ಯಡಿಯೂರಪ್ಪ ಸದನದಲ್ಲಿ ಮಾತಾಡ್ತಾ ಇದ್ದರೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಪಕ್ಷ ಬೇದವಿಲ್ಲದೇ ಎಲ್ಲರ ಮನಸ್ಸೂ ಒಂದು ಕ್ಷಣ ಒದ್ದೆಯಾಗಿತ್ತು.
ಸುರೇಶ್.ಎ.ಎಲ್, ರಾಜಕೀಯ ವರದಿಗಾರರು, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಫೆ.25): ಇದೋ ನಾನಿನ್ನು ಹೊರಟೆ, ನಾನು ಮತ್ತೆ ಈ ಸದನಕ್ಕೆ ಬರೋದಿಲ್ಲ. ಇನ್ನು ಚುನಾವಣೆಯಲ್ಲೂ ಸ್ಪರ್ಧೆ ಮಾಡಲ್ಲ. ಎಲ್ಲರಿಗೂ ಒಳ್ಳೆಯದಾಗಲಿ. ನೀವೆಲ್ಲಾ ಮತ್ತೆ ಚುನಾವಣೆಯಲ್ಲಿ ಮತ್ತೆ ಆರಿಸಿ ಬರುವಂತಾಗಲಿ ಹಾಗಂತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸದನದಲ್ಲಿ ಮಾತಾಡ್ತಾ ಇದ್ದರೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂಬ ಪಕ್ಷ ಬೇದವಿಲ್ಲದೇ ಎಲ್ಲರ ಮನಸ್ಸೂ ಒಂದು ಕ್ಷಣ ಒದ್ದೆಯಾಗಿತ್ತು.
ಯಡಿಯೂರಪ್ಪ ಅನ್ನೋ ವ್ಯಕ್ತಿತ್ವವನ್ನು ಒಂದು ಹಿಡಿಯಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ
ಯಡಿಯೂರಪ್ಪ ಎಂಬ ವ್ಯಕ್ತಿತ್ವವೇ ಅಂತಹುದ್ದು. ಯಡಿಯೂರಪ್ಪ ಅನ್ನೋ ವ್ಯಕ್ತಿತ್ವವನ್ನು ಒಂದು ಹಿಡಿಯಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಎಲ್ಲಿಂದ ಎಲ್ಲಿಯವರೆಗೂ ನಡೆದು ಬಂದು ಬಿಟ್ಟರು ಯಡಿಯೂರಪ್ಪ. ಎಲ್ಲಿಯ ಬೂಕನಕೆರೆ, ಎಲ್ಲಿಯ ಶಿಕಾರಿಪುರ. ಎಲ್ಲಿಂದ ಎಲ್ಲಿಗೆ ಸಂಬಂಧ.? ನಾಲ್ಕು ಭಾರಿ ಮುಖ್ಯಮಂತ್ರಿಯಾದರೂ ಒಮ್ಮೆಯೂ ಪೂರ್ಣ ಪ್ರಮಾಣದ ಅಧಿಕಾರ ನಡೆಸಲು ಆಗಲೇ ಇಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲು ಸಾಧ್ಯವೇ ಎಂಬಂತಹ ವಾತಾವರಣ. ಕಾಂಗ್ರೆಸ್ ಭದ್ರವಾಗಿ ಬೇರೂರಿತ್ತು, ಜನತಾ ಪರಿವಾರ ತನ್ನ ಕೊಂಬೆಗಳನ್ನು ಚಾಚಿತ್ತು. ಬಿಜೆಪಿ ಅಂದ್ರೆ ಅದು ಕೇವಲ ಪ್ರತಿಭಟನೆಗಳಿಗೆ, ಸರ್ಕಾರದ ವಿರುದ್ಧದ ಹೋರಾಟಗಳಿಗೆ ಸೀಮಿತವಾದ ಪಕ್ಷ ಎಂಬಂತಹ ಸ್ಥಿತಿ. ಪೆಟ್ರೋಲ್ ಬೆಲೆ ಜಾಸ್ತಿಯಾದರೆ, ಗ್ಯಾಸ್ ಬೆಲೆ ಹೆಚ್ಚಾದರೆ ಅಲ್ಲಲ್ಲಿ ಬಿಜೆಪಿಯ ನಾಯಕರು ಪ್ರತಿಭಟನೆಗೆ ಇಳೀತಿದ್ರು. ಯಾವತ್ತಾದ್ರೂ ಒಂದು ದಿನ ವಿಧಾನಸೌಧದಲ್ಲಿ ಅಧಿಕಾರಕ್ಕೆ ಏರುತ್ತೆ ಅನ್ನೋ ಕನಸು ಇನ್ನೂ ಚಿಗುರೊಡೆಯುವ ಕಾಲವದು.
ನನ್ನ ಸ್ಪರ್ಧೆ ತೀರ್ಮಾನಿಸಲು ಯಡಿಯೂರಪ್ಪ ಯಾರು?: ಸಿದ್ದರಾಮಯ್ಯ
ನಿಧಾನವಾಗಿ ವಿಪಕ್ಷದ ಸ್ಥಾನದವರೆಗೂ ಬಂದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಆಡಳಿತ ಪಕ್ಷದ ವಿರುದ್ದ ಸದನದಲ್ಲಿ ಮತ್ತದೇ ಪ್ರತಿಭಟನೆಗಳ ಸರಣಿ ಮುಂದುವರೆಸಿದ್ರು. ಆಗಲೇ ಯಡಿಯೂರಪ್ಪ ಗುಡುಗಿದರೆ, ವಿಧಾನಸೌಧ ನಡುಗುವುದು ಎಂಬ ಮಾತು ಹುಟ್ಟಿಕೊಂಡಿದ್ದು. ಯಡಿಯೂರಪ್ಪ ವಿಪಕ್ಷದಲ್ಲಿ ಇದ್ದಾರೆಂದರೆ ಆ ಖದರ‍್ರೇ ಬೇರೆ. ಸರ್ಕಾರದ ವಿರುದ್ದ ಮಾತನಾಡಲು ಎದ್ದು ನಿಂತರೆಂದರೆ ಆಡಳಿತ ಪಕ್ಷದಲ್ಲಿ ಇರುವ ಯಾರಿಗೇ ಆದ್ರೂ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆಯೇ ಸರಿ. ಹೋರಾಟದ ಬದುಕು ಅನ್ನೋ ಮಾತನ್ನು ಯಾರಿಗಾದರೂ ಅನ್ವಯಿಸಿ ಹೇಳಬಹುದೆಂದರೆ ಅದು ಯಡಿಯೂರಪ್ಪನವರಿಗೆ ಎಂಬುದಂತೂ ಸತ್ಯ.
ಕೇವಲ ಎರಡೇ ಎರಡು ಸ್ಥಾನ ಇದ್ದ ಬಿಜೆಪಿಯನ್ನು ಸರ್ಕಾರ ಮಾಡುವ ಮಟ್ಟದವರೆಗೂ ತಂದ್ದಿದ್ದು ಕಡಿಮೆ ಸಾಧನೆಯೇನಲ್ಲ. ಯಡಿಯೂರಪ್ಪ ಯಾರಿಗಾದರೂ ಮಾತು ಕೊಟ್ರು ಅಂದ್ರೆ ಶತಾಯಗತಾಯ ಅದನ್ನು ಈಡೇರಿಸಿಯೇ ತೀರುತ್ತಾರೆ. ಅದಕ್ಕೆ ಸಾಲಾಗಿ ಸಾಕ್ಷಿಗಳನ್ನು ಕೊಡ್ತಾ ಹೋಗಬಹುದು. ನಮ್ಮ ಜೊತೆ ಇರು ನಿನ್ನ ಮಂತ್ರಿ ಮಾಡ್ತೀನಿ ಅಂದೋರನ್ನು ಯಾವತ್ತೂ ಮರೆಯಲಿಲ್ಲ. ನಮ್ಮ ಪಕ್ಷಕ್ಕೆ ಬೆಂಬಲ ಕೊಡು ಮುಂದೆ ಸೂಕ್ತ ಸ್ಥಾನಮಾನ ಕೊಡ್ತೀನಿ ಅಂದೋರನ್ನೂ ಕೈ ಬಿಡಲಿಲ್ಲ. ದೆಹಲಿಯ ಮಟ್ಟದ ನಾಯಕರ ಜೊತೆಗೂ ಹೋರಾಡಿ ಕೆಲಸ ಮಾಡಿಸಿಕೊಂಡು ಬರುವ ಛಾತಿ ಯಡಿಯೂರಪ್ಪ ಅವರಿಗಿತ್ತು. ಹಠಕ್ಕೆ ಬಿದ್ದು ಜಿದ್ದು ಸಾಧಿಸುವ ಛಲಗಾರ ಅಂದ್ರೆ ತಪ್ಪಾಗಲಾರದು.
ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮಾತನಾಡಿಸುವ ಗುಣ ಯಡಿಯೂರಪ್ಪ ಅವರಿಗಿತ್ತು
ಮುಖ್ಯಮಂತ್ರಿ ಆಗಿ ಆಯ್ಕೆ ಆದ ಸಂದರ್ಭದಲ್ಲಿ ತಮ್ಮನ್ನು ನೋಡಲು ಜನ ಬರ್ತಾ ಇದ್ದಾರೆ ಎಂದಾಗ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಮನೆಯಿಂದ ಹೊರಗೆ ಬಂದು ಜನರತ್ತ ಕೈಬೀಸಿ, ಕೈಮುಗಿದು ಒಳಗೆ ಹೋಗ್ತಾ ಇದ್ರು. ದೂರದ ಊರುಗಳಿಂದ ಜನ ಬಂದಿರ್ತಾರೆ, ಅವರಿಗೆ ನಿರಾಶೆ ಮಾಡಬಾರದು ಅನ್ನೋದು ಅವರ ಭಾವನೆಯಾಗಿತ್ತು. ಯಡಿಯೂರಪ್ಪ ಅವರ ಮನೆಗೆ ಹೋಗಿ ಹೊಟ್ಟೆ ಹಸಿದುಕೊಂಡು ವಾಪಸ್ಸಾದವರ್ಯಾರೂ ಇರಲಿಕ್ಕಿಲ್ಲ. ವಿರೋಧ ಪಕ್ಷದವರೇ ಆಗಲಿ ರಾಜಕೀಯವಾಗಿ ಪರಸ್ಪರ ಶರಂಪರ ಜಗಳವಾಡಿದ್ದರೂ ಕೂಡ, ವೈಯುಕ್ತಿಕವಾಗಿ ಅವರ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮಾತನಾಡಿಸುವ ಗುಣ ಯಡಿಯೂರಪ್ಪ ಅವರಿಗಿತ್ತು.
ಇವತ್ತು ರಾಜಕಾರಣದಲ್ಲಿ ಟೀಕೆ ಮಾಡುವ ಭರದಲ್ಲಿ ತೀರಾ ವೈಯುಕ್ತಿಕವಾದ ಸಂಗತಿಗಳನ್ನೂ ಬೀದಿಗೆಳೆದು ಮಾತನಾಡುವುದನ್ನು ನೋಡಿದ್ದೇವೆ. ಆದ್ರೆ ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಅಂತಹಾ ಕೀಳುಮಟ್ಟಕ್ಕೆ ಇಳಿದವರಲ್ಲ. ರಾಜಕಾರಣವೇ ಬೇರೆ, ವೈಯುಕ್ತಿಕ ಜೀವನವೇ ಬೇರೆ ಅನ್ನುವ ಪ್ರಿನ್ಸಿಪಲ್ ಅವರಿಗಿತ್ತು.
ಪ್ರತಿಸಲ ಅಧಿವೇಶನ ಕರೆದಾಗಲೂ ಯಡಿಯೂರಪ್ಪ ಯಾವುದೇ ಸ್ಥಾನದಲ್ಲಿ ಇರಲಿ ಕಡ್ಡಾಯವಾಗಿ ಹಾಜರಾಗುತ್ತಿದ್ರು.ಆ ವಿಚಾರದಲ್ಲಿ ಅವರೊಬ್ಬ ವಿಧೇಯ ವಿದ್ಯಾರ್ಥಿ, ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸದಸ್ಯರಿಗೆ ಕಳೆದ ವರ್ಷದಿಂದ ಉತ್ತಮ ಶಾಸಕ ಎಂಬ ಪ್ರಶಸ್ತಿಯನ್ನೂ ಕೊಡಲಾಗ್ತಿದೆ. ಮೊದಲ ವರ್ಷವೇ ಈ ಪ್ರಶಸ್ತಿಯನ್ನು ಪಡೆದವರು ಯಡಿಯೂರಪ್ಪ. ಖಂಡಿತವಾಗಿಯೂ ಇದೊಂದು ಅರ್ಹ ಆಯ್ಕೆ ಕೂಡಾ ಆಗಿತ್ತು.
ನಾಲ್ಕು ಸಲ ಸಿಎಂ ಸ್ಥಾನಕ್ಕೇರಿದ ಯಡಿಯೂರಪ್ಪ
ನಾಲ್ಕು ಸಲ ಮುಖ್ಯಮಂತ್ರಿ ಸ್ಥಾನಕ್ಕೇರಿದ ಯಡಿಯೂರಪ್ಪ, ಒಂದೊಂದು ಸಲವೂ ಸವೆಸಿದ್ದು ಮುಳ್ಳಿನ ಹಾದಿಯನ್ನೇ.. ದಶಕಗಳ ಹೋರಾಟದ ಫಲವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೂ ಮೊದಲ ಬಾರಿಗೆ ಪೂರ್ಣ ಬಹುಮತ ಸಿಗದೇ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಬೇಕಾಯಿತು. ಅಧಿಕಾರ ಹಸ್ತಾಂತರ ಮಾಡದ ಕುಮಾರಸ್ವಾಮಿ ವಿರುದ್ದ ಸಿಡಿದೆದ್ದು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದರೂ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾಯಿತು, ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದಾಗಲೇ ಜೈಲು ಸೇರಿದ ಅಪಖ್ಯಾತಿಗೂ ಒಳಗಾಗಬೇಕಾಯಿತು. ಮುಂದೆ ಕಡಿಮೆ ಸ್ಥಾನ ಗಳಿಸಿ ಮತ್ತೆ ಸಿಎಂ ಆದಾಗಲೂ ವಿಶ್ವಾಸಮತ ಸಾಭಿತುಪಡಿಸಲಾಗದೇ ಎಂಟು ದಿನಕ್ಕೇ ಅಧಿಕಾರದಿಂದ ಇಳಿಯಬೇಕಾಯಿತು. ಛಲಬಿಡದ ಯಡಿಯೂರಪ್ಪ ಮುಂದೆ ಒಂದೇ ವರ್ಷದಲ್ಲಿ ಕಾಂಗ್ರೆಸ್, ಜೆಡಿಎಸ್ ನಿಂದ ಬಂದ ಶಾಸಕರ ಜೊತೆ ಸರ್ಕಾರ ರಚನೆ ಮಾಡಿದ್ರು. ಇಷ್ಟಕ್ಕೆ ಯಡಿಯೂರಪ್ಪ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ.
ಕಡೆಯಬಾರಿ ಸಿಎಂ ಆದಾಗಂತೂ ಯಡಿಯೂರಪ್ಪ ಪಟ್ಟ ಕಷ್ಟ ಯಾರಿಗೂ ಬೇಡವೆಂಬಂತಾಗಿತ್ತು. ಸಚಿವ ಸಂಪುಟವಿನ್ನೂ ರಚನೆಯಾಗದೇ ಯಡಿಯೂರಪ್ಪ ಏಕಾಂಗಿಯಾಗಿದ್ದ ಕಾಲವದು, ನೆರೆ ಬಂದು ರಾಜ್ಯ ಸಂಕಷ್ಟಕ್ಕೆ ಸಿಲುಕಿತ್ತು. ಒಂಟಿಯಾಗಿಯೇ ಪ್ರವಾಹಪೀಡಿತ ಪ್ರದೇಶಗಳಿಗೆ ಪ್ರವಾಸ ಹೊರಟ ಯಡಿಯೂರಪ್ಪ ಆ ಸಂಧರ್ಭವನ್ನು ನಿಭಾಯಿಸಿದ್ದೇ ಒಂದು ರೋಚಕ. ಮುಂದೆ ಕೋವಿಡ್ ಸಂಧರ್ಭದಲ್ಲೂ ಯಡಿಯೂರಪ್ಪ ಪರಿಸ್ಥಿತಿ ನಿಭಾಯಿಸಲು ಅಷ್ಟು ಸುಲಭವಾಗಿರಲಿಲ್ಲ. ಕೋವಿಡ್ ಸಂಕಷ್ಟದ ಕಾಲವನ್ನೂ ಗೆದ್ದ ಯಡಿಯೂರಪ್ಪ ತಮ್ಮದೇ ಪಕ್ಷದ ದೆಹಲಿ ನಾಯಕರ ಮನ ಗೆಲ್ಲುವುದು ಸಾಧ್ಯವಾಗಲಿಲ್ಲ, ಕೋವಿಡ್ ಪರಿಸ್ಥಿತಿ ಮುಗಿಯುತ್ತಿದ್ದಂತೆಯೇ ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಸಿಎಂ ಸ್ಥಾನ ಬಿಟ್ಟುಕೊಡಬೇಕಾಯಿತು. ದಕ್ಷಿಣ ಭಾರತದಲ್ಲಿ ಏನೂ ಆಗಿಲ್ಲದ ರಾಜಕೀಯ ಪಕ್ಷವೊಂದನ್ನು ಅಧಿಕಾರದ ಕುರ್ಚಿ ಮೇಲೆ ಕೂರಿಸಿ ತಮ್ಮ ಪಾಡಿಗೆ ತಾವು ರಾಜೀನಾಮೆ ಕೊಟ್ಟು ತುಂಬಿದ ಕಣ್ಣುಗಳೊಂದಿಗೆ ವಿಧಾನಸೌಧದಿಂದ ಯಡಿಯೂರಪ್ಪ ಹೊಗ್ತಿದ್ರೆ ವಿರೋದ ಪಕ್ಷದವರ ಕಣ್ಣೂ ಒಂದರೆಕ್ಷಣ ಒದ್ದೆಯಾಗಿತ್ತು.
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್.ಯಡಿಯೂರಪ್ಪ
ರಾಜಕೀಯ ಜೀವನದುದ್ದಕ್ಕೂ ಅನೇಕ ಏಳುಬೀಳುಗಳನ್ನು ಕಂಡ ಬಿಎಸ್‌ವೈ
ತಮ್ಮ ರಾಜಕೀಯ ಜೀವನದುದ್ದಕ್ಕೂ ಅನೇಕ ಏಳುಬೀಳುಗಳನ್ನು ಕಂಡ ಯಡಿಯೂರಪ್ಪ, ಸಿಎಂ ಸ್ಥಾನದಿಂದ ಇಳಿದ ಮೇಲೂ ಸ್ಥಿತಪ್ರಜ್ಞರಂತೆ ಉಳಿದುಬಿಟ್ಟರು. ಪುತ್ರವ್ಯಾಮೋಹ, ಅಧಿಕಾರದ ಹಂಬಲ, ಇತ್ಯಾದಿ ಆರೋಪಗಳೇನೇ ಇರಲಿ. ಯಡಿಯೂರಪ್ಪನಂತಹಾ ವ್ಯಕ್ತಿ ನಾನಿನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಅಂತಾ ಹೇಳುತ್ತಿದ್ದ ಹಾಗೇ ಸದನದಲ್ಲಿದ್ದ ಪ್ರತಿಪಕ್ಷಗಳ ಸದಸ್ಯರೂ ಕೂಡ ಆಕ್ಷೇಪ ವ್ಯಕ್ತಪಡಿಸಿದರು.
ಯಡಿಯೂರಪ್ಪನಂತಹವರು ಸದನದಲ್ಲಿ ಇರಬೇಕು ಅಂತಾ ಒಕ್ಕೊರಲಿನಿಂದ ಆಗ್ರಹಿಸಿದ್ರು. ರಾಜಕಾರಣದಲ್ಲಿ ಇದು ನನ್ನ ಕೊನೆ ಚುನಾವಣೆ ಅಂತಾ ಹೇಳಿಕೊಂಡು ಸಿಂಪತಿ ಗಿಟ್ಟಿಸಿಕೊಂಡವರು ಅನೇಕರಿದ್ದಾರೆ, ಆದ್ರೆ ಯಡಿಯೂರಪ್ಪನವರಂತೆ ಸದನದಲ್ಲೇ ಆನ್ ರೆಕಾರ್ಡ್ ಈ ಮಾತನ್ನು ಹೇಳಿ ಅದಕ್ಕೇ ಅಂಟಿಕೊಂಡವರು ಬಹುಶಃ ಯಡಿಯೂರಪ್ಪ ಒಬ್ಬರೇ ಇರಬೇಕು. ಅದೇನೇ ಇದ್ದರೂ ರಾಜ್ಯ ರಾಜಕಾರಣ ಎಂದೂ ಮರೆಯದ ನಾಯಕ ಯಡಿಯೂರಪ್ಪ.