ಒಡಿಶಾ ಕೈ ಶಾಸಕರ ಖರೀದಿ ಹೈಡ್ರಾಮ !

Kannadaprabha News   | Kannada Prabha
Published : Mar 16, 2026, 04:42 AM IST
Odisha Congress MLA's Operation BJP

ಸಾರಾಂಶ

ಒಡಿಶಾ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಹಾಗೂ ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಕಾಂಗ್ರೆಸ್‌ ಶಾಸಕರನ್ನು ರಾಜ್ಯದಲ್ಲೂ ಖರೀದಿಸುವ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದ್ದು, ಭಾನುವಾರ ಭಾರೀ ಹೈಡ್ರಾಮಾ ನಡೆದಿದೆ.

 ರಾಮನಗರ/ ಬೆಂಗಳೂರು :  ಒಡಿಶಾ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಹಾಗೂ ಆಪರೇಷನ್ ಕಮಲ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಕಾಂಗ್ರೆಸ್‌ ಶಾಸಕರನ್ನು ರಾಜ್ಯದಲ್ಲೂ ಖರೀದಿಸುವ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದ್ದು, ಭಾನುವಾರ ಭಾರೀ ಹೈಡ್ರಾಮಾ ನಡೆದಿದೆ.

ಒಡಿಶಾ ರಾಜ್ಯದ ಮೂವರು ವ್ಯಕ್ತಿಗಳು, ಕರ್ನಾಟಕಕ್ಕೆ ಆಗಮಿಸಿ, ಕರ್ನಾಟಕದ ಒಬ್ಬ ಕಾಂಗ್ರೆಸ್‌ ಶಾಸಕರನ್ನು ರೆಸಾರ್ಟ್‌ನಲ್ಲಿ ಭೇಟಿಯಾಗಿ ಬ್ಲ್ಯಾಂಕ್‌ ಚೆಕ್ ನೀಡಿ ತಮ್ಮ ಪರವಾಗಿ ಮತದಾನ ಮಾಡಲು ಓಲೈಸುವ ವೇಳೆಯೇ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಕಾಂಗ್ರೆಸ್‌ ಮುಖಂಡರು, ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದ ಸಮೀಪದ ರೆಸಾರ್ಟ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ಆಗಿದ್ದು ಏನು?:

ಮಾ.16ರಂದು ನಡೆಯುವ ರಾಜ್ಯಸಭೆ ಚುನಾವಣೆಯಲ್ಲಿ ಆಪರೇಷನ್‌ ಕಮಲದ ಮೂಲಕ ಅಡ್ಡಮತದಾನ ನಡೆಯುವ ಆತಂಕದಿಂದಾಗಿ ಒಡಿಶಾದ ತನ್ನ ಎಂಟು ಮಂದಿ ಶಾಸಕರನ್ನು ಕಾಂಗ್ರೆಸ್‌ ಇತ್ತೀಚೆಗೆ ಕರ್ನಾಟಕಕ್ಕೆ ಕಳುಹಿಸಿತ್ತು. ಅವರಿಗೆ ಟ್ರಬಲ್‌ ಶೂಟರ್ ಖ್ಯಾತಿಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.

ಶನಿವಾರ ರಾತ್ರಿ ಒಡಿಶಾದಿಂದ ಮೂವರು ವ್ಯಕ್ತಿಗಳು ಬಂದಿದ್ದು, ಓರ್ವ ಸ್ಥಳೀಯ ವ್ಯಕ್ತಿಯ ಹೆಸರಿನಲ್ಲಿ ವಂಡರ್‌ ಲಾ ರೆಸಾರ್ಟ್‌ನಲ್ಲಿ ರೂಂ ಬುಕ್‌ ಮಾಡಿದ್ದರು. ನಾಲ್ವರು ಭಾನುವಾರ ಬೆಳಗ್ಗೆ ಎದ್ದು ಓರ್ವ ಶಾಸಕನ ಜತೆಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಆತನ ಜತೆಗೆ ಫೋಟೋ ತೆಗೆಸಿಕೊಂಡು, ಕೈಯಲ್ಲಿ ಚೆಕ್ ಬುಕ್ ಹಿಡಿದು ಮಾತನಾಡಿದ್ದಾರೆ. ಇದರ ಬಗ್ಗೆ ಅನುಮಾನಗೊಂಡ ಸ್ಥಳೀಯ ಕಾಂಗ್ರೆಸ್ ಮುಖಂಡರು, ಶಾಸಕರ ಜತೆ ಮಾತನಾಡುತ್ತಿದ್ದ ಒಡಿಶಾದ ಬಿರೇಂದ್ರ ಪ್ರಸಾದ್, ಅಜಿತ್‌ಕುಮಾರ್ ಸಾಹು ಅವರನ್ನು ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಮತ್ತಿಬ್ಬರು ಪರಾರಿಯಾಗಿದ್ದಾರೆ.

ಬಿಜೆಪಿ ಮೇಲೆ ಆಕ್ರೋಶ:

ಈ ಕುರಿತು ಒಡಿಶಾ ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಾಖ ಮಾತನಾಡಿ, ‘ಕಾಂಗ್ರೆಸ್ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿದೆ. ನಾಲ್ವರು ಏಜೆಂಟರನ್ನು ರೆಸಾರ್ಟ್‌ಗೆ ಕಳುಹಿಸಿ ಶಾಸಕರ ಜತೆಗೆ ವ್ಯಾಪಾರ ಕುದುರಿಸಲು ಯತ್ನಿಸಿದ್ದರು. ಇವರು ನಮ್ಮ ಶಾಸಕರಿಗೆ ₹೫ ಕೋಟಿ ಹಣದ ಆಫರ್ ಕೊಟ್ಟಿದ್ದಾರೆ. ಖಾಲಿ ಚೆಕ್ ತಂದು ಬಿಜೆಪಿಗೆ ಮತ ಹಾಕುವಂತೆ ಒತ್ತಡ ಹೇರಿದ್ದಾರೆ’ ಎಂದು ಆರೋಪಿಸಿದರು.

‘ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್‌ ಮಾಝಿ ಅವರ ಆಪ್ತ ಎಂದು ಹೇಳಲಾದ ವ್ಯಕ್ತಿ ಇಲ್ಲಿಗೆ ಬಂದು ಶಾಸಕರ ಖರೀದಿಗೆ ಯತ್ನಿಸಿದ್ದಾನೆ. ಆದರೆ ನಮ್ಮ ಯಾವ ಶಾಸಕರು ಬಿಜೆಪಿ ಆಮಿಷಕ್ಕೆ ಒಳಗಾಗಿಲ್ಲ. ಆಫರ್ ಕೊಡಲು ಬಂದ ವ್ಯಕ್ತಿಗಳನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಹಿಡಿದು ಪೊಲೀಸರಿಗೆ ಕೊಟ್ಟಿದ್ದಾರೆ. ಅವರ ವಿರುದ್ಧ ನಾವು ಕೂಡ ಪೊಲೀಸರಿಗೆ ದೂರು ನೀಡಿದ್ದೇವೆ. ಬಿಜೆಪಿ ಸಂವಿಧಾನದ ವಿರುದ್ಧ ಅಧಿಕಾರ ಹಿಡಿಯಲು ಹೊರಟಿದೆ’ ಎಂದು ಕಿಡಿಕಾರಿದರು.

‘ಒಡಿಶಾ ಕಾಂಗ್ರೆಸ್ ಶಾಸಕರಿದ್ದ ಬಿಡದಿಯ ರೆಸಾರ್ಟ್‌ನಲ್ಲಿ ಮೊದಲಿಗೆ ಬಿಜೆಪಿಯವರು ಬಂದು ರೂಮ್‌ಬುಕ್ ಮಾಡಿ ಉಳಿದುಕೊಂಡಿದ್ದಾರೆ. ಬ್ಯಾಟರಾಯನಪುರ ಸುರೇಶ್ ಮೂಲಕ ರೂಮ್ ಬುಕ್ ಮಾಡಿದ್ದಾರೆ. ಬ್ಲ್ಯಾಂಕ್ ಚೆಕ್ ಸಮೇತ ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ’ ಎಂದರು.

ಬಿಡದಿಯಿಂದ ಬೆಂಗಳೂರು ಹೋಟೆಲ್‌ಗೆ ಶಿಫ್ಟ್‌

ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯವಿದ್ದ ಒಡಿಶಾದ ಎಂಟು ಮಂದಿ ಕಾಂಗ್ರೆಸ್‌ ಶಾಸಕರನ್ನು ಆಪರೇಷನ್‌ ಕಮಲ ನಡೆಸುವ ವಿಫಲಯತ್ನದ ಬೆನ್ನಲ್ಲೇ ಅವರನ್ನೆಲ್ಲಾ ಪಕ್ಷದ ನಾಯಕತ್ವ ಭಾನುವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ವೊಂದಕ್ಕೆ ಸ್ಥಳಾಂತರಿಸಿದೆ.

ಬಿಡದಿಯ ರೆಸಾರ್ಟ್‌ನಿಂದ ಮೊದಲು ಸದಾಶಿವನಗರದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿದ ಶಾಸಕರನ್ನು, ಅಲ್ಲಿಂದ ವಿಮಾನ ನಿಲ್ದಾಣದಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಡಬಲ್‌ ಟ್ರೀ ಬೈ ಹಿಲ್ಟನ್‌ ಹೋಟೆಲ್‌ಗೆ ಕರೆದೊಯ್ದು ವಾಸ್ತವ್ಯ ಹೂಡಲಾಗಿದೆ. ಈ ಶಾಸಕರ ಆತಿಥ್ಯ ನೋಡಿಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಖರ್ಗೆ ಅವರ ನಿವಾಸದಲ್ಲಿ ಸ್ವಾಗತಿಸಿ ನಂತರ ಹೋಟೆಲ್‌ ವಾಸ್ತವ್ಯಕ್ಕೆ ಕಳುಹಿಸಿಕೊಟ್ಟರು.

ಕುದುರೆ ವ್ಯಾಪಾರಕ್ಕೆ ನಾವು ಬಗ್ಗಲ್ಲ

ನಮ್ಮ ನಮ್ಮ ಶಾಸಕರು ತಾವು ಕುದುರೆ ವ್ಯಾಪಾರಕ್ಕೆ ಸಿದ್ಧರಿಲ್ಲ. ಈ ಆಮಿಷ ಒಡ್ಡಿದವರ ವಿರುದ್ಧ ಖಂಡಿತಾ ದೂರು ನೀಡುತ್ತೇವೆ. ಕಾನೂನು ಮುಂದಿನದನ್ನು ನೋಡಿಕೊಳ್ಳಲಿದೆ,

- ಡಿ.ಕೆ. ಶಿವಕುಮಾರ್‌, ಡಿಸಿಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಂಚರಾಜ್ಯ ಚುನಾವಣೆ ಘೋ಼ಷಣೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ