ಡಿಕೆಶಿ ಜೈಲಿನಿಂದ ಬಂದಿದ್ದು ಸಿದ್ದರಾಮಯ್ಯನವರಿಗೆ ದುಃಖ ತಂದಿದೆ| ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಆರೋಪ
ರಾಣಿಬೆನ್ನೂರು[ಡಿ.01]: ಡಿಕೆಶಿ ಜೈಲಿನಿಂದ ಹೊರಗೆ ಬಂದಿದ್ದು ಸಿದ್ದರಾಮಯ್ಯನವರಿಗೆ ಅತಿ ಹೆಚ್ಚು ದುಃಖವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸಂಜೆ ಪಕ್ಷದ ಅಭ್ಯರ್ಥಿ ಅರುಣಕುಮಾರ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
undefined
ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿರುವುದರಿಂದ ಅವರು ಪ್ರಚಾರಕ್ಕೆ ಬಂದಿರಲಿಲ್ಲ. ಮಾಧ್ಯಮಗಳಲ್ಲಿ ಇದರ ಬಗ್ಗೆ ಹೆಚ್ಚಿನ ಚರ್ಚೆಯಾದ ನಂತರ ಕಾಟಾಚಾರಕ್ಕೆ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. 2013ರಲ್ಲಿ 123 ಸೀಟು ಹೊಂದಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ 2018ರಲ್ಲಿ ಕೇವಲ 78 ಸೀಟುಗಳಿಗೆ ಕುಸಿಯಿತು. ಇದಲ್ಲದೆ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿಯೇ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17ರಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್ 9 ಸೀಟುಗಳನ್ನು ಗಳಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಅದು ಒಂದು ಸ್ಥಾನಕ್ಕೆ ಬಂದು ನಿಂತಿದೆ.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯು ಸುಸ್ಥಿರ ಮತ್ತು ಅಭಿವೃದ್ಧಿ ಪರವಾದ ಸರ್ಕಾರ ಹಾಗೂ ಗೊಂದಲದ ಮತ್ತು ಅಸ್ಥಿರತೆಯ ಸರ್ಕಾರದ ಮೇಲೆ ಅವಲಂಬಿತವಾಗಿದೆ. ಜನರು ಸುಸ್ಥಿರ ಸರ್ಕಾರದ ಪರವಾಗಿ ಮತ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಮಾಹಿತಿ ಪ್ರಕಾರ ಬಿಜೆಪಿಯು ಚುನಾವಣೆ ನಡೆಯುತ್ತಿರುವ 15ರ ಪೈಕಿ 12ರಲ್ಲಿ ಗೆಲುವು ಸಾಧಿಸಲಿದೆ. ಆದರೆ, ಸಿದ್ದರಾಮಯ್ಯ ಡಿ. 5ರ ನಂತರ ನಾನೆ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರು ಯಾವ ಆಧಾರದ ಮೇಲೆ ಇದನ್ನು ಹೇಳುತ್ತಿದ್ದಾರೆ ಎಂದು ಅಚ್ಚರಿಯಾಗುತ್ತಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಲ್ಲ ಎನ್ನುತ್ತಾರೆ. ಆದರೂ ಕೂಡ ಸಿದ್ದರಾಮಯ್ಯ ವಿವೇಚನೆಯಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಮಾಡುತ್ತಿದ್ದು ಅದು ನಡೆಯುವುದಿಲ್ಲ ಎಂದರು.
ಪಕ್ಷದ ಅಭ್ಯರ್ಥಿಗಳಿಗೆ ಗ್ರಾಮದಲ್ಲಿ ಪ್ರವೇಶವಿಲ್ಲ ಎಂದು ನಾಮಫಲಕ ಹಾಕಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ಜಾಲ ತಾಣಗಳಿಂದಾಗಿ ಅಂತಹ ಸುದ್ದಿಗಳು ಪ್ರಸಾರವಾಗುತ್ತವೆ. ವಾಸ್ತವವಾಗಿ ಅಂತಹ ಕಡೆಗಳಲ್ಲಿಯೇ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ದೊರಕುತ್ತವೆ. ನಾನು ನನ್ನ ಚುನಾವಣೆ ಪ್ರಚಾರಕ್ಕೆ ಹೋದಾಗ ಇದೇ ರೀತಿ ಆಗಿತ್ತು. ಆದರೆ, ಫಲಿತಾಂಶ ಬಂದಾಗ ಪ್ರವೇಶ ನೀಡದ ಗ್ರಾಮದಲ್ಲಿಯೇ ಹೆಚ್ಚು ಮತಗಳು ಲಭಿಸಿದ್ದವು. ರಾಜ್ಯದಲ್ಲಿ ಮುಂದಿನ 43 ತಿಂಗಳು ಸುಸ್ಥಿರ ಹಾಗೂ ಅಭಿವೃದ್ಧಿ ಪರ ಸರ್ಕಾರಕ್ಕಾಗಿ ಜಿಲ್ಲೆಯ ಹಿರೇಕೆರೂರು ಮತ್ತು ರಾಣಿಬೆನ್ನೂರ ಕ್ಷೇತ್ರದ ಮತದಾರರು ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಂಸದ ಶಿವಕುಮಾರ ಉದಾಸಿ, ಶಾಸಕ ಅರವಿಂದ ಬೆಲ್ಲದ, ಡಾ. ಬಸವರಾಜ ಕೇಲಗಾರ, ಲಿಂಗರಾಜ ಪಾಟೀಲ, ಸಂಕಪ್ಪ ಮಾರನಾಳ, ಭಾರತಿ ಅಳವಂಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.