* ಹಾವೇರಿಗೆ ನಾವು ತಂದ ವೈದ್ಯ ಕಾಲೇಜು ಬೇರೆಡೆಗೆ ಒಯ್ದರು
* ಅಧಿಕಾರದಲ್ಲಿದ್ದಾಗ ಹಾವೇರಿಯತ್ತ ಸಿದ್ದು ತಿರುಗಿಯೂ ನೋಡಿಲ್ಲ: ಸಿಎಂ
* ಹಾನಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಹಾವೇರಿ(ಅ.22): ಅಧಿಕಾರ ಇದ್ದಾಗ ಹಾವೇರಿಯನ್ನು(Haveri) ಮರೆತಿದ್ದ ಸಿದ್ದರಾಮಯ್ಯ(Siddaramaiah) ಇದೀಗ ಹಾನಗಲ್‌ಗೆ(hangal) ಬಂದಿದ್ದಾರೆ. ಉಪ ಚುನಾವಣೆಯಲ್ಲಿ(By Polls) ಗೆದ್ದು ತೋರಿಸುತ್ತೇವೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಅವರ ಈ ಕನಸು ನನಸಾಗಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(KPCC President DK Shivakumar) ಮತ್ತು ಸಿದ್ದರಾಮಯ್ಯ(Siddaramaiah) ಅವರ ಪತನ ಈ ಉಪ ಚುನಾವಣೆಯಿಂದಲೇ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಹೇಳಿದರು.
ಹಾನಗಲ್‌ನಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಬಿರುಸಿನ ಪ್ರಚಾರ ನಡೆಸಿದ ಬೊಮ್ಮಾಯಿ ಕಾಂಗ್ರೆಸ್(Congress) ವಿರುದ್ಧ ತೀವ್ರ ಹರಿಹಾಯ್ದರು. ಕಾಂಗ್ರೆಸ್‌ಗೆ ಈಗ ಉತ್ತರ ಕರ್ನಾಟಕದ(North Karnataka) ಬಗ್ಗೆ ಕಾಳಜಿ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಾನಗಲ್‌ನತ್ತ ತಿರುಗಿ ಕೂಡ ನೋಡಿಲ್ಲ. ಈಗ ಚಿನ್ನದ ತಟ್ಟೆಯಲ್ಲಿ ಅನ್ನ ಕೊಡುತ್ತೇವೆ ಎನ್ನುತ್ತಿದ್ದಾರೆ. ಹಾವೇರಿ ಜಿಲ್ಲೆಯ ಮೆಡಿಕಲ್ ಕಾಲೇಜು ತಂದದ್ದು ನಾವು. ಆದರೆ ಅವರು ಅದನ್ನು ಬೇರೆಡೆ ತೆಗೆದುಕೊಂಡು ಹೋದರು. ಯಾವಾಗ ಬಿಜೆಪಿ ಆರಿಸಿ ಬಂದಿದೆಯೋ ಆಗ ಕ್ಷೇತ್ರದ ಅಭಿವೃದ್ಧಿ ಆಗಿದೆ. ಕಾಂಗ್ರೆಸ್ ಆಯ್ಕೆಯಾದಾಗ ಕಾಂಗ್ರೆಸ್ಸಿಗರು ಮಾತ್ರ ಅಭಿವೃದ್ಧಿ ಆಗಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ವಾಸ್ತವ ಅರಿಯದೆ ವಾದ ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಾವು ಜನರ ಮನಸ್ಸು ಗೆಲ್ಲುವ ಮೂಲಕ ಉಪಚುನಾವಣೆ ಗೆಲ್ಲುತ್ತೇವೆ. ಜನರ ಪ್ರೀತಿ, ವಿಶ್ವಾಸವೇ ನಮಗೆ ಶಕ್ತಿ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ಮೋದಿ ನೇತೃತ್ವದಲ್ಲಿ ಕೋವಿಡ್ ಮಹಾಮಾರಿಯನ್ನು ಯಶಸ್ವಿಯಾಗಿ ಎದುರಿಸಲಾಗಿದೆ. ಜನತೆಗೆ ಊಟ, ಆಹಾರದ ಕಿಟ್ ವಿತರಣೆ ಮಾಡಲಾಗಿದೆ. ನಯಾಪೈಸೆ ತೆಗೆದುಕೊಳ್ಳದೆ ವ್ಯಾಕ್ಸಿನ್ ನೀಡಲಾಗಿದೆ. ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ತಾವು ಉಚಿತವಾಗಿ ರೇಷನ್ ವಿತರಣೆ ಮಾಡಿದ್ದಾಗಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ರೇಷನ್‌ನ ಒಂದು ಕೆಜಿ ಅಕ್ಕಿಯಲ್ಲಿ ಕೇಂದ್ರದ .29 ಇದೆ ಎಂಬುದು ಜನತೆಗೆ ಗೊತ್ತಿರದ ವಿಷಯವಲ್ಲ. ಗುಡಿ ಕಟ್ಟಿದವರನ್ನು ಬಿಟ್ಟು ಕಳಸ ಇಟ್ಟವರನ್ನು ನೆನಪು ಮಾಡಿಕೊಂಡಂತೆ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಇಂಥ ಬೂಟಾಟಿಕೆಯ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸಿ, ಸಿದ್ದರಾಮಯ್ಯ ಅವರು ಮತ ಕೇಳಲು ಬಂದರೆ ಹಾನಗಲ್‌ಗೆ ನಿಮ್ಮ ಕೊಡುಗೆ ಏನೆಂದು ಪ್ರಶ್ನಿಸಿ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪಾವಸ್ ಹೋಗುವಂತೆ ತಿಳಿಸಿ ಎಂದರು ಬೊಮ್ಮಾಯಿ.