
ಬೆಂಗಳೂರು (ಮೇ.10): ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿ.ಎಸ್.ಯಡಿಯೂರಪ್ಪ ಕಾರಣ. ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರ ದಾಖಲೆ ಬರೆಯುವಾಗ ಯಡಿಯೂರಪ್ಪ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣೋತ್ಸವ ಪ್ರಯುಕ್ತ ಶನಿವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ಬಿಎಸ್‌ವೈ ಅಭಿಮಾನೋತ್ಸವ’ದಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರ ಐದು ದಶಕಗಳ ಸಾರ್ವಜನಿಕ ಜೀವನ ಹಾಗೂ ಹೋರಾಟಗಳು ಯುವ ಜನತೆಗೆ ಮಾದರಿ ಎಂದು ಮೆಚ್ಚುಗೆ ಸೂಚಿಸಿದರು.
ಯಡಿಯೂರಪ್ಪ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಸಂಘರ್ಷಗಳ ನಡುವೆ ದಕ್ಷಿಣ ಭಾರತದ ಬಿಜೆಪಿಯ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಯಡಿಯೂರಪ್ಪ ಅವರಂತಹ ಮತ್ತೊಬ್ಬ ನಾಯಕನಿಲ್ಲ. ರೈತನ ಮಗನಾಗಿ ಹುಟ್ಟಿದ ಯಡಿಯೂರಪ್ಪ ಅವರು ಕ್ಲರ್ಕ್ ಆಗಿ, ರೈಸ್ ಮಿಲ್‌ನಲ್ಲಿ ಕೆಲಸ ಮಾಡಿ ಬಳಿಕ ಸಾರ್ವಜನಿಕ ಜೀವನಕ್ಕೆ ಬಂದವರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಿಕಾರಿಪುರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿ, ಹೋರಾಟಗಳ ಮುಖಾಂತರ ದೊಡ್ಡ ನಾಯಕನಾಗಿ ಬೆಳೆದವರು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರಥಮ ಬಾರಿಗೆ ಅಧಿಕಾರದ ಬಾಗಿಲು ತೆರೆದವರು. ಇಂಥ ಯಡಿಯೂರಪ್ಪ ಅವರಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಸೌಭಾಗ್ಯ ಸಿಕ್ಕಿದೆ ಎಂದು ಕೊಂಡಾಡಿದರು.
ರೈತರ ಕಲ್ಯಾಣವಾದರೆ, ರಾಜ್ಯದ ಕಲ್ಯಾಣವಾಗುತ್ತದೆ ಎಂದು ದೇಶದಲ್ಲೇ ಮೊದಲ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದವರು ಬಿ.ಎಸ್.ಯಡಿಯೂರಪ್ಪ. ಈ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಐವತ್ತು ವರ್ಷಗಳ ಕಾಲ ಜನಸೇವೆ ಮತ್ತು ರೈತರ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ಸಾಮಾನ್ಯವಾಗಿ ಎರಡು ರೀತಿಯ ನಾಯಕರು ಇರುತ್ತಾರೆ. ಇರುವ ರಸ್ತೆಯಲ್ಲಿ ಚಲಿಸುವವರು ಮತ್ತು ಹೊಸ ಮಾರ್ಗದಲ್ಲಿ ಚಲಿಸುವವರು. ಯಡಿಯೂರಪ್ಪ ಅವರು ತಮ್ಮದೇ ಆದ ಪ್ರತ್ಯೇಕ ಹಾದಿ ಸೃಷ್ಟಿಸಿ ಇತರರಿಗೂ ದಾರಿ ತೋರಿಸಿಕೊಟ್ಟವರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಸಾಧಾರಣ ಕುಟುಂಬದಿಂದ ಬಂದು ಇಚ್ಛಾಶಕ್ತಿ, ಸಂಘದ ಸಂಸ್ಕಾರ, ರಾಷ್ಟ್ರಭಕ್ತಿ, ಸೈದ್ಧಾಂತಿಕ ನಿಲುವುಗಳೊಂದಿಗೆ ಅವರು ದೊಡ್ಡ ನಾಯಕನಾಗಿ ಬೆಳೆದಿದ್ದಾರೆ ಎಂದು ಶ್ಲಾಘಿಸಿದರು.
ಬಸ್ ಸಿಗದಿದ್ದಾಗ ಸೈಕಲ್‌ನಲ್ಲಿ ರಾಜ್ಯದ ಹಳ್ಳಿ ಹಳ್ಳಿಗೆ ಸುತ್ತಾಡಿ ಬಿಜೆಪಿಯನ್ನು ಸದೃಢವಾಗಿ ಕಟ್ಟಿದ್ದಾರೆ. ರೈತರ ಪರವಾಗಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಹೋರಾಟ ಮಾಡಿದ್ದಾರೆ. ಈ ಮುಖಾಂತರ ರೈತ ನಾಯಕನಾಗಿ ಹೊರಹೊಮ್ಮಿದ್ದಾರೆ. ತಮ್ಮ ಹೋರಾಟ ದಿನಗಳಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ ಎಂದು ಯಡಿಯೂರಪ್ಪ ಅವರ ಬದುಕು ಮತ್ತು ಸಾಧನೆಗಳನ್ನು ಸ್ಮರಿಸಿದರು.
ನಾನು 2014ರಿಂದಲೂ ಕರ್ನಾಟಕಕ್ಕೆ ಬರುತ್ತಿದ್ದೇನೆ. ಎಲ್ಲ ಮತ-ಸಂಪ್ರದಾಯಗಳ ಸ್ವಾಮೀಜಿಗಳು ಈ ವೇದಿಕೆಯಲ್ಲಿದ್ದಾರೆ. ಇದು ಯಡಿಯೂರಪ್ಪ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತೋರಿಸುತ್ತದೆ. ಯಡಿಯೂರಪ್ಪ ಅವರದು ಮಾದರಿ ಜೀವನ. ನಾನು ಯಡಿಯೂರಪ್ಪ ಅವರ ಪರ ಮೂರು ಚುನಾವಣೆಗಳಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಜನರು ಸಮಸ್ಯೆಗಳನ್ನು ಹೇಳಿಕೊಂಡಾಗ ಯಡಿಯೂರಪ್ಪ ಅವರು ಅದನ್ನು ಸಣ್ಣ ಡೈರಿಯಲ್ಲಿ ಬರೆದುಕೊಳ್ಳುವುದನ್ನು ನೋಡಿದ್ದೇನೆ. ಸಣ್ಣ ಸಮಸ್ಯೆಗಳಿಗೂ ಅವರು ಸ್ಪಂದಿಸುವ ಗುಣವನ್ನು ಕಣ್ಣಾರೆ ಕಂಡಿದ್ದೇನೆ ಎಂದು ಯಡಿಯೂರಪ್ಪ ಅವರ ಕಾರ್ಯ ವೈಖರಿಯನ್ನು ಅಮಿತ್ ಶಾ ಗುಣಗಾನ ಮಾಡಿದರು.
ಇವತ್ತು ಬೆಂಗಳೂರು ಗ್ಲೋಬಲ್ ಟೆಕ್ ನಗರವಾಗಿ ಬೆಳೆಯುವಲ್ಲಿ ಯಡಿಯೂರಪ್ಪ ಅವರ ಪಾತ್ರ ದೊಡ್ಡದಿದೆ. ಅವರ ಅವಧಿಯಲ್ಲಿ ಕರ್ನಾಟಕ ಅಭಿವೃದ್ಧಿ ಸಾಧಿಸಿದೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ರಾಜ್ಯದ ಅಭಿವೃದ್ಧಿಗಾಗಿ ಸಾಕಷ್ಟು ದುಡಿದಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಯಡಿಯೂರಪ್ಪ ಅವರಿಗೆ ಸಚಿವರಾಗುವ ಅವಕಾಶವಿತ್ತು. ಆದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕು ಎಂದು ಸಚಿವ ಸ್ಥಾನ ನಿರಾಕರಿಸಿದ್ದರು ಎಂದು ಯಡಿಯೂರಪ್ಪ ಅವರ ಬದ್ಧತೆಯನ್ನು ಹೊಗಳಿದರು.
ಯಡಿಯೂರಪ್ಪ ಅವರ ಆರೋಗ್ಯ ಚೆನ್ನಾಗಿದೆ. ಅವರು ಶತಾಯುಷಿಯಾಗಿ ಬಾಳಬೇಕು. ದೀರ್ಘಕಾಲ ಬಿಜೆಪಿಗೆ ಮಾರ್ಗದರ್ಶನ ಮಾಡಬೇಕು. ಯಡಿಯೂರಪ್ಪ ರಾಜಕೀಯ ಜೀವನ ಯುವ ಕಾರ್ಯಕರ್ತರು ಹಾಗೂ ತಮಗೆಲ್ಲರಿಗೂ ಮಾದರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಇವತ್ತು ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಇದೇ ದಿನ ಚಿತ್ರದುರ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಬದುಕಿಗೆ 50 ವರ್ಷ ತುಂಬಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷ ತಂದಿದೆ ಎಂದು ಅಮಿತ್ ಶಾ ಹೇಳಿದರು.
ಚಿತ್ರದುರ್ಗವು ರಾಜ ಮದಕರಿ ನಾಯಕರ ನಾಡು. ಹೈದರಾಲಿಯನ್ನು ಸೋಲಿಸಿದ ಓಡಿಸಿದ ವೀರರ ನಾಡು. ಈ ನಾಡಿನ ಹೆಣ್ಣು ಮಗಳು ಒನಕೆ ಓಬವ್ವ ಅವರ ಹೋರಾಟ ಎಲ್ಲರಿಗೂ ಪ್ರೇರಣೆ ಮತ್ತು ಸ್ಫೂರ್ತಿ ಎಂದು ಸ್ಮರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.