ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ನಾಲ್ವರ ಶಾಸಕರಿಗೆ ನೀಡಲಾಗಿದ್ದ ನಿಗಮ ಮಂಡಳಿಯನ್ನು ವಾಪಸ್ ತೆಗೆದುಕೊಂಡು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, (ಜುಲೈ.27): ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಯಲ್ಲಿ ಪಕ್ಷದ 24 ಶಾಸಕರುಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಇಂದು (ಸೋಮವಾರ) ಮಧ್ಯಾಹ್ನ ಬಿಜೆಪಿಯ 24 ಶಾಸಕರುಗಳಿಗೆ ನಿಗಮ ಮಂಡಳಿಗೆ ನೇಮಕಾತಿ ಮಾಡಿ ಸಿಎಂ ಆದೇಶ ಹೊರಡಿಸಿದ್ದರು. ಆದ್ರೆ, ಸಂಜೆ ಹೊತ್ತಿಗೆ ನಾಲ್ವರು ಶಾಸಕರಿಗೆ ನೀಡಲಾಗಿದ್ದ ನಿಗಮ ಮಂಡಳಿ ನೇಮಕಾತಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ವಾಪಸ್ ತೆಗೆದುಕೊಂಡಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ವರ್ಷ: ಶಾಸಕರಿಗೆ ಭರ್ಜರಿ ಗಿಫ್ಟ್ ನೀಡಿದ ಸಿಎಂ ಯಡಿಯೂರಪ್ಪ
ಶಾಸಕರಾದ ಲಾಲಾಜಿ ಮೆಂಡನ್, ತಿಪ್ಪಾರೆಡ್ಡಿ, ಬಸವರಾಜ್ ದಢೆಸೂಗೂರು, ಪರಣ್ಣ ಮುನವಳ್ಳಿ ಅವರಿಗೆ ನೀಡಲಾಗಿದ್ದ ನಿಗಮ ಮಂಡಳಿ ಅಧ್ಯಕ್ಷ ನೇಮಕವನ್ನ ತಾಂತ್ರಿಕ ಕಾರಣಗಳಿಂದ ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೊಂದು ಆದೇಶ ಪತ್ರ ಹೊರಡಿಸಿದ್ದಾರೆ.
1. ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ - ದೇವರಾಜ ಅರಸ್ ಹಿಂದುಳಿದ ಅಭಿವೃದ್ಧಿ ನಿಗಮ ಮಂಡಳಿ
2. ಪರಣ್ಣ ಮುನವಳ್ಳಿ - ರಾಜ್ಯ ಹಣಕಾಸು ಸಂಸ್ಥೆ
3. ಲಾಲಾಜಿ ಮೆಂಡನ್ - ರಾಜ್ಯ ಹಿಂದುಳಿದ ವರ್ಗಗಳ ಆಯೋಗ
4 ಬಸವರಾಜ್ ದಡೆಸೂಗುರು - ರಾಜ್ಯ ಸಮಾಜಕಲ್ಯಾಣ ಮಂಡಳಿ
ಮೇಲೆ ತಿಳಿಸಲಾಗಿರುವ ಶಾಸಕರುಗಳಿಗೆ ನಿಗಮ ಮಂಡಳಿಗೆ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಅವರಿಗೆ ನೀಡಲಾಗಿದ್ದ ಹುದ್ದೆಯನ್ನು ದಿಢೀರ್ ಹಿಂಪಡೆಯಲಾಗಿದ್ದು, ಶೀಘ್ರದಲ್ಲೇ ಈ ನಾಲ್ಕು ಜನರಿಗೆ ಬೇರೆ ನಿಗಮ ಮಂಡಳಿಯ ಸ್ಥಾನ ನೀಡುವ ಸಾಧ್ಯತೆ.
ಸ್ಪಷ್ಟ ಕಾರಣ ಇಲ್ಲ
ಹೌದು.. ನೇಮಕಾತಿ ಆದೇಶ ಹಿಂಪಡೆಯಲು ಯಾವ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಆದ್ರೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸ್ಥಾನ ವಿಚಾರವಾಗಿ ಶಾಸಕ ಲಾಲಾಜಿ ಮೆಂಡನ್ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು.
ಆಯೋಗದ ಅಧ್ಯಕ್ಷ ಸ್ಥಾನ ಸಾಂವಿಧಾನಿಕ ಸ್ಥಾನಮಾನವಿರುವಂಥದ್ದು, ಹಾಗಾಗಿ ಆಯೋಗದ ಅಧ್ಯಕ್ಷರಾಗಲು ಹೈಕೋರ್ಟ್ ಜಡ್ಜ್ ಅಥವಾ ಹೈಕೋರ್ಟ್ ಜಡ್ಜ್ ಆಗಿ ನೇಮಕವಾಗುವ ಅರ್ಹತೆಗಳು ಇರಬೇಕು. ಆದ್ರೆ, ಅದ್ಯಾವ ಅರ್ಹತೆಗಳು ಶಾಸಕ ಲಾಲಾಜಿ ಮೆಂಡನ್ ಅವರಿಗಿಲ್ಲ. ಇದರಿಂದ ಇನ್ನಷ್ಟು ವಿರೋಧಗಳು ಹೆಚ್ಚಾಗುವ ಮೊದಲೇ ಸಿಎಂ ಈ ನೇಮಕಾತಿಯನ್ನು ವಾಪಸ್ ಪಡೆದಿದ್ದಾರೆ.