MB Patil Interview: ಯಡಿಯೂರಪ್ಪ ಸ್ಥಿತಿಯೇ ಬೊಮ್ಮಾಯಿಗೂ ಬರುತ್ತೆ: ಎಂಬಿಪಾ

Published : May 02, 2023, 02:07 PM ISTUpdated : May 02, 2023, 04:15 PM IST
MB Patil Interview: ಯಡಿಯೂರಪ್ಪ ಸ್ಥಿತಿಯೇ ಬೊಮ್ಮಾಯಿಗೂ ಬರುತ್ತೆ: ಎಂಬಿಪಾ

ಸಾರಾಂಶ

ಶೆಟ್ಟರ್‌, ಸವದಿ ಸೋಲಿಸಲು ಬಿಎಸ್‌ವೈ ಬದಲು ತಾಕತ್ತಿದ್ದರೆ ಜೋಶಿ, ಸಂತೋಷ್‌ ಮುಂದೆ ಬಿಡಬೇಕಿತ್ತು. ಲಿಂಗಾಯತರಿಗೆ ಇನ್ನು ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತೆ. ಅಪಪ್ರಚಾರ ತೊಳೆದುಕೊಂಡು ಹೋಗುತ್ತಿದೆ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್‌ ಸಂದರ್ಶನದಲ್ಲಿ ಹೇಳಿದ್ದಾರೆ.  

ಎಸ್‌.ಗಿರೀಶ್‌ಬಾಬು

 ಬೆಂಗಳೂರು (ಮೇ.2): ಕಾಂಗ್ರೆಸ್‌ನ ‘ಫೈರ್‌ ಬ್ರಾಂಡ್‌’ ನಾಯಕರಲ್ಲಿ ಅಗ್ರಗಣ್ಯ ಎಂ.ಬಿ. ಪಾಟೀಲ್‌. ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಎಂ.ಬಿ. ಪಾಟೀಲ್‌ ಪಕ್ಷದ ಪ್ರಚಾರಾಂದೋಲನಗಳ ಹಿಂದಿನ ಧೀಶಕ್ತಿಯಾಗಿ ಕೆಲಸ ಮಾಡಿದವರು. ಲಿಂಗಾಯತ ಸಮುದಾಯದ ಒಲವನ್ನು ಪಕ್ಷದತ್ತ ತಿರುಗಿಸಲು ಸಾಕಷ್ಟು ಶ್ರಮ ವಹಿಸುತ್ತಿರುವ ಎಂ.ಬಿ. ಪಾಟೀಲ್‌ ಇದೇ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ ಅವರ ಪಕ್ಷ ಸೇರ್ಪಡೆಯಲ್ಲೂ ತಮ್ಮದೇ ಆದ ಪಾತ್ರ ನಿರ್ವಹಿಸಿದವರು. ಚುನಾವಣೆಗೆ ಇನ್ನು ಕೆಲವೇ ದಿನವಿರುವಾಗ ಪ್ರಚಾರಕ್ಕಾಗಿ ಕಾಂಗ್ರೆಸ್‌ ಮಾಡಿಕೊಂಡಿರುವ ಸಿದ್ಧತೆಯೇನು? ಬಿಜೆಪಿಯ ಹಲವು ಲಿಂಗಾಯತ ನಾಯಕರು ಪಕ್ಷ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಮಾನಕ್ಕೆ ಆತಂಕವಿದೆಯೇ? ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ನ್ಯಾಯ ಒದಗಿಸುವುದೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಎಂ.ಬಿ. ಪಾಟೀಲ್‌.

ಕಾಂಗ್ರೆಸ್‌ನ ಪ್ರಶ್ನಾತೀತ ಲಿಂಗಾಯತ ನಾಯಕ ನೀವು. ಇದೀಗ ಶೆಟ್ಟರ್‌, ಸವದಿ ಬಂದಿದ್ದಾರೆ. ಪೈಪೋಟಿಯ ಆತಂಕವಿದೆಯೇ?

ಜಗದೀಶ್‌ ಶೆಟ್ಟರ್‌ ಅವರ ಕಾಂಗ್ರೆಸ್‌ ಸೇರ್ಪಡೆಯಲ್ಲಿ ನಾನು ಮಹತ್ವದ ಪಾತ್ರ ನಿರ್ವಹಿಸಿದ್ದೇನೆ. ಪ್ರತಿಸ್ಪರ್ಧಿ ಎಂಬ ಭಾವನೆ ಇದ್ದಿದ್ದರೆ ಅದನ್ನು ಮಾಡುತ್ತಿರಲಿಲ್ಲ. ಅಲ್ಲದೆ, ಶೆಟ್ಟರ್‌, ಸವದಿ ಇದೀಗ ಪಕ್ಷಕ್ಕೆ ಬಂದಿದ್ದಾರೆ. ನಾವು ಪಕ್ಷದಲ್ಲಿ ಹಳಬರು. ನಮಗೆ ನಮ್ಮ ಸ್ಥಾನಮಾನ ಏನಿದೆಯೋ ಅದು ಇದ್ದೇ ಇರುತ್ತದೆ. ಹೊಸದಾಗಿ ಬಂದವರಿಗೆ ಯಾವ ಸ್ಥಾನಮಾನ ಸಿಗಬೇಕೋ ಅದು ಅವರಿಗೂ ಸಿಗುತ್ತದೆ. ಪಕ್ಷ ನನ್ನ ಹಿತಾಸಕ್ತಿಯನ್ನು ಕಾಪಾಡುತ್ತದೆ. ಅದಕ್ಯಾಕೆ ಅಸೂಯೆ ಪಡಬೇಕು?

ಸಿದ್ದರಾಮಯ್ಯರನ್ನು ಕಾಂಗ್ರೆಸ್‌ಗೆ ಸೇರಿಸಿ ತಪ್ಪು ಮಾಡಿದೆ ಎಂದು ಹಿಂದೆ ಕುರುಬ ಸಮುದಾಯದ ವಿಶ್ವನಾಥ್‌ ಪೇಚಾಡಿಕೊಂಡಿದ್ದ ಉದಾಹರಣೆಯಿದೆ?

ಜಗದೀಶ್‌ ಶೆಟ್ಟರ್‌ ಅವರು ತಮಗೆ ಈ ಚುನಾವಣೆ ಸಾಕು ಎಂದು ಹೇಳಿದ್ದಾರೆ. ನಮಗೆ ಇನ್ನೂ 15-20 ವರ್ಷದ ರಾಜಕಾರಣ ಇದೆ. ಇಷ್ಟಕ್ಕೂ ಪಕ್ಷಕ್ಕೆ ಏನು ಹಿತವೋ ಅದನ್ನು ನಾವು ಮಾಡಬೇಕು. ಎಲ್ಲದರಲ್ಲೂ ಸ್ವಂತ ಹಿತಾಸಕ್ತಿ ನೋಡಬಾರದಲ್ಲ.

ಇಷ್ಟಕ್ಕೂ ಸವದಿ, ಶೆಟ್ಟರ್‌ ಸೇರ್ಪಡೆಯಿಂದ ಪಕ್ಷಕ್ಕೆ ಏನು ಲಾಭ?

ಲಕ್ಷ್ಮಣ ಸವದಿ ಗಾಣಿಗ ಸಮುದಾಯದವರು. ವಿಜಯಪುರ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಸುಮಾರು 10 ರಿಂದ 15 ಕ್ಷೇತ್ರಗಳಲ್ಲಿ ಅವರ ಪ್ರಭಾವ ಪಕ್ಷಕ್ಕೆ ನೆರವಾಗುತ್ತದೆ. ಇನ್ನು ಶೆಟ್ಟರ್‌ ಅವರಂತೂ ಮರ್ಚೆಂಟ್‌ ಕಮ್ಯುನಿಟಿಯಾದ ಬಣಜಿಗರು. ಅದು ಜಾಗೃತ ಸಮುದಾಯ. ಆ ಸಮುದಾಯದವರು ತಾವು ಮಾತ್ರವಲ್ಲ. ಇನ್ನೂ ಹತ್ತು ಮಂದಿಯ ಮತವನ್ನು ಪ್ರಭಾವಿಸುವ ಕ್ಷಮತೆ ಹೊಂದಿರುತ್ತಾರೆ. ಹೀಗಾಗಿ ಈ ಸೇರ್ಪಡೆ ಕಾಂಗ್ರೆಸ್‌ಗೆ ಬಹಳ ಅನುಕೂಲ ಮಾಡಿಕೊಡಲಿದೆ.

ಅದು ಹೇಗೆ ಸಾಧ್ಯ? ಸಮುದಾಯದ ಪ್ರಭಾವಿ ನಾಯಕ ಯಡಿಯೂರಪ್ಪ ಬಿಜೆಪಿಯಲ್ಲೇ ಇದ್ದಾರಲ್ಲ?

ಬಿಜೆಪಿಯವರು ಯಡಿಯೂರಪ್ಪ ಅವರಿಗೆ ಮೊದಲ ಅವಧಿಯಲ್ಲೂ ಪರಿಪೂರ್ಣ ಅವಧಿ ಆಡಳಿತ ನಡೆಸಲು ಬಿಡಲಿಲ್ಲ. ಈ ಬಾರಿ ಅಧಿಕಾರಕ್ಕೆ ಬರಲು ‘ಆಪರೇಷನ್‌ ಕಮಲ’ದಂತಹ ಕೆಟ್ಟಕೆಲಸ ಮಾಡುವಂತೆ ಅವರಿಗೆ ಪ್ರೇರೇಪಿಸಿದರು. ಈ ಕುಕೃತ್ಯಕ್ಕೆ 1700 ಕೋಟಿ ರು. ವೆಚ್ಚ ಮಾಡಿ ಶಾಸಕರ ಆಪರೇಷನ್‌ ಮಾಡಲಾಯ್ತು. ಇದರಿಂದ ಕೆಟ್ಟಹೆಸರು ಯಡಿಯೂರಪ್ಪ ಅವರಿಗೆ ಬಂತು. ಈ ರೀತಿ ರಚನೆಗೊಂಡ ಸರ್ಕಾರದಲ್ಲೂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಬೇಗ ತೆಗೆದುಹಾಕಿದರು.

ಲಿಂಗಾಯತ ಸಮುದಾಯದ ಬೊಮ್ಮಾಯಿ ಮುಖ್ಯಮಂತ್ರಿಯಾದರಲ್ಲ?

ಒಬ್ಬ ಲಿಂಗಾಯತ ನಾಯಕನನ್ನು ತೆಗೆದು ಮತೊಬ್ಬ ಲಿಂಗಾಯತ ನಾಯಕನನ್ನು ಮುಖ್ಯಮಂತ್ರಿ ಮಾಡಲು ಆ ಬದಲಾವಣೆಯನ್ನು ಬಿಜೆಪಿ ಮಾಡಲಿಲ್ಲ. ಆದರೆ, ಒತ್ತಡ ನಿರ್ಮಾಣವಾಗಿದ್ದರಿಂದ ಲಿಂಗಾಯತರ ಕ್ರೋಧಕ್ಕೆ ಸಿಲುಕಬೇಕಾಗುತ್ತದೆ ಎಂದು ಅನಿವಾರ್ಯದಿಂದ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ವಾಸ್ತವವಾಗಿ ಹಿಡನ್‌ ಅಜೆಂಡಾ ಬೇರೆಯೇ ಇತ್ತು.

ಏನದು?

ಆ ಹಿಡನ್‌ ಅಜೆಂಡಾ ಬಗ್ಗೆ ಜೆಡಿಎಸ್‌ ವರಿಷ್ಠ ಕುಮಾರಸ್ವಾಮಿ ಬಹಿರಂಗವಾಗಿಯೇ ಹೇಳಿದ್ದಾರಲ್ಲ. ಅದನ್ನು ನನ್ನ ಬಾಯಿಂದ ಏಕೆ ಹೇಳಿಸುತ್ತಿರಿ. ಯಡಿಯೂರಪ್ಪ ಅವರನ್ನು ಬದಲಾಯಿಸಿದಾಗ ಲಿಂಗಾಯತ ಸಮುದಾಯ ಹಾಗೂ ಸ್ವಾಮೀಜಿಗಳು ತೀವ್ರ ಪ್ರತಿಭಟನೆಗೆ ಮುಂದಾದರು. ಇದರಿಂದ ನಿರ್ಮಾಣವಾದ ಪರಿಸ್ಥಿತಿಯಿಂದಾಗಿ ಬಸವರಾಜ ಬೊಮ್ಮಾಯಿ ‘ಆಕ್ಸಿಡೆಂಟಲ್‌ ಚೀಫ್‌ ಮಿನಿಸ್ಟರ್‌’ ಆದರಷ್ಟೇ. ಈ ಚುನಾವಣೆ ನಂತರ ಬೊಮ್ಮಾಯಿಗೂ ಯಡಿಯೂರಪ್ಪ ಅವರಿಗೆ ಆದ ಸ್ಥಿತಿಯೇ ಆಗುತ್ತದೆ.

ಬಿಜೆಪಿಯ ಅಜೆಂಡಾ! ಬಿಡಿಸಿ ಹೇಳುವಿರಾ?

ಬಿಜೆಪಿಯ ಪಟ್ಟಭದ್ರರಿಗೆ ಲಿಂಗಾಯತ ಸಮುದಾಯಕ್ಕೆ ಅಧಿಕಾರ ಕೊಡುವ ಮನಸ್ಸು ಇಲ್ಲ. ಆದರೆ, ಅಧಿಕಾರಕ್ಕಾಗಿ ಲಿಂಗಾಯತ ಸಮುದಾಯವನ್ನು ಬಳಸಿಕೊಳ್ಳುತ್ತಿತ್ತು. ಈಗ ತಮ್ಮ ಗುರಿ ಮುಟ್ಟುವ ಹಂತ ತಲುಪಿರುವ ಕಾರಣ ಲಿಂಗಾಯತ ಸಮುದಾಯವನ್ನು ಕಸದ ಬುಟ್ಟಿಗೆ ಬಿಸಾಕುತ್ತಿದೆ. ಇದಕ್ಕಿಂತ ಕೆಟ್ಟಕೆಲಸವೆಂದರೆ ಡಿವೈಡ್‌ ಅಂಡ್‌ ರೂಲ್‌ ಪಾಲಿಸಿ ಅನುಸರಿಸುತ್ತಿದೆ. ಪಕ್ಷ ತೊರೆದ ಶೆಟ್ಟರ್‌ ಹಾಗೂ ಸವದಿ ಅವರನ್ನು ರಾಜಕೀಯವಾಗಿ ಮುಗಿಸಲು ಯಡಿಯೂರಪ್ಪ ಅವರಿಗೆ ಸುಪಾರಿ ನೀಡಿದೆ. ಯಡಿಯೂರಪ್ಪ ಅವರೇ ಏಕೆ ಈ ಕಾರ್ಯ ಮಾಡಬೇಕು. ತಾಕತ್‌ ಇದ್ದರೆ ಶೆಟ್ಟರ್‌ ಅವರನ್ನು ಸೋಲಿಸಲು ಪ್ರಹ್ಲಾದ್‌ ಜೋಶಿ ಹಾಗೂ ಬಿ.ಎಲ್‌. ಸಂತೋಷ್‌ ಅವರನ್ನು ಮುಂದೆ ಬಿಡಬೇಕಿತ್ತು. ಅಂದರೆ, ಲಿಂಗಾಯತರ ನಡುವೆ ಒಳ ಜಗಳ ತಂದಿಡುವ ಕುತಂತ್ರ ನಡೆದಿದೆ.

ಆದರೂ ಲಿಂಗಾಯತ ಸಮುದಾಯ ಬಿಜೆಪಿಯ ಗಟ್ಟಿಮತ ಬ್ಯಾಂಕ್‌?

ಇಲ್ಲ, ವಾಸ್ತವವಾಗಿ ಲಿಂಗಾಯತ ಸಮಾಜದ ತತ್ವ ಸಿದ್ಧಾಂತ ಬಿಜೆಪಿ-ಆರ್‌ಎಸ್‌ಎಸ್‌ ತತ್ವ ಸಿದ್ಧಾಂತಕ್ಕಿಂತ ಬಹಳ ಭಿನ್ನ. ಲಿಂಗಾಯತ ಸಮಾಜ ಸೆಕ್ಯುಲರ್‌, ಸಮಾನತೆ, ಜಾತಿರಹಿತ ಸಮಾಜದ ಪರವಾಗಿದೆ. ಹೀಗಾಗಿ ಲಿಂಗಾಯತ ಮನಸ್ಥಿತಿ ಕಾಂಗ್ರೆಸ್‌ನ ಸಿದ್ಧಾಂತಕ್ಕೆ ಹತ್ತಿರವಾಗಿದೆ. ಬಿಜೆಪಿ ಆರ್‌ಎಸ್‌ಎಸ್‌ನ ಚಾತುರ್ವರ್ಣ ಹಾಗೂ ಮನುಸ್ಮೃತಿಗೆ ವಿರುದ್ಧವಾಗಿದೆ. ಈ ರೀತಿಯಿದ್ದರೂ ಬಿಜೆಪಿಯವರು ಅಧಿಕಾರಕ್ಕೆ ಬರಲು ಲಿಂಗಾಯತರನ್ನು ಬಳಸಿಕೊಂಡರು. ಈಗ ಗುರಿ ಮುಟ್ಟಿದ್ದಾರೆ. ಹೀಗಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದು ಕೇವಲ ಲಿಂಗಾಯತರಿಗೆ ಮಾತ್ರವಲ್ಲ. ಆ ಪಕ್ಷವನ್ನು ಬೆಂಬಲಿಸುವ ಎಲ್ಲ ಸಮುದಾಯಗಳಿಗೂ ಇದೇ ಸ್ಥಿತಿ.

ಅಂದರೆ?

ಈಗ ಬಿಜೆಪಿಯಲ್ಲಿ ಲಿಂಗಾಯತರಿಗೆ ಬಂದೊದಗಿರುವ ಸ್ಥಿತಿಯೇ ಮುಂದೆ ಒಕ್ಕಲಿಗರಿಗೂ ಆಗುತ್ತದೆ. ಪರಿಶಿಷ್ಟರು, ಶೂದ್ರರು ಎಲ್ಲರಿಗೂ ಬರುತ್ತದೆ. ಅವರಿಗೆ, ತಾವಾಗೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಅಂತ ಹೇಳಿ ಅವರು ನಮ್ಮೆಲ್ಲರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.

ಇದರ ಪರಿಣಾಮ ಏನಾಗಬಹುದು?

ಬಿಜೆಪಿಯ ಈ ಪಟ್ಟಭದ್ರ ಹಿತಾಸಕ್ತಿಗಳ ನಿಜ ಬಣ್ಣ ಲಿಂಗಾಯತರಿಗೆ ಅರ್ಥವಾಗಿದೆ. ಹೀಗಾಗಿ ಲಿಂಗಾಯತರಲ್ಲಿ ಶೇ. 50ರಷ್ಟುಮಂದಿ ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಾರೆ. ಲಿಂಗಾಯತರು ಮಾತ್ರವಲ್ಲ. ಈ ಭ್ರಷ್ಟಬಿಜೆಪಿ ಸರ್ಕಾರದ ಬಗ್ಗೆ ಎಲ್ಲ ಸಮುದಾಯಗಳು ಬೇಸರಗೊಂಡಿವೆ. ಹೀಗಾಗಿ ಎಲ್ಲ ಸಮುದಾಯಗಳು ಕಾಂಗ್ರೆಸ್‌ ಬೆಂಬಲಿಸಲಿವೆ.

ಈ ಬಾರಿ ಲಿಂಗಾಯತರು ಕಾಂಗ್ರೆಸ್ಸಿಗೆ ಬೆಂಬಲ ನೀಡಿದರೆ, ಕಾಂಗ್ರೆಸ್‌ ಲಿಂಗಾಯತರಿಗೆ ಏನು ನೀಡುತ್ತದೆ?

ಇತಿಹಾಸ ಗಮನಿಸಿದರೆ ಕಾಂಗ್ರೆಸ್‌ ಲಿಂಗಾಯತರಿಗೆ ಉನ್ನತ ಹುದ್ದೆಗಳನ್ನು ನೀಡಿದೆ. ಬಿ.ಡಿ. ಜತ್ತಿ ಅವರನ್ನು ಉಪ ರಾಷ್ಟ್ರಪತಿ ಮಾಡಿತ್ತು. ನಿಜಲಿಂಗಪ್ಪ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿತ್ತು. ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಮಾಡಿತ್ತು. ಮಹಾರಾಷ್ಟ್ರದಲ್ಲಿ ಶಿವರಾಜ ಪಾಟೀಲರನ್ನು ಲೋಕಸಭಾ ಸ್ಪೀಕರ್‌ ಮಾಡಿತ್ತು. ಹೀಗಾಗಿ ಅವಕಾಶ ಬಂದಾಗ ಸ್ಥಾನ ನೀಡುತ್ತದೆ. ಈ ಬಾರಿ ಲಿಂಗಾಯತ ಸಮುದಾಯಕ್ಕೆ ಕಳೆದ ಬಾರಿಗಿಂತ ಎಂಟು ಹೆಚ್ಚುವರಿ ಸೀಟು ನೀಡಿದೆ. ಲಿಂಗಾಯತರ ಹೋಂ ಕಮಿಂಗ್‌ ಆರಂಭವಾಗಿದೆ. ಲಿಂಗಾಯತರ ಶಕ್ತಿ, ಲಿಂಗಾಯತರ ಪ್ರಭಾವದ ಅರಿವು ಕಾಂಗ್ರೆಸ್‌ ಪಕ್ಷಕ್ಕೆ ಆಗಿದೆ.

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ನ್ಯಾಯ ನೀಡಿತೆ?

ಒಂದು ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿ 91 ಮಂದಿ ಲಿಂಗಾಯತ ಶಾಸಕರು ಇದ್ದರು. ಮೀಸಲು ಕ್ಷೇತ್ರಗಳು ಬಂದ ನಂತರ ಆ ಸ್ಥಾನಗಳ ಸಂಖ್ಯೆ 70ಕ್ಕೆ ಬಂದಿತ್ತು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 43 ಮಂದಿ ಲಿಂಗಾಯತರಿಗೆ ಟಿಕೆಟ್‌ ಕೊಟ್ಟಿತ್ತು. ಈ ಬಾರಿ 51 ಮಂದಿ ಲಿಂಗಾಯತರಿಗೆ ಟಿಕೆಟ್‌ ನೀಡಿದೆ. ಎಲ್ಲ ಒಟ್ಟೊಟ್ಟಿಗೆ ಆಗುವುದಿಲ್ಲ. ಹಂತ ಹಂತವಾಗಿ ಪ್ರಾಶಸ್ತ್ಯ ಹೆಚ್ಚಾಗುತ್ತಾ ಹೋಗುತ್ತದೆ.

ಕುರುಬ ಹಾಗೂ ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿ ಹುದ್ದೆ ದಾವೆದಾರರಾಗಿದ್ದಾರೆ. ಹಾಗಿದ್ದರೆ, ಲಿಂಗಾಯತರು?

ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಉನ್ನತ ನಾಯಕರು. ಅದೇ ರೀತಿ ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರು. ಅವರು ಪಕ್ಷ ಕಟ್ಟಿದ್ದಾರೆ. ಅವರ ಜತೆಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟುಮಂದಿ ಸಮರ್ಥರಿದ್ದಾರೆ. ಆದರೆ, ಈಗ ಅದು ಮುಖ್ಯವಲ್ಲ. ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ. ಅನಂತರ ಶಾಸಕರ ಸಲಹೆ ಮೇರೆಗೆ ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಹಿಂದೆ ಎಸ್‌.ಎಂ. ಕೃಷ್ಣ ಅವರು ಮುಂಚೂಣಿಯಲ್ಲಿ ಇದ್ದಾಗಲೂ ಕಾಂಗ್ರೆಸ್‌ ಹೈಕಮಾಂಡ್‌ ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲವೇ?

ಲಿಂಗಾಯತ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ ಸಿಎಂ ಹುದ್ದೆ ಸಿಗಬಹುದೇ?

ಯಾವುದೇ ಒಂದೇ ಜಾತಿಯಿಂದ ಪಕ್ಷ ಅಧಿಕಾರಕ್ಕೆ ಬರಲು ಆಗುವುದಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ 130 ಸ್ಥಾನ ಗಳಿಸಿ, ಲಿಂಗಾಯತರು 30 ಮಂದಿ ಶಾಸಕರಾದರು ಅಂತ ಸಿಎಂ ಆಗಿ ಬಿಡಲು ಸಾಧ್ಯವೇ? ಮುಖ್ಯಮಂತ್ರಿ ಯಾರು ಎಂಬುದು ಈಗ ಮುಖ್ಯವಲ್ಲ. ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ.

ಚಿತ್ತಾಪುರದಲ್ಲಿ ಬಿಜೆಪಿ ಹೊಸಮುಖ ತಂತ್ರ, ಪ್ರಿಯಾಂಕ್‌ ಖರ್ಗೆ ಹ್ಯಾಟ್ರಿಕ್‌ ಕನಸು ನನಸಾಗುತ್ತಾ?

ಅದು ಏಕೆ?

ಈ ಹಿಂದೆ ಲಿಂಗಾಯತರು ಎಂದರೆ ಬರೇ ಬಿಜೆಪಿಗೆ ಬೆಂಬಲ ನೀಡುವವರು ಎಂದು ಅಪಪ್ರಚಾರ ಮಾಡಲಾಗಿತ್ತು. ಈಗ ಆ ಅಪಪ್ರಚಾರ ತೊಳೆದುಕೊಂಡು ಹೋಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ಕೂಡ ಲಿಂಗಾಯತರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡುತ್ತದೆ. ಸಮುದಾಯದ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡುತ್ತದೆ.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ, ಮೋದಿಯೇ ಗೇಮ್‌ಚೇಂಜರ್‌: ಜೀ-ಮ್ಯಾಟ್ರಿ

ಆದರೂ, ಸಮುದಾಯದ ಎಲ್ಲ ಒಳ ಜಾತಿಗಳಿಗೂ ನಾಯಕ ಎನಿಸುವ ಯಡಿಯೂರಪ್ಪರಂತಹ ನಾಯಕತ್ವ ಕಾಂಗ್ರೆಸ್ಸಿನಲ್ಲಿಲ್ಲ?

ಯಡಿಯೂರಪ್ಪ ಅವರಿಗೂ ನಮಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರ ಕಾಲ ಮುಗಿದೋಯ್ತಲ್ಲ. ಬಿಜೆಪಿಯವರು ಈಗ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುತ್ತಾರಾ? ಪಾಪ, ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡದೇ ಕೇವಲ ಸದಸ್ಯನನ್ನಾಗಿ ಮಾಡಿದ್ದಾರೆ. ಈಗಾಗಿ ಯಡಿಯೂರಪ್ಪ ಅವರ ಹಂತ ಮುಗಿದು ಹೋಗಿದೆ. ಈಗ ಏನಿದ್ದರೂ ಲಿಂಗಾಯತ ನಾಯಕರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಬಳಿ ಇರುವ ಒಂದು ಟೂಲ್‌ (ಸಲಕರಣೆ) ಆಗಿ ಯಡಿಯೂರಪ್ಪ ಅವರ ಬಳಕೆಯಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ