೆ.30): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ತಿರುಗಿಬಿದ್ದಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಿಜೆಪಿ ಅತೃಪ್ತರ ಬಣ ಬೆಂಗಳೂರು, ಬೆಳಗಾವಿ ಬಳಿಕ ಇದೀಗ ದಾವಣಗೆರೆಯಲ್ಲಿ ಗೌಪ್ಯ ಸಭೆ ನಡೆಸಿದೆ. ಭಾನುವಾರ ಸುಮಾರು ನಾಲ್ಕು ತಾಸು ನಡೆದ ಈ ಸಭೆಯಲ್ಲಿ ರಾಜಕೀಯ ಚರ್ಚೆಯಾಗಿಲ್ಲ ಎಂದು ಯತ್ನಾಳ ಸಮುಜಾಯಿಶಿ ನೀಡಿದರೂ ಉಪಸ್ಥಿತರಿದ್ದವರೆಲ್ಲ ರಾಜ್ಯ ನಾಯಕತ್ವದ ವಿರುದ್ಧ ಮುನಿಸಿಕೊಂಡವರೇ ಆಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಬೆಳಗ್ಗೆ ಸುಮಾರು 9.30ರಿಂದ 1.30ರವರೆಗೆ ನಡೆದ ಈ ಸಭೆಯಲ್ಲಿ ಯತ್ನಾಳ್ ಅವರಲ್ಲದೆ ಮಾಜಿ ಸಂಸದರಾದ ಪ್ರತಾಪ ಸಿಂಹ, ಡಾ.ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ.ಹರೀಶ, ದಾವಣಗೆರೆ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಕೆಲ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.
undefined
ಬಿಜೆಪಿಯಿಂದ ಮುಂದಿನ ಮುಖ್ಯಮಂತ್ರಿ ನಾನೇ: ಯತ್ನಾಳ್
ದಾವಣಗೆರೆಯಲ್ಲಿ ಇತ್ತೀಚೆಗೆ ಗಣೇಶ ಮೆರವಣಿಗೆ ವೇಳೆ ಉಂಟಾದ ಘರ್ಷಣೆ ಸಂಬಂಧ ಕೆಲ ಹಿಂದುಗಳ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಹಾಕಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಧೈರ್ಯ ತುಂಬಲು ಬಂದಿದ್ದೇವೆಂದು ಯತ್ನಾಳ್ ಹೇಳಿದರು.
ಹಿಂದೆ ನಡೆದ ಅತೃಪ್ತರ ಸಭೆಯಲ್ಲಿ ಮುಂಚೂಣಿಯಲ್ಲಿದ್ದ ಮತ್ತು ಇತ್ತೀಚೆಗೆ ವಿಜಯೇಂದ್ರ ಅವರ ನಾಯಕತ್ವ ಒಪ್ಪುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹ ಸಭೆಯಲ್ಲಿ ಭಾಗವಹಿಸುತ್ತಾರೆಂದು ಹೇಳಲಾಗಿತ್ತಾದರೂ ಅವರು ಸಭೆಗೆ ಗೈರಾಗಿದ್ದರು.
ವಿಜಯೇಂದ್ರ ಬಗ್ಗೆ ಚರ್ಚಿಸಿಲ್ಲ:
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಸವನಗೌಡ ಪಾಟೀಲ್ ಯತ್ನಾಳ್, ಇದು ಅಸಮಾಧಾನಿತರ ಸಭೆ ಅಲ್ಲ. ರಾಜ್ಯಾಧ್ಯಕ್ಷರ ಬದಲಾವಣೆಗೆ ನಾವಂತೂ ಪಟ್ಟು ಹಿಡಿದಿಲ್ಲ. ಅದರ ಬಗ್ಗೆ ದಾವಣಗೆರೆಯಲ್ಲಿ ನಾವು ಚರ್ಚಿಸಿಯೂ ಇಲ್ಲ. ನಾವು 38 ಜನ ಎಲ್ಲಿ ಏನು ಹೇಳಬೇಕೋ ಅದನ್ನು ಅಲ್ಲೇ ಹೇಳಿದ್ದೇವೆ. ಮುಂದಿನ ಕ್ರಮ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ಬಹಿರಂಗವಾಗಿ ಮಾತನಾಡದಂತೆ ಹೈಕಮಾಂಡ್ ಸೂಚನೆ ಇದೆ. ನಮ್ಮ ಬೇಡಿಕೆ ವಿಚಾರದಲ್ಲಿ ವರಿಷ್ಠರು ಯೋಗ್ಯ ನಿರ್ಣಯ ಕೈಗೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಹರಿಹರದ ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇವೆ. ಇಲ್ಲಿ ಪಕ್ಷದ ವಿಚಾರ ಚರ್ಚೆಯಾಗಿಲ್ಲ. ಸನಾತನ ಧರ್ಮದ್ದಷ್ಟೇ ಚರ್ಚೆ ಮಾಡಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಹಟಾವೋ ಪ್ರಯತ್ನ ಮಾಡುತ್ತಿರುವುದು ನಿಜ. ಆ ತಂಡಕ್ಕೆ ಅರವಿಂದ ಲಿಂಬಾವಳಿಯನ್ನು ವಕ್ತಾರರಾಗಿ ಮಾಡಿದ್ದೇವೆ. ಲಿಂಬಾವಳಿಯೇ ಅದರ ಬಗ್ಗೆ ಮಾತನಾಡುತ್ತಾರೆ ಎಂದು ಸ್ಷಷ್ಟನೆ ನೀಡಿದರು.
ಬಿಎಸ್‌ವೈ ಜೈಲಿಗೆ ಹೋಗಿ ಬಂದು ನಂತರ ಸಿಎಂ ಆಗಿಲ್ಲವಾ?: ಸಿದ್ದರಾಮಯ್ಯಗೆ ಯತ್ನಾಳ್ ಪ್ರಶ್ನೆ!
ಪ್ರತ್ಯೇಕ ಸಭೆಗಳು ನನಗೆ ಹೊಸತಲ್ಲ
ಪಕ್ಷದ ನಾಯಕರ ಇಂತಹ ಪ್ರತ್ಯೇಕ ಸಭೆಗಳು ನನಗೆ ಹೊಸದೇನಲ್ಲ. ಸಮಸ್ಯೆಗೆ ಹೆದರಿ ಓಡಿಹೋಗಲ್ಲ. ಯಡಿಯೂರಪ್ಪ ಅವರು ಎದುರಿಸಿದ ಅನೇಕ ಸವಾಲುಗಳನ್ನು ನೋಡಿ ಬೆಳೆದಿದ್ದೇನೆ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ