ನಾವು ಕೆಲ ದಿನಗಳ ಹಿಂದೆಯಷ್ಟೇ ಆನಂದ ಮಾಮನಿರನ್ನು ಕಳೆದುಕೊಂಡಿದ್ದೇವೆ. ನಮ್ಮ ಜೊತೆಗೀಗ ರತ್ನಾ ಇದ್ದಾರೆ, ಅವರ ಕಣ್ಣೀರು ಅರ್ಥ ಆಗುತ್ತೆ ಎಂದು ತಿಳಿದುಕೊಂಡಿದ್ದೇನೆ. ಆನಂದ ಮಾಮನಿ ಋಣ ತೀರಿಸಬೇಕಂದ್ರೆ ಕಾಂಗ್ರೆಸ್ ಠೇವಣಿ ಜಪ್ತಿ ಆಗಬೇಕು ಎಂದು ಯಡಿಯೂರಪ್ಪ ಅಭ್ಯರ್ಥಿಗಳಿಗೆ ಮನವಿ ಮಾಡಿದ್ದಾರೆ.
ಬೆಳಗಾವಿ (ಮಾರ್ಚ್ 4, 2023): ಬೆಳಗಾವಿ ಜಿಲ್ಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಈ ವೇಳೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಜಿಲ್ಲೆಯ ಸವದತ್ತಿಯಲ್ಲಿ ರೋಡ್ ಶೋ ಬಳಿಕ ಮಾತನಾಡಿದ ಬಿಎಸ್‌ವೈ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸವದತ್ತಿಯಲ್ಲಿ ರೋಡ್ ಶೋ ಬಳಿಕ ಭಾಷಣ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ (Ex CM Yediyurappa), ಭಾಷಣ ಆರಂಭಿಸಿದರೂ ಘೋಷಣೆ ಕೂಗಿದ ಅಭಿಮಾನಿಗಳ ವಿರುದ್ಧವೂ ಗರಂ ಆಗಿದ್ದರು. ಘೋಷಣೆ ಕೂಗಬೇಡಿ ಎಂದು ಕಾರ್ಯಕರ್ತರ ಮೇಲೆ ಆಕ್ರೋಶ ವ್ಯಕ್ತಪಡಿದರು. ಅಲ್ಲದೆ, ತಮ್ಮ ಆಕ್ರೋಶಕ್ಕೆ ಸ್ಪಷ್ಟನೆ ನೀಡಿದ ಯಡಿಯೂರಪ್ಪನವರು, ನಾವು ಕೆಲ ದಿನಗಳ ಹಿಂದೆಯಷ್ಟೇ ಆನಂದ ಮಾಮನಿರನ್ನು ಕಳೆದುಕೊಂಡಿದ್ದೇವೆ. ನಮ್ಮ ಜೊತೆಗೀಗ ರತ್ನಾ ಇದ್ದಾರೆ, ಅವರ ಕಣ್ಣೀರು ಅರ್ಥ ಆಗುತ್ತೆ ಎಂದು ತಿಳಿದುಕೊಂಡಿದ್ದೇನೆ. ಆನಂದ ಮಾಮನಿ ಋಣ ತೀರಿಸಬೇಕಂದ್ರೆ ಕಾಂಗ್ರೆಸ್ ಠೇವಣಿ ಜಪ್ತಿ ಆಗಬೇಕು ಎಂದು ಅಭ್ಯರ್ಥಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಕೊಡಗಿನ ಭದ್ರಕೋಟೆಯಲ್ಲಿ ಬಿಜೆಪಿ ಮತ್ತೆ ಕಮಲ ಅರಳಿಸಲು ಪ್ಲಾನ್
ಬಳಿಕ ಕಾಂಗ್ರೆಸ್ (Congress) ವಿರುದ್ಧ ವಾಗ್ಬಾಣಗಳನ್ನು ಬಿಟ್ಟ ಬಿಜೆಪಿಯ (BJP) ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ (Siddaramaiah) ಕುರುಬ ಸಮುದಾಯದವರು ಆಗಿರಬಹುದು. ಆದರೆ ಕಾಗಿನೆಲೆ ಅಭಿವೃದ್ಧಿ ಮಾಡಲು ಯಡಿಯೂರಪ್ಪನೇ ಬರಬೇಕಾಯಿತು ಎಂದು ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ಹೇಳಿದರು.
ಹಾಗೆ, ರಾಹುಲ್ ಗಾಂಧಿಯಂಥ (Rahul Gandhi) ಬಚ್ಚಾನನ್ನು ಕಟ್ಟಿಕೊಂಡು ಕಾಂಗ್ರೆಸ್ ಏನು ಮಾಡಲು ಸಾಧ್ಯ. ಅವರು ಯಾತ್ರೆ ಮಾಡಿದ ಬಳಿಕ ಮೂರು ರಾಜ್ಯಗಳ ಫಲಿತಾಂಶ ಬಂದಿದ್ದು, ಬಿಜೆಪಿ ವಿಜಯಪತಾಕೆ ಹಾರಿಸಿದೆ. ಮೋದಿ (Narendra Modi) ಶಿವಮೊಗ್ಗಕ್ಕೆ ಬಂದಾಗ 3 ಲಕ್ಷ ಜನ ನಿಂತು ಕಾರ್ಯಕ್ರಮ ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಮಲೆನಾಡು ಹಾಡಿ ಹೊಗಳಿದ ಮೋದಿ: ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಪಥದಲ್ಲಿದೆ ಎಂದ ಪ್ರಧಾನಿ
ಸಿದ್ದರಾಮಯ್ಯನವರೇ ನೀವು ನಂಬಿಕೆ ವಿಶ್ವಾಸ ಇಟ್ಟುಕೊಂಡಿದ್ದೀರಾ.. ಸವದತ್ತಿ ಯಲ್ಲಮ್ಮನ ಮೇಲೆ ಆಣೆ ಮಾಡಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನೀವು ಕ್ಷೇತ್ರ ಬಿಟ್ಟು ಕ್ಷೇತ್ರದ ಹುಡುಕಾಟದಲ್ಲಿ ಇರೋದು ಏಕೆ? ಜನ ನಿಮ್ಮನ್ನು ತಿರಸ್ಕಾರ ಮಾಡುತ್ತಾರೆ ಎಂಬ ಭಯವೇ ಸಿದ್ದರಾಮಯ್ಯನವರೇ? ಎಂದೂ ಮಾಜಿ ಸಿಎಂ ಯಡಿಯೂರಪ್ಪ ಮತ್ತೊಬ್ಬರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಾ. ಅಂಬೇಡ್ಕರ್ ಶವ ಸಂಸ್ಕಾರಕ್ಕೂ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಜಾಗ ನೀಡಲಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರ ಶವ ಸಂಸ್ಕಾರವನ್ನು ಮುಂಬೈನಲ್ಲಿ ಮಾಡಬೇಕಾಯಿತು. ನಾವು ಈಗಾಗಲೇ ಸವದತ್ತಿ ಕ್ಷೇತ್ರ ಗೆದ್ದು ಆಗಿದೆ, ನೀವು ಅಕ್ಕಪಕ್ಕದ ಕ್ಷೇತ್ರಕ್ಕೆ ಹೋಗಿ ಶ್ರಮಿಸಿ. ಬೊಮ್ಮಾಯಿ ಸಿಎಂ ಆದ ಮೇಲೆ ಹಿಂದುಳಿದ ವರ್ಗದವರಿಗೆ ನೀಡಿದ ಸವಲತ್ತು ನೋಡಿದ್ದೀರಿ, ಈ ಕ್ಷೇತ್ರ ಗೆದ್ದಾಗಿದೆ, ದೊಡ್ಡ ಅಂತರದಲ್ಲಿ ಗೆಲ್ತೇವೆ. ನೀವು ಅಕ್ಕಪಕ್ಕದ ಕ್ಷೇತ್ರಗಳಿಗೆ ಹೋಗಿ ಬಂಧು ಬಳಗ ಭೇಟಿ ಮಾಡಿ ಕಾಂಗ್ರೆಸ್ ದುರಾಡಳಿತ ತಿಳಿಸಿ ಎಂದೂ ಬಿ.ಎಸ್. ಯಡಿಯೂರಪ್ಪ ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಂತರ, ಪ್ರಧಾನಿ ಮೋದಿಯನ್ನು ಹೊಗಳಿದ ಬಿಎಸ್‌ವೈ, ಪ್ರಧಾನಿ ಮೋದಿ ಒಂದೂ ದಿನ ರಜೆ ಮಾಡಿಲ್ಲ, ವಿಶ್ರಾಂತಿ ಪಡೆದಿಲ್ಲ ಎಂದು ಹೇಳಿದರು. ಹಾಗೆ, ಸವದತ್ತಿ ಜನರ ಜನ ಬೆಂಬಲ ನೋಡಿ ನನಗೆ ಖುಷಿ ಇದೆ, ನಿಮ್ಮ ಅಭಿಮಾನಕ್ಕೆ ಋಣಿ ಆಗಿರುವೆ. ಸವದತ್ತಿಯಲ್ಲಿ ಅಭ್ಯರ್ಥಿ ಯಾರು ಆಗಬೇಕು ಎಂದು ನಾವು ಚರ್ಚಿಸುತ್ತೇವೆ, ನಿಮ್ಮ ಸಲಹೆ ಪಡೆಯುತ್ತೇವೆ. ಅಭ್ಯರ್ಥಿ ಯಾರೇ ಆದರೂ ನೀವು ಬೆಂಬಲ ನೀಡಬೇಕು ಎಂದು ಬಿಎಸ್‌ವೈ ಮನವಿ ಮಾಡಿಕೊಂಡಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್‌ನವರು ಹಣ, ಹೆಂಡ, ತೋಳ್ಬಲದಿಂದ ಹಾಗೂ ಜಾತಿ ರಾಜಕಾರಣದಿಂದ ಅಧಿಕಾರಕ್ಕೆ ಬರ್ತಾರೆ ಅಂದುಕೊಂಡಿದ್ದಾರೆ. ಅದು ಸಾಧ್ಯವಿಲ್ಲ ಅನ್ನೋದು ಅವರಿಗೆ ಗೊತ್ತಿದೆ, ಮಹಾನ್ ನಾಯಕರಾದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಒಂದೆಡೆ ಇದ್ರೆ ಆ ರಾಹುಲ್ ಗಾಂಧಿ ಏನು ಮಾಡಲು ಸಾಧ್ಯ ಎಂದೂ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹಾಗೆ, ಜೇಬಿನಲ್ಲಿ ಇರುವ ಹತ್ತಾರು ರೂ ಖರ್ಚು ಮಾಡಿ ಪಕ್ಷ ಗೆಲ್ಲಿಸಿಕೊಡಬೇಕು, ನಿಮ್ಮ ಆತ್ಮೀಯತೆ ಪಕ್ಷದ ಮೇಲೆ ಇದೇ ರೀತಿ ಇರಬೇಕು. ಆನಂದ ಮಾಮನಿ ಋಣ ತಿರೀಸಬೇಕು ಅಂದ್ರೆ ಬಿಜೆಪಿ ಗೆಲ್ಲಿಸಬೇಕು. ಯಾರು ಅಭ್ಯರ್ಥಿ ಆಗಬೇಕು ಎಂದು ಪ್ರಮುಖರ ಜೊತೆ ಚರ್ಚಿಸಿ ನಿಮಗೆ ನ್ಯಾಯ ಒದಗಿಸುತ್ತೇವೆ ಎಂದೂ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.