Athani Constituency: ಹೈವೋಲ್ಟೇಜ್‌ ಕ್ಷೇತ್ರ ಅಥಣಿ ಈ ಬಾರಿ ಕಾಂಗ್ರೆಸ್ ಪಾಲಾಗುತ್ತಾ?

By Kannadaprabha News  |  First Published May 2, 2023, 1:54 PM IST

ಅಥಣಿ ಹೈವೋಲ್ಟೇಜ್‌ ಕ್ಷೇತ್ರ.  ಕಳೆದ ಬಾರಿಯ ಅಭ್ಯರ್ಥಿಗಳೇ ಈ ಬಾರಿಯೂ ಮುಖಾಮುಖಿ, ಆದರೆ ಪಕ್ಷ ಮಾತ್ರ ಅದಲು, ಬದಲು  2004ರಿಂದ ಸತತ ಮೂರು ಬಾರಿ ಗೆದ್ದಿದ್ದ ಲಕ್ಷ್ಮಣ ಸವದಿ ಈ ಬಾರಿ ‘ಕೈ’ ಅಭ್ಯರ್ಥಿ. ಬಿಜೆಪಿಯಿಂದ ಮಹೇಶ ಕುಮಟಳ್ಳಿ ಕಣದಲ್ಲಿದ್ದಾರೆ.


ಶ್ರೀಶೈಲ ಮಠದ

ಬೆಳಗಾವಿ (ಮೇ.2): ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಅಥಣಿ ಕ್ಷೇತ್ರ, ಈ ಬಾರಿ ಹೈವೋಲ್ಟೇಜ್‌ ಕ್ಷೇತ್ರವಾಗಿ ಬದಲಾಗಿದೆ. ಕಳೆದ ಬಾರಿಯ ಅಭ್ಯರ್ಥಿಗಳೇ ಈ ಬಾರಿಯೂ ಮುಖಾಮುಖಿಯಾಗಿದ್ದಾರೆ. ಆದರೆ, ಪಕ್ಷ ಮಾತ್ರ ಅದಲು, ಬದಲಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಮಹೇಶ ಕುಮಟಳ್ಳಿ ಬಿಜೆಪಿಯಿಂದ ಕಣದಲ್ಲಿದ್ದಾರೆ. ಇಲ್ಲಿ ತಮ್ಮ ಗೆಲುವಿಗಿಂತ ಮತ್ತೊಬ್ಬರ ಸೋಲಿಗಾಗಿಯೇ ಹೋರಾಟ ನಡೆಯುತ್ತಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ.

Tap to resize

Latest Videos

ಅಥಣಿಯ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ಲಕ್ಷ್ಮಣ ಸವದಿ ಮತ್ತು ಮಹೇಶ ಕುಮಟಳ್ಳಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕ್ಷೇತ್ರದಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆ ಸವದಿಗೆ ಎದುರಾಗಿತ್ತು. ಆದರೆ, ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಮಾಜಿ ಸಚಿವ ರಮೇಶ ಜಾರಕಿಹೊಳಿ, ತಮ್ಮ ಆಪ್ತ ಮಹೇಶ ಕುಮಟಳ್ಳಿಗೆ ಟಿಕೆಟ್‌ ನೀಡಲೇಬೇಕು ಎಂದು ಪಟ್ಟು ಹಿಡಿದರು. ಮಾತ್ರವಲ್ಲ, ಟಿಕೆಟ್‌ ನೀಡದಿದ್ದರೆ ನಾನು ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಕೊನೆಗೂ ತಮ್ಮ ಆಪ್ತ ಮಹೇಶಗೆ ಬಿಜೆಪಿ ಟಿಕೆಟ್‌ ಕೊಡಿಸುವಲ್ಲಿ ರಮೇಶ ಜಾರಕಿಹೊಳಿ ಯಶಸ್ವಿಯಾದರು. ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಸವದಿ ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರಿ, ಅದೇ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ರಾಜಕೀಯ ಸ್ಥಿತ್ಯಂತರದಿಂದಾಗಿ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣವೇ ಬದಲಾಗಿದೆ. ಸದ್ಯ ಅಥಣಿ ಬಿಜೆಪಿಯ ಭದ್ರಕೋಟೆ. 2004ರಿಂದ ಸತತವಾಗಿ ಮೂರು ಬಾರಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಲ್ಲಿ ಆಯ್ಕೆಯಾಗುತ್ತ ಬಂದಿದ್ದರು.

ಹಿಂದಿನ ಚುನಾವಣೆಯಲ್ಲಿ ಏನಾಗಿತ್ತು?: 2018ರಲ್ಲಿ ಕಾಂಗ್ರೆಸ್‌ನ ಮಹೇಶ ಕುಮಟಳ್ಳಿ ಗೆಲುವು ಸಾಧಿಸಿದರಾದರೂ ‘ಆಪರೇಷನ್‌ ಕಮಲ’ದಿಂದಾಗಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದು ಬಂದರು. ಉಪಚುನಾವಣೆ ವೇಳೆ ಮಹೇಶ ಕುಮಟಳ್ಳಿ ಗೆಲ್ಲುವಲ್ಲಿ ಲಕ್ಷ್ಮಣ ಸವದಿ ಪ್ರಮುಖ ಪಾತ್ರ ವಹಿಸಿದ್ದರು. ಸೋತಿದ್ದರೂ ಸವದಿ ಅವರನ್ನು ಪರಿಷತ್‌ ಸದಸ್ಯರನ್ನಾಗಿ ಮಾಡಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಆದರೆ, ಈಗ ಅವರು ಕಾಂಗ್ರೆಸ್‌ನ ಹುರಿಯಾಳು ಆಗಿದ್ದಾರೆ. ಮಹೇಶ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾದರೂ, ರಮೇಶ ಜಾರಕಿಹೊಳಿಯೇ ಸವದಿಗೆ ಇಲ್ಲಿ ಸವಾಲು.

‘ಟಿಕೆಟ್‌ ನೀಡದೆ ಬಿಜೆಪಿ ಅವಮಾನ ಮಾಡಿದೆ ಎಂಬ ಅನುಕಂಪ ವರವಾಗಬಹುದು. ಇನ್ನು, ಕುಮಟಳ್ಳಿ ಆಯ್ಕೆಯಾದರೆ ರಮೇಶ ಜಾರಕಿಹೊಳಿ ಅಣತಿಯಂತೆ ನಡೆಯುತ್ತಾರೆ, ಸ್ಥಳೀಯ ಕೆಲಸಕ್ಕೆ, ಅಭಿವೃದ್ಧಿ ಕೆಲಸಗಳಿಗೆ ಗೋಕಾಕ ಸಾಹುಕಾರ್‌ರನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ, ಸ್ಥಳೀಯರಿಗೆ ಬೆಲೆ ಇರುವುದಿಲ್ಲ. ಹೀಗಾಗಿ, ಸ್ಥಳೀಯ ಮಟ್ಟದಲ್ಲೇ ನಿರ್ಣಯ ಕೈಗೊಳ್ಳುವ ಸವದಿಯೇ ಉತ್ತಮ’ ಎಂಬುದಾಗಿ ಅಥಣಿ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ ಬಂದರೆ ಸವದಿಗೆ ಹೆಚ್ಚು ಅನುಕೂಲವಾಗಬಹುದು. ಜೊತೆಗೆ, ಸವದಿ, ಸಹಕಾರಿ ರಂಗದ ಧುರೀಣ, ಡಿಸಿಸಿ ಬ್ಯಾಂಕ್‌ ಸಹಿತ ಸಹಕಾರಿ ರಂಗದ ಹಲವು ಸಂಘ, ಸಂಸ್ಥೆಗಳ ಜೊತೆಗೆ ಉತ್ತಮ ಒಡನಾಟ ಹೊಂದಿರುವುದು ಕೂಡ ಪ್ಲಸ್‌ ಪಾಯಿಂಟ್‌.

ಆದರೆ, ಸವದಿ, ಬಿಜೆಪಿಯಲ್ಲಿದ್ದ ತಮ್ಮ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕರೆ ತಂದರೆ ಮೂಲ ಕಾಂಗ್ರೆಸ್ಸಿಗರನ್ನು ರಮೇಶ ತಮ್ಮತ್ತ ಎಳೆದುಕೊಳ್ಳುವ ಸಾಧ್ಯತೆ ಇದೆ. ರಮೇಶ ಜಾರಕಿಹೊಳಿ ಈಗಾಗಲೇ ಅಹೋರಾತ್ರಿ ಕಾರ್ಯಾಚರಣೆ ನಡೆಸಿ, ಸ್ಥಳೀಯ ಕಾಂಗ್ರೆಸ್‌ ನಾಯಕರನ್ನು ತಮ್ಮತ್ತ ಸೆಳೆಯುತ್ತಿರುವುದು ಕೂಡ ಸವದಿಯ ಮತಶಿಕಾರಿಗೆ ಅಡ್ಡಗಾಲಾಗಿದೆ. ಸೋತರೂ ಬಿಜೆಪಿ ಹೈಕಮಾಂಡ್‌ ಸವದಿಗೆ ಪರಿಷತ್‌ ಸ್ಥಾನ ಕೊಟ್ಟು, ಡಿಸಿಎಂ ಮಾಡಿತ್ತು. ಅವರು ಬಿಜೆಪಿಗೆ ದ್ರೋಹ ಮಾಡಿದರೆಂಬ ಅಪಕೀರ್ತಿ ಸವದಿಗೆ ಅನಾನುಕೂಲವಾಗಬಹುದು.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ, ಮೋದಿಯೇ ಗೇಮ್‌ಚೇಂಜರ್‌: ಜೀ-ಮ್ಯಾಟ್ರಿ

ಮಹೇಶ ಕುಮಟಳ್ಳಿ ಬಿಜೆಪಿ ಅಭ್ಯರ್ಥಿಯಾದರೂ ರಮೇಶ ಜಾರಕಿಹೊಳಿಯೇ ತಂತ್ರಗಾರಿಕೆಯ ಶಕ್ತಿಯಾಗಿದ್ದು, ಗೆಲುವಿಗೆ ಬೇಕಾದ ತಂತ್ರ ರೂಪಿಸಲಿದ್ದಾರೆ. ಜೊತೆಗೆ, ಬಿಜೆಪಿಗೆ ಸವದಿ ಮೋಸ ಮಾಡಿ, ತಮ್ಮ ಸಿದ್ಧಾಂತದ ವಿರುದ್ಧವಾಗಿ ಕಾಂಗ್ರೆಸ್‌ಗೆ ಹೋದರೆಂಬ ಅಂಶ ಬಿಜೆಪಿಗೆ ಹೆಚ್ಚು ಶಕ್ತಿ ಕೊಡಬಹುದು.

ಚಿತ್ತಾಪುರದಲ್ಲಿ ಬಿಜೆಪಿ ಹೊಸಮುಖ ತಂತ್ರ, ಪ್ರಿಯಾಂಕ್‌ ಖರ್ಗೆ ಹ್ಯಾಟ್ರಿಕ್‌ ಕನಸು ನನಸಾಗುತ್ತಾ?

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಲಿಂಗಾಯತರ ಸಂಖ್ಯೆ ಹೆಚ್ಚಿದೆ. ಜೈನರು, ಕುರುಬರು, ಮುಸ್ಲಿಮರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಬಿಜೆಪಿಯ ಮಹೇಶ ಕುಮಟಳ್ಳಿ ಎದುರು ಗಾಣಿಗ ಸಮಾಜದ ಲಕ್ಷ್ಮಣ ಸವದಿಯವರ ಜಾತಿ ಬಲ ಕಡಿಮೆ. ಆದರೆ, ಹಿಂದಿನ ಚುನಾವಣೆಗಳಲ್ಲಿ ಜಾತಿಯೊಂದೇ ಮಾನದಂಡವಾದ ಉದಾಹರಣೆ ಇಲ್ಲ.

ಒಟ್ಟು ಮತದಾರರು 2,23,088

ಲಿಂಗಾಯತರು 50,000

ಪರಿಶಿಷ್ಟಜಾತಿಯವರು 26,000

ಕುರುಬರು 18,000

ಮುಸ್ಲಿಮರು 19,800

ಜೈನರು 15,000

ಮರಾಠರು 16,511

click me!