ಬಿಜೆಪಿ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಆಗಾಗ ಸಾಫ್ಟ್ ಕಾರ್ನರ್ ಮಾತುಗಳಿಗೆ ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ಭರ್ಜರಿ ಉಡುಗೊರೆ ನೀಡಿದ್ದಾರೆ.
ಬೆಂಗಳೂರು, (ಆ.24): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರ 104 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ಬಿಎಸ್ ಯಡಿಯೂರಪ್ಪ ಭರ್ಜರಿ ಉಡುಗೊರೆ ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ 104 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದರು.
ಆದ್ರೆ, ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿದ್ದಂತೆಯೇ ಮಂಜೂರಾಗಿದ್ದ 104 ಕೋಟಿ ಹಣ ತಡೆ ಹಿಡಿದಿದ್ದರು.
ಕುಮಾರಸ್ವಾಮಿ ಅವಧಿಯ ಕಾಮಗಾರಿಗಳು ರದ್ದು ಮಾಜಿ ಪ್ರಧಾನಿ ಕಿಡಿ
ಇದೀಗ ಸ್ವತಃ ಯಡಿಯೂರಪ್ಪ ಅವರೇ ತಡೆ ಹಿಡಿದಿದ್ದ 104 ಕೋಟಿ ರೂಪಾಯಿಗಳ ವಿಶೇಷ ಅನುದಾನದ ಪೈಕಿ ಮೊದಲ ಕಂತಿನ 54 ಕೋಟಿ ರೂಪಾಯಿಗಳ ( 53 ಕೋಟಿ 45 ಲಕ್ಷ ರೂಪಾಯಿಗಳು) ಹಣವನ್ನು ರಿಲೀಸ್ ಮಾಡಿದ್ದಾರೆ.
ಬಾಕಿ ಇರುವ 50 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ ಅಂತ್ಯದೊಳಗೆ ಬಿಡುಗಡೆ ಮಾಡುವುದಾಗಿ ಹಣಕಾಸು ಸಚಿವರು ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಸ್ವತಃ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಸಕ್ತ ಮಂಜೂರಾಗಿರುವ 54 ಕೋಟಿ ರೂಪಾಯಿಗಳ ಕಾಮಗಾರಿಯ ಜೊತೆಗೆ ಉಳಿಕೆ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲು ಅವಕಾಶವಿದೆ ಇದರಿಂದಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 104 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಬಹುದು ಕುಮಾರಸ್ವಾಮಿ ವಿವರ ನೀಡಿದ್ದಾರೆ.
ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸತತವಾಗಿ ಮುಖ್ಯಮಂತ್ರಿ, ಲೋಕೋಪಯೋಗಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದೊಂದಿಗೆ ತಾಲೂಕಿನ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಿದ ಪರಿಣಾಮ ಈ ಆರ್ಥಿಕ ನೆರವು ಲಭ್ಯವಾಗಿದೆ ಎಂದು ಎಚ್ಡಿಕೆ ತಿಳಿಸಿದ್ದಾರೆ.