ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಂತೆ ಕೇಂದ್ರೀಯ ಸಂಸದೀಯ ಮಂಡಳಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ಪ್ರವಾಸಕ್ಕೆ ಸಜ್ಜಾಗಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್.3): ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಚುನಾವಣೆಯಲ್ಲಿ 140 ಸ್ಥಾನ ಗೆಲ್ಲಲು ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸದಸ್ಯರಿಗೆ ಟಾಸ್ಕ್ ನೀಡಿದ್ದಾರೆ. ಮೋದಿ ಕೊಟ್ಟ ಟಾರ್ಗೆಟ್ ರೀಚ್ ಆಗಲು ಬಿಎಸ್ ಯಡಿಯೂರಪ್ಪ ಪಣ ತೊಟ್ಟಿದ್ದಾರೆ.
ಮಂಗಳೂರಿನ ಬಂಗ್ರಕೂಳೂರಿನಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶ ಮುಗಿಸಿದ ಕೂಡಲೇ ನವಮಂಗಳೂರು ಬಂದರು ಪ್ರಾಧಿಕಾರದ ಹೆಲಿಪ್ಯಾಡ್ ಬಳಿ ಸುಮಾರು 45 ನಿಮಿಷಗಳ ಕಾಲ ಚಹಾ ವಿರಾಮದಲ್ಲಿ ಕೋರ್ ಕಮಿಟಿ ಸದಸ್ಯರಿಗೆ ಕೆಲ ಮಾರ್ಗದರ್ಶನ ಮಾಡಿದ್ದಾರೆ.
ಜನತೆಗೆ ಯೋಜನೆ ತಲುಪಿಸಿ, ರಾಜಕೀಯ ಲಾಭ ಪಡೀರಿ: ಪ್ರಧಾನಿ ಮೋದಿ
ಇನ್ನು ಈ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿರುವ ಬಿಎಸ್‌ವೈ, ನನ್ನ ಮೇಲೆ ವಿಶ್ವಾಸವಿಟ್ಟು ಕೇಂದ್ರೀಯ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ. ಮುಂದಿನ ಚುನಾವಣೆಗೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ 140 ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಭೇಟಿ ನೀಡಿದಾಗ ಅವರೂ ಕೂಡ 140ರ ಗುರಿ ನೀಡಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ರಾಜ್ಯ ಪ್ರವಾಸ ಮಾಡುತ್ತೇವೆ.ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಪ್ರಯತ್ನ ನಡೆಸುತ್ತೇವೆ. ಪ್ರಚಾರಕ್ಕೆ ನರೇಂದ್ರ ಮೊದಿಯವರೂ ಬರುವುದಾಗಿ ಹೇಳಿದ್ದಾರೆ. ಎಲ್ಲರನ್ನೂ ಸೇರಿಸಿಕೊಂಡು ಮತ್ತೆ ರಾಜ್ಯದಲ್ಲಿ ನಮ್ಮದೇ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.
ಎಲ್ಲರೊಂದಿಗೆ ಮಾತನಾಡಿ, ಶೀಘ್ರದಲ್ಲಿಯೇ ದಿನಾಂಕ ನಿಗದಿಪಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಸಮಾವೇಶ ನಡೆಸಲಾಗುವುದು. ಸಮಾವೇಶಕ್ಕೆ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲಾಗುವುದು. ತಿಂಗಳಿಗೊಮ್ಮೆ ರಾಜ್ಯಕ್ಕೆ ಖುದ್ದಾಗಿ ಬರುವುದಾಗಿ ಪ್ರಧಾನಿ ಅವರೇ ಹೇಳಿದ್ದಾರೆ. ಮೋದಿಜೀ ಅವರನ್ನು ಕರೆಸುವ ಕೆಲಸ ಮಾಡಲಾಗುವುದು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಚಿತ್ರದುರ್ಗದ ಮುರುಘಾ ಶ್ರೀ ಬಂಧನದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ. ಮುರುಘಾ ಶ್ರೀ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಆ ಬಗ್ಗೆ ಹೆಚ್ಚು ಏನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುದ್ದುಹನುಮೇಗೌಡ ಈಗಾಗಲೇ ನನ್ನ ಜೊತೆ ಮಾತನಾಡಿದ್ದಾರೆ. ಪಕ್ಷಕ್ಕೆ ಸೇರುವುದಾಗಿ ತಿಳಿಸಿದ್ದಾರೆ.
ಅವರಷ್ಟೇ ಅಲ್ಲ. ಇನ್ನಷ್ಟು ಮುಖಂಡರು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.