ಅಶೋಕ್‌ ಅವಧಿಯಲ್ಲಿ ಶೇ.48ರಷ್ಟು ಬಸ್‌ ಪ್ರಯಾಣ ದರ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ ಟಾಂಗ್‌

By Kannadaprabha News  |  First Published Jan 4, 2025, 11:47 AM IST

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.12ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಿದ್ದರು. ಅಲ್ಲದೆ, 2008-2013ರವರೆಗೆ ಅಶೋಕ್‌ ಸಾರಿಗೆ ಸಚಿವರಾಗಿದ್ದಾಗ ಶೇ.47.8ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಆಗ ಪ್ರಯಾಣ ದರ ಏರಿಕೆ ಮಾಡಿದ್ದೇಕೆ.


ಬೆಂಗಳೂರು (ಜ.04): ‘ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.12ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಿದ್ದರು. ಅಲ್ಲದೆ, 2008-2013ರವರೆಗೆ ಅಶೋಕ್‌ ಸಾರಿಗೆ ಸಚಿವರಾಗಿದ್ದಾಗ ಶೇ.47.8ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಆಗ ಪ್ರಯಾಣ ದರ ಏರಿಕೆ ಮಾಡಿದ್ದೇಕೆ?’ ಎಂಬುದನ್ನು ಸ್ಪಷ್ಟಪಡಿಸಿ ನಂತರ ಬಿಜೆಪಿಯವರು ಈಗ ನಮ್ಮ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು. ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಿಸುವ ಸಚಿವ ಸಂಪುಟದ ನಿರ್ಧಾರ ವಿರುದ್ಧದ ಬಿಜೆಪಿ ನಾಯಕರ ಪ್ರತಿಭಟನೆಗೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, ಬಸ್‌ ಪ್ರಯಾಣ ದರ ಹೆಚ್ಚಳದ ಅನಿವಾರ್ಯತೆ ಹಾಗೂ ನಿಗಮಗಳ ಆರ್ಥಿಕ ಪರಿಸ್ಥಿತಿ ವಿವರಿಸಿದ್ದಾರೆ.

ಜತೆಗೆ, ಬಿಜೆಪಿ ಅವಧಿಯಲ್ಲಿ ಎಷ್ಟು ಪ್ರಮಾಣದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಾರೆ ಎಂಬ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಬಸ್‌ ಪ್ರಯಾಣ ದರ ಏರಿಕೆಯ ಅನಿವಾರ್ಯತೆ ಕುರಿತು ಪತ್ರಿಕಾ ಪ್ರಕಟಣೆ ಮತ್ತು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ ರಾಮಲಿಂಗಾರೆಡ್ಡಿ, 2020ರಲ್ಲಿ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ಸಾರಿಗೆ ನಿಗಮಗಳ ಪ್ರಯಾಣ ದರ ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿದಿನ ಸಿಬ್ಬಂದಿ ವೆಚ್ಚ 12.85 ಕೋಟಿ ರು. ಹಾಗೂ ಇಂಧನ ವೆಚ್ಚ 9.16 ಕೋಟಿ ರು. ಇತ್ತು. ಆದರೆ, ಪ್ರಸ್ತುತ ಪ್ರತಿದಿನದ ಸಿಬ್ಬಂದಿ ವೆಚ್ಚ 18.36 ಕೋಟಿ ರು. ಹಾಗೂ ಡೀಸೆಲ್‌ ವೆಚ್ಚ 13.21 ಕೋಟಿ ರು. ಆಗಿದ್ದು, 5 ವರ್ಷದಲ್ಲಿ ಪ್ರತಿದಿನದ ಸಿಬ್ಬಂದಿ ಮತ್ತು ಇಂಧನ ವೆಚ್ಚ 9.56 ಕೋಟಿ ರು. ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Tap to resize

Latest Videos

ನಿರ್ಮಲಾ ಸೀತಾರಾಮನ್ ಏಕೆ ರಾಜೀನಾಮೆ ಕೊಡ್ತಿಲ್ಲ: ರಾಮಲಿಂಗಾರೆಡ್ಡಿ

5 ಸಾವಿರ ಕೋಟಿ ರು. ಹೊಣೆಗಾರಿಕೆ-ಸಾಲ: 2006ರ ಮಾರ್ಚ್ 31ರಲ್ಲಿ 187.97 ಕೋಟಿ ರು. ಹೊಣೆಗಾರಿಕೆ ಮತ್ತು 496.24 ಕೋಟಿ ರು. ಬ್ಯಾಂಕ್‌ ಸಾಲಗಳಿದ್ದವು. ಅದೇ 2024ರ ಮಾ.31ರ ವೇಳೆಗೆ 3,046.32 ಕೋಟಿ ರು. ಹೊಣೆಗಾರಿಕೆ ಮತ್ತು 863.90 ಕೋಟಿ ರು. ಬ್ಯಾಂಕ್‌ ಸಾಲ ಸೇರಿ ಒಟ್ಟು 5,039.13 ಕೋಟಿ ರು. ಹೊಣೆಗಾರಿಕೆ ಹೊಂದಿದೆ. ಇದರಿಂದ ಹೊರಬರಲು ಪ್ರಯಾಣ ದರ ಹೆಚ್ಚಳ ಅನಿವಾರ್ಯ.

ಅಶೋಕ್‌ ಸಮಯದಲ್ಲಿ ಶೇ.47.8ರಷ್ಟು ಹೆಚ್ಚಳ: ಅಂಕಿ-ಅಂಶ ಸಮೇತ ಬಿಜೆಪಿಗೆ ಟಾಂಗ್‌ ನೀಡಿರುವ ರಾಮಲಿಂಗಾರೆಡ್ಡಿ, 2006ರ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶೇ.8.2ರಷ್ಟು ಹಾಗೂ ನಂತರ 2008ರಿಂದ 2013ರ ಬಿಜೆಪಿ ಸರ್ಕಾರದ ಅವಧಿಯಲ್ಲಿ 47.8ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಬಿಜೆಪಿ ಸರ್ಕಾರವಿದ್ದಾಗ ಆರ್‌.ಅಶೋಕ್‌ ಅವರೇ ಸಾರಿಗೆ ಸಚಿವರಾಗಿದ್ದರು. ಅದೇ 2013ರಿಂದ 2018ರವರೆಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೇವಲ ಶೇ. 16.46ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ನಂತರ ಮತ್ತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.12ರಷ್ಟು ದರ ಹೆಚ್ಚಳ ಮಾಡಲಾಗಿದೆ. ಹೀಗೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಪ್ರಯಾಣ ದರ ಹೆಚ್ಚಿಸಲಾಗಿದೆ. ಆಗೆಲ್ಲ ಸುಮ್ಮನಿದ್ದ ಬಿಜೆಪಿ ನಾಯಕರು, ಈಗ ಸುಮ್ಮನೆ ಪ್ರತಿಭಟಿಸುತ್ತಿದ್ದಾರೆ ಎಂದರು.

ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಳ: ಶಕ್ತಿ ಯೋಜನೆ ಕುರಿತು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಶಕ್ತಿ ಯೋಜನೆಗಾಗಿ ಸರ್ಕಾರ ನಿಗಮಗಳಿಗೆ ಈವರೆಗೆ 6,543 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, 1,700 ಕೋಟಿ ರು. ಮಾತ್ರ ಪಾವತಿಸುವುದು ಬಾಕಿಯಿದೆ. ಅಲ್ಲದೆ, ಯೋಜನೆಯಿಂದ ನಿಗಮಗಳ ಆದಾಯದಲ್ಲೂ ಹೆಚ್ಚಳವಾಗಿದ್ದು, 2019-20ರಲ್ಲಿ 8,172.77 ಕೋಟಿ ರು.ಗಳಷ್ಟಿದ್ದ ಸಾರಿಗೆ ಆದಾಯ, 2023-24ರಲ್ಲಿ 10,147.45ರಷ್ಟಾಗಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದ್ದಾರೆ.

ಆರ್ಥಿಕ ನೆರವು ಹೆಚ್ಚಿಸಲು ಮನವಿ: ಸಾರಿಗೆ ನಿಗಮಗಳು ಆರ್ಥಿಕವಾಗಿ ಸದೃಢಗೊಳ್ಳಲು ಸರ್ಕಾರದ ನೆರವು ಅತ್ಯಗತ್ಯ. ಸದ್ಯ ವಾರ್ಷಿಕ 300ರಿಂದ 500 ಕೋಟಿ ರು. ಅನುದಾನ ನೀಡಲಾಗುತ್ತಿದೆ. ಅದನ್ನು ವಾರ್ಷಿಕ 2 ಸಾವಿರ ಕೋಟಿ ರು.ಗೆ ಹೆಚ್ಚಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಿ.ಪಿ.ಯೋಗೇಶ್ವರ್‌ಗೆ ಅವರದ್ಧೇ ಆದ ಮತ ಬ್ಯಾಂಕ್ ಇದೆ: ಸಚಿವ ರಾಮಲಿಂಗಾರೆಡ್ಡಿ

ಒಲ್ಲದ ಮನಸ್ಸಿನಿಂದಲೇ ಬಸ್‌ ಪ್ರಯಾಣ ದರ ಹೆಚ್ಚಿಸಲಾಗಿದೆ. ಆದರೆ, ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಅನಿವಾರ್ಯತೆಯಿಂದ ಪ್ರಯಾಣ ದರ ಹೆಚ್ಚಿಸಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಅತಿಹೆಚ್ಚು ಬಾರಿ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಆದರೆ, ಈಗ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ.
- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

click me!