ಶಿವಾಜಿನಗರ ಬೈ ಎಲೆಕ್ಷನ್: ರೋಷನ್‌ ಬೇಗ್‌ ಇಲ್ಲದ ಹೈವೋಲ್ಟೇಜ್‌ ಸಮರ

By Kannadaprabha News  |  First Published Dec 1, 2019, 3:19 PM IST

 ವಿಧಾನಸೌಧ ಒಳಗೊಂಡ ಶಿವಾಜಿನಗರ ಕ್ಷೇತ್ರದಲ್ಲಿ ಐಎಂಎ ವಂಚನೆ ಕೇಸ್‌ ಕರಾಮತ್ತು ಮಾಡುತ್ತಾ? | ಮುಸ್ಲಿಂ ಮತಗಳು ಹಂಚಿಹೋದರೆ ಯಾರಿಗೆ ಲಾಭ? | ಬಿಜೆಪಿ, ಕಾಂಗ್ರೆಸ್‌ ನಡುವೆ ನೇರ ಹಣಾಹಣಿ


- ಲಿಂಗರಾಜು ಕೋರಾ

ಬೆಂಗಳೂರು (ಡಿ. 01): ಹಿಂದು, ಮುಸ್ಲಿಂ ಸೇರಿದಂತೆ ಸರ್ವಧರ್ಮೀಯ ಹಾಗೂ ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷಾ ಜನರನ್ನು ಒಳಗೊಂಡಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರ ಒಂದು ಮಿನಿಭಾರತ. ಮುಸ್ಲಿಮರು ಮತ್ತು ತಮಿಳರೇ ನಿರ್ಣಾಯಕರಾದ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

Tap to resize

Latest Videos

undefined

ಕನ್ನಡ ಚಳವಳಿ ಹೋರಾಟಗಾರ, ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಮಹಾಲಕ್ಷ್ಮೇ ಲೇಔಟ್‌ ವಿಧಾನಸಭಾ ಕ್ಷೇತ್ರದ ಜತೆಗೆ ಶಿವಾಜಿನಗರ ಕ್ಷೇತ್ರದಿಂದಲೂ ತಮ್ಮ ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಕಣಕ್ಕಿಳಿದಿರುವುದು ವಿಶೇಷ ಆಕರ್ಷಣೆಗೊಳಗಾಗಿದೆ.

ಕಳೆದ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಹ್ಯಾಟ್ರಿಕ್‌ ಗೆಲುವು ಸೇರಿದಂತೆ ಒಟ್ಟು ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಆರ್‌.ರೋಷನ್‌ ಬೇಗ್‌ ಇದೀಗ ಅನರ್ಹ ಶಾಸಕರ ಪಟ್ಟಿಯಲ್ಲಿದ್ದಾರೆ. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಪರೋಕ್ಷವಾಗಿ ಸಹಕರಿಸಿದ ಆರ್‌.ರೋಷನ್‌ ಬೇಗ್‌ ಶಾಸಕ ಸ್ಥಾನದಿಂದ ಅನರ್ಹಗೊಂಡು, ಬಳಿಕ ಇತರೆ 16 ಅನರ್ಹ ಶಾಸಕರಂತೆ ತಾವೂ ಬಿಜೆಪಿ ಸೇರಿ ಮತ್ತೆ ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದರು. ಅಷ್ಟರಲ್ಲಿ ಬಯಲಾದ ‘ಐಎಂಎ ಬಹುಕೋಟಿ ವಂಚನೆ’ ಪ್ರಕರಣದಲ್ಲಿ ತಮ್ಮ ಹೆಸರು ಪ್ರಮುಖವಾಗಿ ಕೇಳಿಬಂದಿದ್ದರಿಂದ ಅವರ ಎಲ್ಲ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆದವು.

ಒಕ್ಕಲಿಗರ ನಡುವೆ ಜಿದ್ದಾಜಿದ್ದಿ ಕದನ; 3 ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕೆ

ಐಎಂಎ ಕಳಂಕದಿಂದಾಗಿ ‘ಬೇಗ್‌’ಗೆ ಪಕ್ಷದ ಬಾಗಿಲು ಹಾಕಿದ ಬಿಜೆಪಿ ಹೈಕಮಾಂಡ್‌ ಕೊನೇ ಕ್ಷಣದಲ್ಲಿ ಬಿಬಿಎಂಪಿಯ ಮಾಜಿ ಕಾರ್ಪೊರೇಟರ್‌ (2001ರಿಂದ 2006), ತಮಿಳು ವಲಯದಲ್ಲಿ ಸಾಕಷ್ಟುಹಿಡಿತ ಇಟ್ಟುಕೊಂಡಿರುವ ಎಂ.ಸರವಣ ಅವರನ್ನು ಕಣಕ್ಕಿಳಿಸಿದೆ.

ಕ್ಷೇತ್ರದಲ್ಲಿ ಮುಸ್ಲಿಮರು ಮತ್ತು ತಮಿಳರೇ ನಿರ್ಣಾಯಕರಾಗಿರುವುದರಿಂದ ಬಿಜೆಪಿ ತಮಿಳು ಮೂಲದ ಎಂ.ಶರವಣ ಅವರಿಗೆ ಮಣೆ ಹಾಕಿ ಹಿಂದು ತಂತ್ರವನ್ನು ಪ್ರಯೋಗ ಮಾಡಿದೆ. ಜತೆಗೆ, ರೋಷನ್‌ ಬೇಗ್‌ ಬೆಂಬಲವನ್ನು ಬಗಲಲ್ಲಿ ಇಟ್ಟುಕೊಂಡು ಮುಸ್ಲಿಂ ಮತಗಳನ್ನು ಸೆಳೆಯುವ ಯತ್ನದಲ್ಲಿದೆ.

ಅತ್ತ ಕಾಂಗ್ರೆಸ್‌, ತನ್ನ ಸಾಂಪ್ರದಾಯಿಕ ಮತಗಳ ಜತೆಗೆ ಮುಸ್ಲಿಂ ಮತಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬಹುದೆಂಬ ಲೆಕ್ಕಾಚಾರದಲ್ಲಿ ಹಾಲಿ ವಿಧಾನ ಪರಿಷತ್‌ ಸದಸ್ಯ, ಕಳೆದ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ರಿಜ್ವಾನ್‌ ಅರ್ಷದ್‌ಗೆ ಟಿಕೆಟ್‌ ನೀಡಿ ಮತ್ತೆ ಅದೃಷ್ಟ ಪರೀಕ್ಷೆಗಿಳಿಸಿದೆ. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಂತೂ ಏರ್ಪಟ್ಟಿದೆ.

ಇನ್ನು, ಜೆಡಿಎಸ್‌ ಕೂಡ ಈ ಬಾರಿ ಕ್ಷೇತ್ರದಲ್ಲಿ ಪರಿಚಿತರಾಗಿರುವ ತಮ್ಮ ಪಕ್ಷದ ರಾಷ್ಟ್ರೀಯ ವಕ್ತಾರ ತನ್ವೀರ್‌ ಅಹಮ್ಮದ್‌ ಉಲ್ಲಾ ಅವರನ್ನು ಕಣಕ್ಕಿಳಿಸಿ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ನಡೆಸಿದೆ. ಇವರ ನಡುವೆ, ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಸೇರಿದಂತೆ ವಿವಿಧ ಪಕ್ಷ ಹಾಗೂ ಪಕ್ಷೇತರವಾಗಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಕೆ ಆರ್ ಪುರ ಉಪಚುನಾವಣೆ: ಕಾಂಗ್ರೆಸ್‌ ಮತ ಛಿದ್ರವಾದರೆ ಬೈರತಿಗೆ ಸಲೀಸು

ಮತದಾರನ ಮನದಾಳ:

ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಧರ್ಮ ಮತ್ತು ಭಾಷೆ ಆಧಾರಿತ ಚುನಾವಣೆ ನಡೆಯುವ ಲಕ್ಷಣಗಳು ಕಂಡುಬರುತ್ತಿವೆ. ಆದರೆ, ಆಯಾ ಪಕ್ಷಗಳ ಕಾರ್ಯಕರ್ತರನ್ನು ಹೊರತುಪಡಿಸಿದ ಇಲ್ಲಿನ ಮತದಾರನ ಮನ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಅಭ್ಯರ್ಥಿಗಾಗಿ ಮಿಡಿಯುತ್ತಿದೆ. ಪ್ರಮುಖ ರಸೆಲ್‌ ಮಾರ್ಕೆಟ್‌ ಸೇರಿದಂತೆ ಶಿವಾಜಿನಗರ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ರಸ್ತೆ, ಕುಡಿಯುವ ನೀರು, ಕಸದ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ. ಹಾಗಾಗಿ ಇಲ್ಲಿನ ಜನ ಯಾರು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ ಎನ್ನುವ ಹುಡುಕಾಟದಲ್ಲಿದ್ದಾರೆ.

ಬಿಜೆಪಿಗೆ ಮುಸ್ಲಿಂ ಮತಗಳದ್ದೇ ಚಿಂತೆ:

ಬಿಜೆಪಿ ಅಭ್ಯರ್ಥಿ ಸರವಣಗೆ ಹಿಂದೆ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಇದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲೇ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸರವಣ ಟಿಕೆಟ್‌ ಸಿಗದಿದ್ದಕ್ಕೆ ಬಂಡಾಯ ಸಾರಿ ಅಂದಿನ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ರಾಜಕೀಯ ಗುರು ಕಟ್ಟಾಸುಬ್ರಹ್ಮಣ್ಯ ನಾಯ್ಡು ವಿರುದ್ಧವೇ ಕೆಲಸ ಮಾಡಿದ್ದರು. ಆಗ ಕಾಂಗ್ರೆಸ್‌ ಸೇರಿ ರೋಷನ್‌ ಬೇಗ್‌ರ ಗೆಲುವಿಗೆ ಸಹಕರಿಸಿದ್ದರು. ಇದರಿಂದ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.

ನಂತರ ಕಳೆದ ಲೋಕಸಭಾ ಚುನಾವಣೆ ವೇಳೆ ಪಿ.ಸಿ.ಮೋಹನ್‌ ಅವರ ಕೃಪೆಯಿಂದ ಸರವಣ ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದರು. ವಿಧಾನಸಭಾ ಚುನಾವಣೆಯ ಅಖಾಡಕ್ಕಿಳಿಯಲು ಮೊದಲಿಂದಲೂ ಉತ್ಸುಕರಾಗಿ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಸರವಣ ಕೊನೆಗೂ ಈ ಬಾರಿ ಬಿಜೆಪಿ ಟಿಕೆಟ್‌ ಗಿಟ್ಟಿಸಿಕೊಂಡು ಕಣಕ್ಕಿಳಿದಿದ್ದಾರೆ.

ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್‌ ಕೊಡದಿದ್ದಕ್ಕೆ ಅತೃಪ್ತಗೊಂಡಿದ್ದ ರೋಷನ್‌ ಬೇಗ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರಾದರೂ, ಮುಖ್ಯಮಂತ್ರಿ ಯಡಿಯೂರಪ್ಪ ಮನವೊಲಿಸಿದ್ದರಿಂದ, ಹಿಂದೆ ತಮ್ಮ ಗೆಲುವಿಗೆ ಸಹಕರಿಸಿದ್ದ ಬಿಜೆಪಿ ಅಭ್ಯರ್ಥಿ ಸರವಣ ಅವರಿಗೆ ರೋಷನ್‌ ಬೇಗ್‌ ಬೆಂಬಲ ಘೋಷಿಸಿದ್ದಾರೆ.

ಅಲ್ಲದೆ, ಸರವಣ ಅವರ ಪತ್ನಿ ಮಮತಾ ಬಿಬಿಎಂಪಿಯ ಹಾಲಿ ಪಕ್ಷೇತರ ಸದಸ್ಯೆಯಾಗಿದ್ದು, ಪತಿಯ ಗೆಲುವಿಗಾಗಿ ಹೋರಾಟ ನಡೆಸಿದ್ದಾರೆ. ಇವರ ಜತೆಗೆ ಕ್ಷೇತ್ರದ ಕಾಂಗ್ರೆಸ್‌ನ ಪಾಲಿಕೆ ಸದಸ್ಯರಾದ ಎಂ.ಕೆ.ಗುಣಶೇಖರ್‌ ಮತ್ತು ನೇತ್ರಾವತಿ ಕೃಷ್ಣೇಗೌಡ ಅವರು ಸರವಣ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟೆಲ್ಲಾ ಪ್ಲಸ್‌ ಪಾಯಿಂಟ್‌ಗಳಿರುವ ಸರವಣಗೆ ಮುಸ್ಲಿಂ ಮತಗಳನ್ನು ಪಡೆಯುವುದೇ ದೊಡ್ಡ ಸವಾಲು.

ರೋಷನ್‌ ಬೇಗ್‌ ಅವರ ಬೆಂಬಲದಿಂದ ಒಂದಷ್ಟುಮತಗಳ ನಿರೀಕ್ಷೆ ಜತೆಗೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಿಂದ ಅಲ್ಲದೆ, ಇನ್ನೂ ಒಂಬತ್ತು ಜನ ಮುಸ್ಲಿಂ ಅಭ್ಯರ್ಥಿಗಳು ವಿವಿಧ ಪಕ್ಷದಿಂದ ಹಾಗೂ ಪಕ್ಷೇತರವಾಗಿ ಕಣದಲ್ಲಿದ್ದಾರೆ. ಇದರಿಂದ ಮುಸ್ಲಿಂ ಮತಗಳು ಹಂಚಿಹೋಗುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ ಸರವಣ ಗೆಲುವು ಸಲೀಸಲಾಗಲಿದೆ.

ಬಿಎಸ್‌ವೈ ತವರಿನಲ್ಲಿ ಬಿಜೆಪಿಗೆ ಕಠಿಣ ಪರೀಕ್ಷೆ; 2 ಸೋಲಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌

ಅನುಕಂಪದ ಅಲೆಯ ನಿರೀಕ್ಷೆಯಲ್ಲಿ ಕಾಂಗ್ರೆಸ್‌:

ಕಾಂಗ್ರೆಸ್‌, ತನ್ನ ಸಾಂಪ್ರದಾಯಿಕ ಮತಗಳ ಜತೆಗೆ ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಮತಗÜಳಿಗೆ ಗಾಳ ಹಾಕುವ ಲೆಕ್ಕಾಚಾರದಲ್ಲಿ ಹಾಲಿ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಅವರನ್ನು ಪಣಕ್ಕಿಳಿಸಿದೆ. ಅಲ್ಲದೆ, ರಿಜ್ವಾನ್‌ ಅವರು ಎರಡು ಬಾರಿ ಇದೇ ಶಿವಾಜಿನಗರವನ್ನೂ ಒಳಗೊಂಡ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿರುವುದರಿಂದ ಅವರ ಪರ ಅಲ್ಲಲ್ಲಿ ಅನುಕಂಪದ ಅಲೆಯೂ ಕಂಡುಬರುತ್ತಿದೆ. ಜತೆಗೆ, ರೋಷನ್‌ ಬೇಗ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಬೆಂಬಲಿಸಿರುವ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಬೇಸರವಿದೆ.

ಅದರಲ್ಲೂ ಐಎಂಎ ವಂಚನೆ ಪ್ರಕರಣದಲ್ಲಿ ಬೇಗ್‌ ಹೆಸರು ಕೇಳಿಬಂದಿದ್ದರಿಂದ ಹೂಡಿಕೆ ಮಾಡಿದ್ದ ಮಹಿಳಾ ಮತದಾರರಲ್ಲಿ ತಾವು ಕಳೆದುಕೊಂಡ ಹಣ ವಾಪಸ್‌ ಕೊಡಿಸುವವರು ಯಾರು ಎಂಬ ಹುಡುಕಾಟದಲ್ಲಿದ್ದಾರೆ. ಇವೆಲ್ಲ ಪರಿಣಾಮದಿಂದ ಮುಸ್ಲಿಮರು ಸಂಪೂರ್ಣ ರಿಜ್ವಾನ್‌ ಕೈಹಿಡಿದರೆ ಗೆಲುವಿಗೆ ದಾರಿ ಸಲೀಸಾಗಬಹುದು. ಆದರೆ, ಜೆಡಿಎಸ್‌ ಸೇರಿದಂತೆ ಒಟ್ಟು 10 ಜನ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಮುಸ್ಲಿಂ ಮತಗಳು ಹಂಚಿಹೋಗುವ ದೊಡ್ಡ ಆತಂಕ ಕಾಂಗ್ರೆಸ್‌ಗಿದೆ.

ಜತೆಗೆ ರಿಜ್ವಾನ್‌ ಅರ್ಷದ್‌ ಕ್ಷೇತ್ರದಲ್ಲಿ ಪರಿಚಿತರಾದರೂ ಜನರ ಒಡನಾಟ ಅಷ್ಟಕ್ಕಷ್ಟೆ. ರಿಜ್ವಾನ್‌ಗೆ ಕ್ಷೇತ್ರದಲ್ಲಿ ಸ್ಥಳೀಯರೆನ್ನುವ ಮಟ್ಟಿಗೆ ಮತದಾರರ ಮನದಲ್ಲಿ ಬೇರೂರಲಾಗಿಲ್ಲ. ಜತೆಗೆ ಕಾಂಗ್ರೆಸ್‌ನ ಕೆಲ ಕಾರ್ಪೊರೇಟರ್‌ಗಳು ಮತ್ತು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ರಿಜ್ವಾನ್‌ ವಿರುದ್ಧ ಕೆಲಸ ಮಾಡುತ್ತಿದ್ದಾರೆ.

ಇನ್ನು, ರೋಷನ್‌ ಬೇಗ್‌ ಬೆಂಬಲಿತ ಕಾಂಗ್ರೆಸ್‌ ‘ಪೈಲ್ವಾನ್‌’ಗಳು ತಟಸ್ಥವಾಗಿ ಉಳಿದಿದ್ದಾರೆ. ಇಷ್ಟೆಲ್ಲಾ ಸವಾಲುಗಳನ್ನು ರಿಜ್ವಾನ್‌ ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಗೆಲುವಿನ ಗುರಿ ಮುಟ್ಟಬಹುದು. ಇಲ್ಲದಿದ್ದರೆ ಬಿಜೆಪಿ ಕಮಲ ಅರಳಬಹುದು.

ಕ್ಷೇತ್ರದ ಇತಿಹಾಸ

ಸಣ್ಣ ಪುಟ್ಟವ್ಯಾಪಾರಿಗಳು, ಬಡ ಮತ್ತು ಕೆಳ ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯ ಮತದಾರರಿರುವ ಕ್ಷೇತ್ರವಿದು. ತಮಿಳು ಭಾಷಿಕರು, ಮುಸ್ಲಿಂ ಮತ್ತು ಕ್ರೈಸ್ತ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಶಿವಾಜಿನಗರ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ಎನಿಸಿದೆ.

ಸೇಂಟ್‌ ಮೇರಿಸ್‌ ಚಚ್‌ರ್‍, ಸೋಮೇಶ್ವರ ದೇವಸ್ಥಾನ, ಗುರುದ್ವಾರ, ಜಯಮಹಲ್‌ ಪ್ಯಾಲೇಸ್‌, ನಾಡಿನ ಶಕ್ತಿಕೇಂದ್ರ ವಿಧಾನಸೌಧ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಒಳಗೊಂಡ ಶಿವಾಜಿನಗರ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 11 ಚುನಾವಣೆಗಳಲ್ಲಿ ಐದು ಬಾರಿ ಕಾಂಗ್ರೆಸ್‌, ಎರಡು ಬಾರಿ ಬಿಜೆಪಿ ಹಾಗೂ ಜನತಾದಳ ಮತ್ತು ಜನತಾ ಪಕ್ಷ ತಲಾ ಒಂದು ಬಾರಿ ಗೆಲುವು ಸಾಧಿಸಿವೆ. 1985, 1994, 2008, 2014 ಮತ್ತು 2018 ಚುನಾವಣೆಗಳಲ್ಲಿ ರೋಷನ್‌ ಬೇಗ್‌ ಗೆಲುವು ಸಾಧಿಸಿದ್ದರು.

 

click me!