ಮುಂಬರುವ ಲೋಕಸಭಾ ಚುನಾವಣೆಯಲ್ಲಿ 27 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯಲಿದೆ. ಜೊತೆಗೆ ಬಿಜೆಪಿ ಮತ್ತೆ ಬಹುಮತ ಪಡೆದು ಪ್ರಧಾನಿ ಮೋದಿರವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದು ನಿಶ್ಚಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಂಜನಗೂಡು (ಫೆ.18): ಮುಂಬರುವ ಲೋಕಸಭಾ ಚುನಾವಣೆಯಲ್ಲಿ 27 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯಲಿದೆ. ಜೊತೆಗೆ ಬಿಜೆಪಿ ಮತ್ತೆ ಬಹುಮತ ಪಡೆದು ಪ್ರಧಾನಿ ಮೋದಿರವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುವುದು ನಿಶ್ಚಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಶ್ರೀಕಂಠೇಶ್ವರನ ದರ್ಶನ ಪಡೆದ ಬಳಿಕ ಪಟ್ಟಣದ ಚಾಮಲಾಪುರ ಬೀದಿಯಲ್ಲಿ ಬಿಜೆಪಿ ಮತ್ತೊಮ್ಮೆ ಮೋದಿ ಎಂಬ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಬಡವರಿಗಾಗಿ ಹಲವಾರು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿ ಸರ್ಕಾರವನ್ನು ನಡೆಸಿದ್ದಾರೆ.
ಆದ್ದರಿಂದ ಪ್ರಧಾನಿ ಮೋದಿರವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದು ದೇಶದ ಕೋಟ್ಯಂತರ ಜನರ ಆಶಯವಾಗಿದೆ. ಈ ನಿಟ್ಟಿನಲ್ಲಿ ಮೋದಿರವರ ಕೈ ಬಲಪಡಿಸುವ ಸಲುವಾಗಿ ನಾವೆಲ್ಲಾ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಕಳೆದ ಬಾರಿ 25 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ ಖಾಸಗಿ ಸಮೀಕ್ಷೆಯಲ್ಲಿಯೂ 22 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯಲಿದೆ ಎಂಬ ವರದಿ ಬಂದಿದೆ. ಈ ಬಾರಿ ಕಳೆದ ಬಾರಿಗಿಂತ 2 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲುವ ವಾತಾವರಣವಿದ್ದು, 27 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆಯುವುದು ಖಚಿತವಾಗಿದೆ ಎಂದರು.
ಬಿಜೆಪಿ ಪಕ್ಷ ನನ್ನ ಮನೆ ಇದ್ದಂತೆ, ಹಾಗಾಗಿ ಕಾಂಗ್ರೆಸ್‌ನಿಂದ ವಾಪಸ್ಸು ಬಂದೆ: ಜಗದೀಶ್ ಶೆಟ್ಟರ್
ಮರಳಿ ನಮ್ಮ ಮನೆಗೆ ಬಂದಿದ್ದೇನೆ: ನನಗೂ ಬಿಜೆಪಿಗೂ ಉನ್ನತವಾದ ಆತ್ಮೀಯ ಸಂಬಂಧವಿದೆ. ನಾನು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದಾಗ ಇಡೀ ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು, ಮಾಜಿ ಶಾಸಕರು, ಪಕ್ಷದ ಮುಖಂಡರೂ ಸಹ ನನ್ನನ್ನು ಬಿಜೆಪಿಗೆ ಮರಳಿ ಬರುವಂತೆ ಒತ್ತಡ ಹೇರುತ್ತಿದ್ದರು. ಅವರ ಒತ್ತಡಕ್ಕೆ ಮಣಿದು ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ನಾನು ಮರಳಿ ನಮ್ಮ ಮನೆಗೆ ವಾಪಸ್ ಬಂದಿದ್ದೇನೆ, ನಮ್ಮ ಮನೆಗೆ ಬರುವುದಕ್ಕೆ ನನಗೆ ಯಾವುದೇ ವಿಶೇಷವಾದ ಸ್ವಾಗತ ಬೇಕಿಲ್ಲ, ಜೊತೆಗೆ ನಾನು ಕಾಂಗ್ರೆಸ್ ಸಹವಾಸ ಬಿಟ್ಟು ಬಹಳ ದಿನ ಕಳೆದಿದೆ. ಆ ಬಗ್ಗೆ ಚರ್ಚೆ ಬೇಕಿಲ್ಲ ಎಂದರು.
ವರಿಷ್ಠರು ಬಯಸಿದರೆ ಸ್ಪರ್ಧೆ: ನಾನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ವರಿಷ್ಠರಲ್ಲಿ ನಾನು ಚರ್ಚೆ ನಡೆಸಿಲ್ಲ, ಕೇಂದ್ರದ ವರಿಷ್ಠರು ನನ್ನನ್ನು ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ: ಜಗದೀಶ್ ಶೆಟ್ಟರ್
ಕುಟುಂಬ ಸಮೇತ ಶ್ರೀಕಂಠೇಶ್ವರನ ದರ್ಶನ ಪಡೆದ ಶೆಟ್ಟರ್: ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪತ್ನಿ ಶಿಲ್ಪಾ ಶೆಟ್ಟರ್ ಜೊತೆಗೂಡಿ ಶ್ರೀಕಂಠೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಗರ್ಭಗುಡಿಯಲ್ಲಿ ಕೆಲ ಕಾಲ ಧ್ಯಾನಾಸಕ್ತರಾದರು. ನಂತರ ಪಾರ್ವತಿ ದೇವಿ, ನಾರಾಯಣಸ್ವಾಮಿ, ಚಂಡಿಕೇಶ್ವರ ದೇವರ ದರ್ಶನ ಪಡೆದರು. ದೇವಾಲಯದ ವತಿಯಿಂದ ಅವರಿಗೆ ಶೇಷವಸ್ತ್ರ, ಫಲ, ತಾಂಬೂಲಗಳನ್ನು ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಬಿ. ಹರ್ಷವರ್ಧನ್, ಬಿಜೆಪಿ ಮಂಡಲ ಅಧ್ಯಕ್ಷ ಪಿ. ಮಹೇಶ್ ಹೊರಳವಾಡಿ, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಮುಖಂಡರಾದ ಬಾಲಚಂದ್ರು, ಮಹೇಶ್, ಉಮೇಶ್ ಮೋದಿ, ಸಿದ್ದರಾಜು, ನಗರಸಭಾ ಸದಸ್ಯ ಮಹದೇವಪ್ರಸಾದ್ ಇದ್ದರು.