ತಂದೆಯ ಹಾದಿ ತುಳಿದ ವಿಜಯೇಂದ್ರಗೆ ಮಹತ್ತರ ಹುದ್ದೆ..!

By Kannadaprabha News  |  First Published Nov 11, 2023, 7:15 AM IST

ಯಡಿಯೂರಪ್ಪನವರ ರೀತಿಯಲ್ಲಿಯೇ ಶಿಕಾರಿಪುರದಿಂದಲೇ ಚುನಾವಣಾ ರಾಜಕೀಯ ಆರಂಭಿಸಿರುವ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಆ ಸ್ಥಾನವನ್ನು ಸಮರ್ಥವಾಗಿ ಭರ್ತಿ ಮಾಡುವತ್ತ ಹೆಜ್ಜೆಯನ್ನು ಈಗಾಗಲೇ ತೋರಿದ್ದು, ಇದರ ಫಲವಾಗಿ ಅವರಿಗೆ ಚಿಕ್ಕ ವಯಸ್ಸಿಲ್ಲಿಯೇ ರಾಜ್ಯಾಧ್ಯಕ್ಷ ಸ್ಥಾನ ಒದಗಿ ಬಂದಿದೆ.


ಶಿವಮೊಗ್ಗ(ನ.11): ಯಡಿಯೂರಪ್ಪ ಎನ್ನುವುದು ಕೇವಲ ಒಬ್ಬ ವ್ಯಕ್ತಿಯಲ್ಲ, ಬದಲಾಗಿ ಶಕ್ತಿ ಎಂಬುದು ಈಗಾಗಲೇ ಹಲವಾರು ಮಂದಿ ಹೇಳಿದ್ದಾರೆ. ಇಂತಹ ಶಕ್ತಿಯೊಂದು ನೇಪಥ್ಯಕ್ಕೆ ಸರಿಯುವಾಗ ಆ ಶೂನ್ಯ ತುಂಬುವುದು ಹೇಗೆ ಎಂಬ ಪ್ರಶ್ನೆ ಎದ್ದಿದ್ದು ಸಹಜ. ರಾಜ್ಯದಲ್ಲಿ ಅನೇಕ ನಾಯಕರು ಇದೇ ರೀತಿ ನೇಪಥ್ಯಕ್ಕೆ ಸರಿದಾಗ ಉಂಟಾದ ಶೂನ್ಯ ಹಾಗೆ ಉಳಿದು ಹೋಗಿದ್ದನ್ನು ಕೂಡ ಗಮನಿಸಬಹುದಾಗಿದೆ. ಆದರೆ ಯಡಿಯೂರಪ್ಪನವರ ವಿಚಾರದಲ್ಲಿ ಮಾತ್ರ ಹಾಗಾಗುವಂತೆ ಕಾಣುತ್ತಿಲ್ಲ. ಅವರ ರಾಜಕೀಯ ನಿರ್ಗಮನದ ಶೂನ್ಯವನ್ನು ಅವರ ಪುತ್ರ ಬಿ. ವೈ. ವಿಜಯೇಂದ್ರ ಸಮರ್ಥವಾಗಿ ತುಂಬುವ ನಿಟ್ಟಿನಲ್ಲಿ ಅವರಿಗೆ ದೊಡ್ಡ ಸ್ಥಾನಮಾನವೊಂದು ಒದಗಿ ಬಂದಿದೆ.

ಯಡಿಯೂರಪ್ಪ ರಾಜಕೀಯ ಜೀವನ ಆರಂಭಿಸಿದ್ದೇ ಶಿಕಾರಿಪುರದಲ್ಲಿ. ತಮ್ಮ ಕರ್ಮಭೂಮಿ ಶಿಕಾರಿಪುರದಲ್ಲಿ ಅವರು ಹೋರಾಟ ಕಟ್ಟಿದ ಪರಿ, ಜನರ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯವೈಖರಿ, ಏನೇ ಆದರೂ ದಕ್ಕಿಸಿಕೊಳ್ಳುವ ಸಾಮರ್ಥ್ಯ, ಜನ ಸಾಮಾನ್ಯರ ನಾಡಿ ಮಿಡಿತ ಅರಿತು ಅವರಲ್ಲೊಬ್ಬರಾಗುವ ತಳಮಟ್ಟದ ಅನುಭವ, ಎಲ್ಲವನ್ನೂ ದಕ್ಕಿಸಿಕೊಳ್ಳುವ ಮತ್ತು ದಕ್ಕಿಸಿಕೊಂಡ ಮೇರು ವ್ಯಕ್ತಿತ್ವದ ನಾಯಕರಾದ, ಶಿಕಾರಿಪುರದಿಂದ ರಾಜ್ಯದ ಎಲ್ಲೆಡೆ ಆವರಿಸಿಕೊಂಡ ರೀತಿ ಎಲ್ಲವೂ ಈಗ ಇತಿಹಾಸ.

Tap to resize

Latest Videos

ಬಿಎಸ್‌ವೈ ಪುತ್ರ ಎನ್ನುವ ಕಾರಣಕ್ಕೆ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ: ವಿಜಯೇಂದ್ರ

ಇಂತಹ ನಾಯಕರೊಬ್ಬರ ನಿರ್ವಾತವನ್ನು ಭರ್ತಿ ಮಾಡುವುದು ಸುಲಭವಲ್ಲ. ಆದರೆ ಯಡಿಯೂರಪ್ಪನವರ ರೀತಿಯಲ್ಲಿಯೇ ಶಿಕಾರಿಪುರದಿಂದಲೇ ಚುನಾವಣಾ ರಾಜಕೀಯ ಆರಂಭಿಸಿರುವ ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಆ ಸ್ಥಾನವನ್ನು ಸಮರ್ಥವಾಗಿ ಭರ್ತಿ ಮಾಡುವತ್ತ ಹೆಜ್ಜೆಯನ್ನು ಈಗಾಗಲೇ ತೋರಿದ್ದು, ಇದರ ಫಲವಾಗಿ ಅವರಿಗೆ ಚಿಕ್ಕ ವಯಸ್ಸಿಲ್ಲಿಯೇ ರಾಜ್ಯಾಧ್ಯಕ್ಷ ಸ್ಥಾನ ಒದಗಿ ಬಂದಿದೆ.

ಬಾಲ್ಯದಿಂದಲೇ ಹೋರಾಟ, ಮಾನವೀಯ ಮುಖ, ಜನಪರ ತುಡಿತದ ತಂದೆಯ ವ್ಯಕ್ತಿತ್ವವನ್ನೇ ನೋಡುತ್ತಾ ಬೆಳೆದ ವಿಜಯೇಂದ್ರ ಸ್ವಭಾವತಃ ತಂದೆಯ ಗುಣವನ್ನೇ ಮೈಗೂಡಿಸಿಕೊಂಡಂತೆ ಕಾಣುತ್ತದೆ. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅನುಭವಿಸಿದ ಅಧಿಕಾರ ಮತ್ತು ಕಷ್ಟಕೋಟಲೆ ಎರಡನ್ನೂ ಹತ್ತಿರದಿಂದ ನೋಡಿದ ವಿಜಯೇಂದ್ರ ಅವರಿಗೆ ಅದನ್ನೆಲ್ಲಾ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಕೂಡ ಬಂದಿದೆ. ಚುನಾವಣೆಯನ್ನು ಎದುರಿಸುವ, ಅಂತಿಮವಾಗಿ ಗೆಲುವಿನ ಪತಾಕೆ ಹಾರಿಸುವ, ತಂತ್ರಗಾರಿಕೆ ರೂಪಿಸುವ, ಜನರನ್ನು ಆಕರ್ಷಿಸುವ ಗುಣ ಬೆಳೆಸಿಕೊಂಡಿದ್ದಾರೆ. ಇದುವರೆಗೆ ಅವರು ಇದ್ದುದು ತಂದೆಯ ನೆರಳಲ್ಲಿ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ತಂದೆಯ ಕರ್ಮಭೂಮಿ ಮತ್ತು ಅವರ ಕ್ಷೇತ್ರದಲ್ಲಿ ತಾವೇ ಚುನಾವಣಾ ಕಣಕ್ಕೆ ಇಳಿದು ಯಶ ಹೊಂದಿದ್ದು ಮಹತ್ತರ ಮೈಲಿಗಲ್ಲು. ಇದಕ್ಕಿಂತ ಮೊದಲು ಕೆಲವು ಚುನಾವಣೆಗಳಲ್ಲಿ ಬೇರೆಯವರನ್ನು ಗೆಲ್ಲಿಸಿದ ವಿಜಯೇಂದ್ರ ತಮ್ಮ ಸಾಮರ್ಥ್ಯ ತೋರಿಸಿ, ಈ ವಿಚಾರದಲ್ಲಿ ಹೈಕಮಾಂಡ್ ಗಮನವನ್ನು ಕೂಡ ಸೆಳೆದಿದ್ದರು.

click me!