ಕಮಲ ತೊರೆದು ದಳದ ದಾರಿಗೆ ಶಿರವಾಳ, ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆ, ಕಳೆದ ಬಾರಿ ಜೆಡಿಎಸ್‌ನಿಂದ ಅಮೀನ್ ರೆಡ್ಡಿ, ಕಾಂಗ್ರೆಸ್‌ನಿಂದ ದರ್ಶನಾಪುರ ಸ್ಪರ್ಧೆ.
ಶಹಾಪುರ(ಏ.15): ಮಾಜಿ ಸಿಎಂ ಬಿಎಸ್‌ವೈ ಆಪ್ತ, 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಗುರು ಪಾಟೀಲ್ ಶಿರವಾಳ ಶುಕ್ರವಾರ ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಶಹಾಪುರ ಮತಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅವರೀಗ ಇಲ್ಲಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಬೆಂಬಲಿಗರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರಿಂದ ಜೆಡಿಎಸ್ ಧ್ವಜ ಪಡೆಯುವ ಮೂಲಕ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡರು. ತಮ್ಮ ವಿರುದ್ಧ ಷಡ್ಯಂತ್ರ ನಡೆಸಿದ ವ್ಯಕ್ತಿಗಳಿಗೆ ಚುನಾವಣೆ ಮೂಲಕ ತಕ್ಕ ಉತ್ತರ ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಗುರು ಪಾಟೀಲ್, ಯಾರು ಪ್ರಾಮಾಣಿಕರು ಅನ್ನೋದನ್ನು ಕ್ಷೇತ್ರದ ಮತದಾರರು ತೀರ್ಮಾನಿಸಲಿದ್ದಾರೆ ಎಂದರು.
ಈ ಮೂಲಕ ಶಹಾಪುರ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಶರಣ ಬಸಪ್ಪಗೌಡ ದರ್ಶನಾಪುರ, ಬಿಜೆಪಿಯಿಂದ ಅಮೀನರಡ್ಡಿ ಯಾಳಗಿ ಮತ್ತು ಜೆಡಿಎಸ್‌ನಿಂದ ಗುರು ಪಾಟೀಲ್ ಶಿರವಾಳ ಸ್ಪರ್ಧೆ ಖಚಿತವಾದಂತಾಗಿದೆ. ಗುರು ಪಾಟೀಲರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರಿಂದ ಅವರ ಬೆಂಬಲಿಸಿದ್ದ ನಗರ ಸಭೆಯ ಬಿಜೆಪಿ ಸದಸ್ಯರೂ ಸಹ ಗುರು ಪಾಟೀಲರ ಜೊತೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
undefined
ಬಿಜೆಪಿ ಬಂಡಾಯ, ಜೆಡಿಎಸ್ಗೆ ಆದಾಯ..!
ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ನಗರಸಭೆ ಬಿಜೆಪಿ ಸದಸ್ಯ ಲಾಲನ್ ಸಾಬ್ ಖುರೇಷಿ, ಮಲ್ಲಿಕಾರ್ಜುನ ಗಂಧದ ಮಠ, ಅಶೋಕ ನಾಯಕ ಹಳಿಸಗರ ಮತ್ತಿತರರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಇವರ ಬೆಂಬಲಿಗ ಬಿಜೆಪಿ ಪದಾಧಿಕಾರಿಗಳು ಸಹ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ.
ಮರುಕಳಿಸಿದ ರಾಜಕೀಯ ಇತಿಹಾಸ?
ರಾಜಕೀಯ ಇತಿಹಾಸ ಪುಟಗಳತ್ತ ಗಮನ ಹರಿಸಿದಾಗ, ಇದೇ ರೀತಿಯ ವಾತಾವರಣ ಗುರು ಪಾಟೀಲರ ತಂದೆಗಾಗಿತ್ತು. ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿದ್ದ (1985, 1989 ಹಾಗೂ 1999) ಗುರು ಪಾಟೀಲರ ತಂದೆ ಶಿವಶೇಖರಪ್ಪ ಗೌಡ ಶಿರವಾಳರಿಗೆ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದಾಗ, ಬಂಡಾಯವೆದ್ದಿದ್ದ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
Karnataka Assembly Elections 2023: ಚುನಾವಣೆ ಬೆನ್ನಲ್ಲೇ ರಂಗೇರುತ್ತಿರುವ ಪಕ್ಷಾಂತರ ಪರ್ವ
ಬಿಎಸ್‌ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಗುರು ಪಾಟೀಲರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ನಿರೀಕ್ಷೆ ತಲೆಕೆಳಗಾಗಿ, ಗುತ್ತಿಗೆದಾರ ಅಮೀನರೆಡ್ಡಿ ಯಾಳಗಿ ಅವರಿಗೆ ಒಲಿದಿದೆ. ಕಳೆದ ಚುನಾವಣೆಯಲ್ಲಿ (2018) ಇದೇ ಗುರು ಪಾಟೀಲ್ (ಬಿಜೆಪಿ) ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೀನರೆಡ್ಡಿ ಯಾಳಗಿ ಸುಮಾರು 20 ಸಾವಿರ ಮತಗಳ ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ದರ್ಶನಾಪುರ ಹಾಗೂ ಬಿಜೆಪಿಯ ಗುರು ಪಾಟೀಲರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು. ಗುರು ಪಾಟೀಲರ ಸೋಲಿಗೆ ಅಮೀನರೆಡ್ಡಿ ಪಡೆದ ಮತಗಳು ಕಾರಣ ಎಂದು ಆಗ ವಿಶ್ಲೇಷಿಸಲಾಗಿತ್ತು.
* ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಗುರು ಪಾಟೀಲರು ಜೆಡಿಎಸ್ ಸೇರ್ಪಡೆ ಸಾಧ್ಯತೆ ಕುರಿತು ಏ.13ರಂದು ಕನ್ನಡಪ್ರಭದಲ್ಲಿ ವರದಿ ಪ್ರಕಟಿಸಿತ್ತು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.