ಬಿಜೆಪಿ ಅಧ್ಯಕ್ಷರಾಗಿ ನೂರು ದಿನಗಳ ವಿಜಯೇಂದ್ರ...!

By Kannadaprabha NewsFirst Published Feb 18, 2024, 5:17 AM IST
Highlights

ವಿಜಯೇಂದ್ರ ಬಗ್ಗೆ ‘ಇನ್ನೂ ಜೂನಿಯರ್’ ಎಂದು ಮೂಗು ಮುರಿದ ಪಕ್ಷದ ಹಿರಿಯರೇ ಈಗ ಅವರ ಸಂಘಟನಾ ಶಕ್ತಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿಯೇ ಈಗ ವಿಜಯೇಂದ್ರ ಅವರನ್ನು ವಿರೋಧಿಸುವವರು ಕೂಡ ಮುನಿಸು ಮರೆತು ಪಕ್ಷ ಸಂಘಟನೆಗೆ ಕೈಜೋಡಿಸುತ್ತಿದ್ದಾರೆ.

ವಿಜಯ್ ಮಲಗಿಹಾಳ

ಬೆಂಗಳೂರು(ಫೆ.18):  ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಭಾನುವಾರ ನೂರು ದಿನ ಪೂರೈಸುತ್ತಿದ್ದು, ಈ ಕಡಿಮೆ ಅವಧಿಯಲ್ಲೇ ಅವರು ಪಕ್ಷದ ಹೈಕಮಾಂಡ್ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಎಂಬ ದೊಡ್ಡ ಪ್ರಭಾವಳಿಯಿಂದ ಹೊರಬಂದು ತಮ್ಮದೇ ಆದ ನಾಯಕತ್ವ ಗುಣ ಸಾಬೀತುಪಡಿಸುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಬಿಜೆಪಿಯ ರಾಷ್ಟ್ರೀಯ ನಾಯಕರು ಕರ್ನಾಟಕ ಘಟಕವನ್ನು ಪುನಶ್ಚೇತನಗೊಳಿಸುವ ಬಗ್ಗೆ ಯಾವುದೇ ಪರಿಹಾರ ಕಾಣದೇ ಕೈಚೆಲ್ಲಿದ್ದರಿಂದ ಆರು ತಿಂಗಳವರೆಗೆ ನೂತನ ರಾಜ್ಯಾಧ್ಯಕ್ಷರ ನೇಮಕವೇ ಆಗಿರಲಿಲ್ಲ.

Latest Videos

ಅಂತಿಮವಾಗಿ ಯಡಿಯೂರಪ್ಪ ಅವರ ವರ್ಚಸ್ಸನ್ನು ಬಳಸಿಕೊಳ್ಳುವ ಉದ್ದೇಶದ ಜೊತೆಗೆ ವಿಜಯೇಂದ್ರ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಅವರಿಗೆ ಸಾರಥ್ಯ ವಹಿಸಲು ರಾಷ್ಟ್ರೀಯ ನಾಯಕರು ತೀರ್ಮಾನಿಸಿದರು. ಪಕ್ಷದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸಂಘಟನೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ವಿಜಯೇಂದ್ರ ಅವರ ಸಾಮರ್ಥ್ಯವನ್ನು ವರಿಷ್ಠರು ಕಳೆದ 2018ರ ವಿಧಾನಸಭಾ ಚುನಾವಣೆ ವೇಳೆಯೇ ಗುರುತಿಸಿದ್ದರು. ಹೀಗಾಗಿ, ವಿಜಯೇಂದ್ರ ಅವರೇ ಈ ಹುದ್ದೆಗೆ ಸೂಕ್ತ, ಅವರಿಗೇ ಜವಾಬ್ದಾರಿ ನೀಡುವ ಮೂಲಕ ಒಂದು ಪ್ರಯೋಗ ಮಾಡಿ ನೋಡೋಣ ಎಂಬ ನಿಲುವಿಗೆ ಬಂದರು.

ಮೊದಲ ಬಾರಿ ಶಾಸಕರಾದ ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಆರಂಭದ ದಿನಗಳಲ್ಲಿ ವರಿಷ್ಠರಿಗೂ ಸಹಜವಾಗಿಯೇ ತುಸು ಆತಂಕವಿತ್ತು. ಆದರೆ, ಕೆಲವೇ ದಿನಗಳಲ್ಲಿ ತಮ್ಮ ಸಂಘಟನಾ ಸಾಮರ್ಥ್ಯ ಮತ್ತು ರಾಜಕೀಯ ಪಕ್ವತೆಯನ್ನು ನಿರೂಪಿಸಿದ ವಿಜಯೇಂದ್ರ ಅವರು ಅಲ್ಪಾವಧಿಯಲ್ಲಿ ಪಕ್ಷದ ವರಿಷ್ಠರ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಪಕ್ಷದ ನಾಯಕರಲ್ಲಿ ಭರವಸೆ ಮೂಡಿಸಿದ್ದಾರೆ. ವರಿಷ್ಠರಿಗೂ ಈಗ ಕರ್ನಾಟಕ ಘಟಕದ ಸಂಘಟನೆ ಗಟ್ಟಿಯಾಗುತ್ತಿರುವ ಬಗ್ಗೆ ಸಮಾಧಾನವಿದೆ ಎನ್ನಲಾಗಿದೆ.

ರಾಜ್ಯವನ್ನು ಅಭಿವೃದ್ಧಿಯಲ್ಲಿ 20 ವರ್ಷ ಹಿಂದಕ್ಕೆ ಒಯ್ದ ಸಿದ್ದರಾಮಯ್ಯ ಬಜೆಟ್‌: ವಿಜಯೇಂದ್ರ

ಆರಂಭದಲ್ಲಿ ವಿಜಯೇಂದ್ರ ಬಗ್ಗೆ ‘ಇನ್ನೂ ಜೂನಿಯರ್’ ಎಂದು ಮೂಗು ಮುರಿದ ಪಕ್ಷದ ಹಿರಿಯರೇ ಈಗ ಅವರ ಸಂಘಟನಾ ಶಕ್ತಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿಯೇ ಈಗ ವಿಜಯೇಂದ್ರ ಅವರನ್ನು ವಿರೋಧಿಸುವವರು ಕೂಡ ಮುನಿಸು ಮರೆತು ಪಕ್ಷ ಸಂಘಟನೆಗೆ ಕೈಜೋಡಿಸುತ್ತಿದ್ದಾರೆ.

ಅಧ್ಯಕ್ಷರಾಗಿ ಮೊದಲ ನೂರು ದಿನಗಳ ಅವಧಿಯಲ್ಲಿ ವಿಜಯೇಂದ್ರ ಅವರು ಪಕ್ಷದ ಸಂಘಟನೆ ಸಲುವಾಗಿ ಸುಮಾರು ಹತ್ತು ಸಾವಿರ ಕಿ.ಮೀ.ನಷ್ಟು ಸಂಚರಿಸಿ 28 ಜಿಲ್ಲೆಗಳ ಪ್ರವಾಸ ಮುಗಿಸಿರುವುದು ಸಣ್ಣ ಮಾತಲ್ಲ. ತಮ್ಮ ಈ ಪ್ರವಾಸದ ವೇಳೆ ವಿಜಯೇಂದ್ರ ಅವರು ಹೋದಲ್ಲೆಲ್ಲ ತಳಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಲು ಆದ್ಯತೆ ನೀಡಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಂಪರ್ಕ ಇಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ವಿಭಿನ್ನವಾಗಿ ಕಾರ್ಯತಂತ್ರ ರೂಪಿಸಿ ಪಕ್ಷವನ್ನು ಬಲಪಡಿಸುತ್ತಿದ್ದು, ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮೂಲಕ ಪಕ್ಷವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ. ಪಕ್ಷದ ರಾಜ್ಯ ಪದಾಧಿಕಾರಿಗಳ ನೇಮಕದಲ್ಲೂ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ನಿರ್ವಹಿಸಿದ ವಿಜಯೇಂದ್ರ ಅವರು ಎಲ್ಲ ನಿರ್ಣಯಗಳನ್ನೂ ವರಿಷ್ಠರಿಗೆ ಮನವರಿಕೆ ಮಾಡಿಯೇ ಮಾಡುತ್ತಿದ್ದಾರೆ.

ಸದ್ಯ ಲೋಕಸಭಾ ಚುನಾವಣೆ ವಿಜಯೇಂದ್ರ ಅವರ ಮುಂದಿರುವ ದೊಡ್ಡ ಸವಾಲು. ಅದನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಕಾರ್ಯಪ್ರವೃತ್ತರಾಗಿರುವ ಅವರು ರಾಜ್ಯದ ಎಲ್ಲ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇಡುತ್ತಿದ್ದಾರೆ. ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸುತ್ತಿರುವ ವಿಜಯೇಂದ್ರ, ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲೂ ಗೆಲುವು ಸಾಧಿಸಲು ಪಕ್ಷವನ್ನು ರಣರಂಗಕ್ಕೆ ಸಿದ್ಧಗೊಳಿಸುತ್ತಿದ್ದಾರೆ.
ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ಸ್ವಾಗತಿಸುವುದು, ನೂತನ ಜಿಲ್ಲಾಧ್ಯಕ್ಷರಿಗೆ ಪ್ರಮಾಣವ ವಚನ ಸ್ವೀಕಾರ ಸಮಾರಂಭಗಳನ್ನು ನಡೆಸುವುದು ಮತ್ತು ಶಾಸಕರ ಜತೆ ತಾಲೂಕು ಮಟ್ಟದ ನಾಯಕರು ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಸಂವಾದ ನಡೆಸುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ವಿಜಯೇಂದ್ರ ತೊಡಗಿಸಿಕೊಂಡಿದ್ದಾರೆ.

ಬಿಜೆಪಿ ದಿಲ್ಲಿ ವರಿಷ್ಠರು, ಜೆಡಿಎಸ್‌ ನಾಯಕರು ಚರ್ಚಿಸಿ ಕುಪೇಂದ್ರ ರೆಡ್ಡಿ ಕಣಕ್ಕೆ: ವಿಜಯೇಂದ್ರ

ಪಕ್ಷದ ಕಾರ್ಯಕರ್ತರಿಗೆ, ಸ್ಥಳೀಯ ಮುಖಂಡರಿಗೆ ಸುಲಭವಾಗಿ ಸಿಗುವ ಮೂಲಕ ಅವರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿರುವ ವಿಜಯೇಂದ್ರ ಅವರ ಕಾರ್ಯಶೈಲಿ ಬಗ್ಗೆ ಪಕ್ಷದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ವಿವಿಧ ಅನೌಪಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನತೆಯ ಕುಂದುಕೊರತೆಗಳನ್ನು ಅಲಿಸಿ ಸರ್ಕಾರದ ಗಮನಕ್ಕೆ ತರುವುದು ಮಾತ್ರವಲ್ಲದೇ, ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವನ್ನು ವಿಜಯೇಂದ್ರ ಅವರು ಮಾಡುತ್ತಿದ್ದಾರೆ.

ಜೆಡಿಎಸ್ ಮೈತ್ರಿ ಸುಗಮಕ್ಕೆ ಯತ್ನ:

ಬಿಜೆಪಿ-ಜೆಡಿಎಸ್‌ ಮೈತ್ರಿಯ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಂಡ ಬಳಿಕ ವಿಜಯೇಂದ್ರ ಅವರು ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಉಭಯ ಪಕ್ಷಗಳ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ಪಕ್ಷದ ಅನೇಕ ಜಿಲ್ಲಾ ಮತ್ತು ತಾಲೂಕು ಘಟಕಗಳಲ್ಲಿ ಇದ್ದ ಭಿನ್ನಾಭಿಪ್ರಾಯ, ಬಣ ರಾಜಕೀಯ ಬಗೆಹರಿಸಿ ಸಂಘಟನೆ ಸರಿದಾರಿಗೆ ಬರುವಂತೆ ಶ್ರಮಿಸುತ್ತಿದ್ದಾರೆ. ಇದೆಲ್ಲದರ ಫಲಿತಾಂಶ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ಹೊರಬೀಳುವ ನಿರೀಕ್ಷೆಯಿದೆ.

click me!