ಬಿಜೆಪಿ ಟಿಕೆಟ್‌ ವಂಚಿತ ಅನಿಲ ಬೆನಕೆಗೆ ಕಾಂಗ್ರೆಸ್‌ ಗಾಳ?

By Kannadaprabha News  |  First Published Apr 15, 2023, 1:14 PM IST

ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಬೆಳಗಾವಿ ಬಂಡಾಯದ ಬೆಂಕಿ ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ.


ಶ್ರೀಶೈಲ ಮಠದ

ಬೆಳಗಾವಿ(ಏ.15):  ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಜೋರಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಳಿಕ ಇದೀಗ ಮತ್ತೊಬ್ಬ ಬಿಜೆಪಿ ಶಾಸಕ ಅನಿಲ ಬೆನಕೆ ಅವರಿಗೂ ಪಕ್ಕೆ ಸೇರ್ಪಡೆಯಾಗುವಂತೆ ಕಾಂಗ್ರೆಸ್‌ ಗಾಳ ಹಾಕಿದೆ. ಈ ಮೂಲಕ ಜಿಲ್ಲೆಯ ಬಿಜೆಪಿಯ ಮತ್ತೊಂದು ವಿಕೆಟ್‌ ಪತವಾಗುವ ಸಾಧ್ಯತೆಗಳಿವೆ. ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದೆ. ಬೆಳಗಾವಿ ಬಂಡಾಯದ ಬೆಂಕಿ ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿದೆ.

Tap to resize

Latest Videos

ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ರಾಮದರ್ಗ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದಾರೆ. ಮಾಜಿ ಸಚಿವ ಶಶಿಕಾಂತ ನಾಯಕ ಕೂಡ ಬಿಜೆಪಿಗೆ ಗುಡ್‌ ಬೈ ಹೇಳಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬೈಲಹೊಂಗಲದಲ್ಲಿ ಬಂಡಾಯ ಎದ್ದಿದ್ದು, ಯಡಿಯೂರಪ್ಪ ಅವರ ಬೆಂಬಲಿಗ ಡಾ.ವಿಶ್ವನಾಥ ಪಾಟೀಲ ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್‌ ಜಾರಕಿಹೊಳಿ

ಏತನ್ಮಧ್ಯೆ ಬಿಜೆಪಿ ಟಿಕೆಟ್‌ ವಂಚಿತ ಶಾಸಕ ಅನಿಲ ಬೆನಕೆ ಅವರ ಸಂಪರ್ಕದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಇದ್ದಾರೆ. ಬೆನಕೆ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದಾರೆ. ಅಲ್ಲದೇ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಜೊತೆಗೂ ಒಂದು ಸುತ್ತಿನ ಮಾತುಕತೆಯನ್ನೂ ಅನಿಲ ಬೆನಕೆ ನಡೆಸಿದ್ದಾರೆ.

ಮರಾಠ ಸಮುದಾಯದ ಅನಿಲ ಬೆನಕೆ ಕಾಂಗ್ರೆಸ್‌ ಕೈ ಹಿಡಿದರೆ, ಜಿಲ್ಲೆಯ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ನಿಪ್ಪಾಣಿ, ಖಾನಾಪುರ ಸೇರಿದಂತೆ 10 ಕ್ಷೇತ್ರಗಳಲ್ಲಿನ ಮರಾಠಿ ಭಾಷಿಕರ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದ್ದು.

ಬಿಜೆಪಿ ಶಾಸಕ ಅನಿಲ ಬೆನಕೆ ಅವರನ್ನು ಸಂಪರ್ಕಿಸಿ, ಅವರಿಗೆ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಲಾಗಿದೆ ಎಂದು ಶಾಸಕ ಲಕ್ಷ್ಮೇ ಹೆಬ್ಬಾಳಕರ ಹೇಳಿದ್ದಾರೆ. ಈ ನಡುವೆ ಅನಿಲ ಬೆನಕೆ ಅವರು ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಲಿದ್ದು, ಬೆಂಬಲಿಗರೊಂದಿಗೆ ಮಾತುಕತೆ ನಡೆಸಿದ ಬಳಿಕ ತಮ್ಮ ರಾಜಕೀಯ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ. ಬಿಜೆಪಿ ಕೈತಪ್ಪಿದ್ದರಿಂದ ಭವಿಷ್ಯದ ರಾಜಕೀಯ ಡೋಲಾಯಮಾನವಾಗುತ್ತದೆ ಎಂಬ ಅನುಮಾನ ಬೆನಕೆ ಅವರನ್ನು ಕಾಡುತ್ತಿದೆ. ಕಟ್ಟರ್‌ ಹಿಂದೂತ್ವದ ಪ್ರತಿಪಾದಕವಾಗಿರುವ ಅನಿಲ ಬೆನಕೆ ಅವರು ಕಾಂಗ್ರೆಸ್‌ ಸೇರಬೇಕೋ? ಬೇಡವೋ ಎನ್ನುವ ಜಿಜ್ಞಾಸೆಯಲ್ಲಿದ್ದಾರೆ. ಬಿಜೆಪಿ ತೊರೆಯಲು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಏತ್ಮಧ್ಯೆ ರಾಜ್ಯಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದು, ಬಳಿಕ ಮುಂದಿನ ರಾಜಕೀಯ ನಡೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಗೆಲ್ಲೋವರೆಗೆ ಹಾರ ಹಾಕಿಸಿಕೊಳ್ಳಲ್ಲ: ಸವದಿ ಶಪಥ

ಕಾಂಗ್ರೆಸ್‌ ನಾಯಕರು ನನ್ನ ಜೊತೆಗೆ ಸಂಪರ್ಕದಲ್ಲಿರುವುದು ನಿಜ. ಆದರೆ, ಈವರೆಗೂ ಬಿಜೆಪಿ ಬಿಟ್ಟು ಕೊಡಲಿಲ್ಲ. ಹೈಮಾಂಡ್‌ ನಾಯಕರು ಶನಿವಾರ ಬೆಳಗಾವಿಗೆ ಬರಲಿದ್ದು, ಟಿಕೆಟ್‌ ಬದಲಾವಣೆ ಮಾಡುವ ಅವಕಾಶ ಇದೆ. ನನಗೆ ಏಕೆ ಟಿಕೆಟ್‌ ಮಿಸ್‌ ಆಗಿದೆ ಗೊತ್ತಿಲ್ಲ. ನನಗೆ ಟಿಕೆಟ್‌ ಕೊಡಿಸುವ ಭರವಸೆಯನ್ನು ನಮ್ಮ ನಾಯಕರು ನೀಡಿದ್ದಾರೆ. ಶನಿವಾರ ಸಂಜೆ ನನ್ನ ರಾಜಕೀಯ ನಿರ್ಧಾರ ಘೋಷಣೆ ಮಾಡುತ್ತೇನೆ ಅಂತ ಬೆಳಗಾವಿ ಉತ್ತರ ಬಿಜೆಪಿ ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!