ಬಿಎಸ್‌ವೈ ತವರಿನಲ್ಲಿ ಬಿಜೆಪಿಗೆ ಕಠಿಣ ಪರೀಕ್ಷೆ; 2 ಸೋಲಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌

By Shrilakshmi Shri  |  First Published Nov 29, 2019, 3:22 PM IST

ಬಿಎಸ್‌ವೈ ತವರಿನಲ್ಲಿ ಬಿಜೆಪಿಗೆ ಕಠಿಣ ಪರೀಕ್ಷೆ | ಕಾಂಗ್ರೆಸ್‌-ಜೆಡಿಎಸ್‌ ಕ್ಷೇತ್ರದಲ್ಲಿ ಮೊದಲ ಸಲ ಬಿಜೆಪಿ ಗಂಭೀರ ಸ್ಪರ್ಧೆ | ನಾರಾಯಣಗೌಡರ ಸೋಲಿಸಲೇಬೇಕೆಂದು ಎಚ್‌ಡಿಕೆ ಹಟ |  2 ಸೋಲಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌


ಕೆ.ಎನ್‌. ರವಿ

ಮಂಡ್ಯ (ನ. 29): ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಜಿದ್ದಾಜಿದ್ದಿ ಹೋರಾಟಕ್ಕೆ ಹೆಸರಾದ ಕೆ.ಆರ್‌. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಖಾಡದಲ್ಲಿ ಗಂಭೀರವಾಗಿ ಪರಿಗಣಿತವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲಿಲ್ಲ ಎಂದು ಆರೋಪಿಸಿ ಜೆಡಿಎಸ್‌ ತೊರೆದ ಅನರ್ಹ ಶಾಸಕ ನಾರಾಯಣ ಗೌಡ ಅವರು ಕ್ಷೇತ್ರದಲ್ಲಿ ಕಮಲ ಅರಳಿಸುವ ಕನಸನ್ನು ಬಿಜೆಪಿ ನಾಯಕರಲ್ಲಿ ಮೂಡಿಸಿದ್ದರೆ, ಕ್ಷೇತ್ರದಲ್ಲಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೀವ್ರ ಪೈಪೋಟಿ ನಡೆಸಿವೆ. ತನ್ಮೂಲಕ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Tap to resize

Latest Videos

undefined

ಉಪ ಚುನಾವಣೆಯಲ್ಲಿ ಕೆ.ಆರ್‌. ಪೇಟೆ ಕ್ಷೇತ್ರವು ಎರಡು ಕಾರಣಗಳಿಗಾಗಿ ಜನರ ಗಮನ ಸೆಳೆಯುತ್ತಿದೆ.

1. ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ಕ್ಷೇತ್ರದಲ್ಲಿ ರಾಜಕಾರಣ ಸಾಧ್ಯವೇ?

2. ಕಾಂಗ್ರೆಸ್‌-ಜೆಡಿಎಸ್‌ನ ಹಣಾಹಣಿಯ ಈ ತಾಣದಲ್ಲಿ ಕಮಲ ಅರಳುವುದೇ?

ಎರಡು ಬಾರಿ ಜೆಡಿಎಸ್‌ನಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಸಿ. ನಾರಾಯಣಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಾಲೂಕಿನ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಲಿಲ್ಲ ಎಂಬ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಈಗ ಬಿಜೆಪಿಯಿಂದ ಮತ್ತೊಮ್ಮೆ ಅದೃಷ್ಟಪರೀಕ್ಷೆಗಿಳಿದಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್ಸಿಗರ ಪ್ರಬಲ ವಿರೋಧ ಎದುರಾಗುತ್ತಿದ್ದರೂ ಸರ್ಕಾರದ ಅಭಯದೊಂದಿಗೆ ಗೆಲುವಿನ ದಡ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಗಣಿನಾಡಿಗೆ ಮತ್ತೆ ಸಿಂಗ್‌ ಆಗ್ತಾರಾ ಕಿಂಗ್‌? ಗೆಲುವಿನ ಸರಣಿಗೆ ತಡೆಹಾಕಲು ಕಾಂಗ್ರೆಸ್‌ ಕಸರತ್ತು

ಕುಮಾರಸ್ವಾಮಿ ಕಣ್ಣೀರ ಪ್ರಚಾರ

ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣಕರ್ತರಲ್ಲೊಬ್ಬರಾದ ನಾರಾಯಣಗೌಡ ಜೆಡಿಎಸ್‌ಗೆ ದ್ರೋಹ ಮಾಡಿ ಬಿಜೆಪಿ ಸೇರಿದ್ದಾರೆ. ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎನ್ನುವುದೇ ಸದ್ಯಕ್ಕೆ ಕುಮಾರಸ್ವಾಮಿ ಮುಂದಿರುವ ಏಕೈಕ ಗುರಿ. ಇದೇ ಕಾರಣಕ್ಕೆ ಕೆ.ಆರ್‌.ಪೇಟೆ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕುಮಾರಸ್ವಾಮಿ ಪ್ರಚಾರದ ವೇಳೆ ಈಗಾಗಲೇ ಕಣ್ಣೀರು ಹಾಕುವ ಮೂಲಕ ಭಾವನಾತ್ಮಕವಾಗಿ ಮತಗಳನ್ನು ಕ್ರೋಡೀಕರಿಸಲು ಯತ್ನಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ, ಇದು ಶಾಸಕನ ಆಯ್ಕೆ ಚುನಾವಣೆಯಲ್ಲ, ನಾರಾಯಣಗೌಡ ಗೆದ್ದರೆ ಮಂತ್ರಿಯಾಗುತ್ತಾರೆ ಎಂಬ ಅಸ್ತ್ರ ಪ್ರಯೋಗಿಸುತ್ತಿದೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಮೂರೂ ಪಕ್ಷಗಳು ಭರ್ಜರಿ ಪ್ರಚಾರವನ್ನೇ ನಡೆಸುತ್ತಿವೆ. ಆಡಳಿತಾರೂಢ ಪಕ್ಷವಾಗಿರುವ ಕಾರಣ ಬಿಜೆಪಿ ತುಸು ಜಾಸ್ತಿಯೇ ಎಂಬಂತೆ ಪ್ರಚಾರ ನಡೆಸುತ್ತಿದೆ.

ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಕೆ.ಬಿ. ಚಂದ್ರಶೇಖರ್‌ ಕಳೆದ ಬಾರಿ ನಾರಾಯಣಗೌಡ ವಿರುದ್ಧ ಸುಮಾರು 10 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದೇ ಕಾರಣಕ್ಕೆ ಚಂದ್ರಶೇಖರ್‌ ಅನುಕಂಪದ ಅಲೆಯ ಮೇಲೆ ಗೆಲ್ಲುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಹುಸಂಖ್ಯಾತ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾದ ಚಂದ್ರಶೇಖರ್‌ ಆರು ವರ್ಷದಲ್ಲಿ 2 ಬಾರಿ ಸೋತಿದ್ದಾರೆ. ಇದೇ ನನ್ನ ಕೊನೇ ಚುನಾವಣೆ ಎಂದೂ ಪ್ರಚಾರ ಮಾಡುತ್ತಿದ್ದಾರೆ.

ಹಳೆ ಎದುರಾಳಿಗಳು, ಪಕ್ಷ ಅದಲು ಬದಲು; ಕಾಗವಾಡ ಯಾರ ಪಾಲು?

ಜೆಡಿಎಸ್‌ ಪ್ರಾಬಲ್ಯದ ಕ್ಷೇತ್ರ

ಕಾಂಗ್ರೆಸ್‌, ಬಿಜೆಪಿಗೆ ಹೋಲಿಸಿದರೆ ಜೆಡಿಎಸ್‌ನ ಕಾರ್ಯಕರ್ತರ ಪಡೆ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಎರಡು ದಶಕಗಳ ಹಿಂದೆ ಇದ್ದ ಕಾಂಗ್ರೆಸ್‌ನ ಪ್ರಾಬಲ್ಯವನ್ನು ಮುರಿದು ಕ್ಷೇತ್ರವನ್ನೀಗ ಜೆಡಿಎಸ್‌ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್‌ನದ್ದೇ ಪ್ರಾಬಲ್ಯವಿದೆ. ಜತೆಗೆ, ಸ್ಥಳೀಯ ಅಭ್ಯರ್ಥಿಯಾಗಿರುವ ದೇವರಾಜುಗೆ ಈ ಬಾರಿ ಪಕ್ಷ ಟಿಕೆಟ್‌ ನೀಡಿದೆ. ಇನ್ನು ಈ ಚುನಾವಣೆಯಲ್ಲಿ ಇಡೀ ದೇವೇಗೌಡ ಕುಟುಂಬ ನಾರಾಯಣಗೌಡರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕು ಎಂಬ ಹಟಕ್ಕೆ ಬಿದ್ದಂತೆ ಪ್ರಚಾರ ಮಾಡುತ್ತಿದೆ.

ಆದರೆ, ಬದಲಾದ ಪರಿಸ್ಥಿತಿಯಲ್ಲಿ ಒಂದಷ್ಟುಮಂದಿ ಈಗ ಬಿಜೆಪಿ ಕಡೆ ವಾಲಿರುವುದು ಮತ್ತು ಇಡೀ ಸರ್ಕಾರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಬೆಂಬಲಕ್ಕೆ ನಿಂತಿರುವುದೇ ನಾರಾಯಣಗೌಡ ಅವರ ಪ್ಲಸ್‌ ಪಾಯಿಂಟ್‌. ಸ್ವತಃ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ನಾರಾಯಣಗೌಡ ಪರ ಪ್ರಚಾರ ನಡೆಸುತ್ತಿರುವುದು ನಾರಾಯಣಗೌಡ ಅವರಿಗೆ ಹೆಚ್ಚಿನ ಶಕ್ತಿ ನೀಡಿದೆ.

ಬಿಜೆಪಿ ಒಮ್ಮೆಯೂ ಗೆದ್ದಿಲ್ಲ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ತವರೂರು ಕೆ.ಆರ್‌.ಪೇಟೆಯಲ್ಲಿ ಈವರೆಗೆ ಬಿಜೆಪಿಗೆ ಹೇಳಿಕೊಳ್ಳುವಂಥ ಶಕ್ತಿ ಇರಲಿಲ್ಲ. ಕಳೆದ ಬಾರಿ ಪಕ್ಷದಿಂದ ಸ್ಪರ್ಧಿಸಿದ್ದ ಬೂಕನಹಳ್ಳಿ ಮಂಜುನಾಥ್‌ 10 ಸಾವಿರ ಮತಗಳನ್ನೂ ಪಡೆಯುವುದು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಕಮಲ ಅರಳಿಸಲೇಬೇಕು ಎಂದು ಬಿಜೆಪಿ ಪಣ ತೊಟ್ಟಂತೆ ಕೆಲಸ ಮಾಡುತ್ತಿದೆ.

ಜತೆಗೆ, ಯಡಿಯೂರಪ್ಪ ಕೂಡ ‘ನನ್ನ ತವರು ತಾಲೂಕಿನಲ್ಲಿ ಬಿಜೆಪಿ ಈವರೆಗೂ ಒಮ್ಮೆಯೂ ಗೆದ್ದಿಲ್ಲ, ಈ ಬಾರಿಯಾದರೂ ಕಮಲ ಅರಳಿಸಿ ನನ್ನ ಕೊರಗಿಗೆ ಇತಿಶ್ರೀ ಹಾಡಿ’ ಎನ್ನುವ ಮೂಲಕ ಭಾವನಾತ್ಮಕವಾಗಿ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಾರಾಯಣಗೌಡರನ್ನು ಗೆಲ್ಲಿಸಿದರೆ ಮಂತ್ರಿ ಮಾಡುತ್ತೇವೆ, ಶಿಕಾರಿಪುರ ರೀತಿ ಮಾದರಿ ಕ್ಷೇತ್ರ ಮಾಡುತ್ತೇವೆ ಎನ್ನುವ ಭರವಸೆಯನ್ನೂ ಕೊಟ್ಟು ಹೋಗಿದ್ದಾರೆ.

ಸುಮಲತಾ, ಕೃಷ್ಣ ತಟಸ್ಥ

ಕೆ.ಆರ್‌.ಪೇಟೆ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾದಂದಿನಿಂದಲೂ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಷ್‌ ಅವರು ಯಾರ ಪರ ನಿಲ್ಲುತ್ತಾರೆ ಎನ್ನುವ ಕುತೂಹಲವಿತ್ತು. ಆದರೆ, ಮೂರೂ ಪಕ್ಷಗಳ ಕಾರ್ಯಕರ್ತರ ಬೆಂಬಲದೊಂದಿಗೆ ಆಯ್ಕೆಯಾಗಿರುವ ಸುಮಲತಾ ಮಾತ್ರ ಈ ಚುನಾವಣೆಯಲ್ಲಿ ತಟಸ್ಥರಾಗುಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಇನ್ನು ಕ್ಷೇತ್ರದ ಹಿರಿಯ ರಾಜಕಾರಣಿ, ಮಾಜಿ ಸ್ಪೀಕರ್‌ ಕೃಷ್ಣ ಕೂಡ ತಟಸ್ಥವಾಗಿದ್ದಾರೆ. ಮೂರೂ ಪಕ್ಷಗಳ ಅಭ್ಯರ್ಥಿಗಳು ಕೃಷ್ಣ ಅವರ ಬಳಿ ಹೋಗಿ ಬೆಂಬಲ ಕೇಳಿದ್ದಾರೆ. ಆದರೆ, ಕೃಷ್ಣ ಅವರ ಬೆಂಬಲ ಯಾರಿಗೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಸರ್ವಜ್ಞನ ನಾಡಲ್ಲಿ ಕೌರವನ ಸತ್ವಪರೀಕ್ಷೆ; ಬಿ.ಸಿ.ಪಾಟೀಲ್‌ ಕ್ಷೇತ್ರ ಉಳಿಸಿಕೊಳ್ತಾರಾ?

ಒಕ್ಕಲಿಗ ಮತದಾರರೇ ಅಧಿಕ

ಕ್ಷೇತ್ರದಲ್ಲಿ 90 ಸಾವಿರ ಒಕ್ಕಲಿಗ ಮತಗಳಿದ್ದು, ಮೂರೂ ಪಕ್ಷಗಳ ಅಭ್ಯರ್ಥಿಗಳು ಇದೇ ಸಮುದಾಯಕ್ಕೆ ಸೇರಿದವರಾದ ಕಾರಣ ಈ ಬಾರಿ ಕುರುಬರು, ಪರಿಶಿಷ್ಟಜಾತಿ ಮತ್ತು ಪಂಗಡದವರೇ ನಿರ್ಣಾಯಕವಾಗುತ್ತಾರೆ. ಒಕ್ಕಲಿಗರ ಮತಗಳ ಜತೆಗೆ ಉಳಿದ ಮೂರು ಪ್ರಬಲ ಪಂಗಡದ ಮತಗಳನ್ನು ಯಾರು ಹೆಚ್ಚು ಪಡೆದುಕೊಳ್ಳುತ್ತಾರೋ ಅವರು ಗೆಲುವಿನ ಮಾಲೆ ಹಾಕಿಕೊಳ್ಳಲಿದ್ದಾರೆ. ಮತದಾರರ ಒಲವು ಯಾರ ಕಡೆಗಿದೆ ಎಂಬುದನ್ನು ತಿಳಿಯಲು ಡಿ.9 ರವರೆಗೆ ಕಾಯುವುದು ಅನಿವಾರ್ಯವಾಗಿದೆ.

click me!