ಶಾ ಆಗಮನಕ್ಕೂ ಮುನ್ನವೇ ಸಂತೋಷ್ ಎಂಟ್ರಿ, ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು

By Suvarna News  |  First Published May 2, 2022, 4:37 PM IST

* ಕರ್ನಾಟಕ ಸಂಪುಟ ಪುನಾರಚನೆಗೆ ಮುಹೂರ್ತ ಫಿಕ್ಸ್
* ಬಿಎಲ್‌ ಸಂತೋಷ್ ನೇತೃತ್ವದಲ್ಲಿ ಪಟ್ಟಿ ಬಹುತೇಕ ಅಂತಿಮ
* ರಾಜ್ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು ಕೊಟ್ಟ ಸಂತೋಷ್
 


ಬೆಂಗಳೂರು, (ಮೇ.02): ಒಂದೆಡೆ ಪಿಎಸ್‌ಐ ಅಕ್ರಮ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಿವೆ ಎನ್ನುವ ಮಾತುಗಳು ಸಂಲಚನ ಮೂಡಿಸಿದೆ.

ಹೌದು....ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸುವ ಮೊದಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ರಾಜ್ಯ ಆಗಮಿಸಿ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೇ ಪರೋಕ್ಷವಾಗಿ ಪಕ್ಷದಲ್ಲಿ ಮಹತ್ವದ ಬದಲಾವಣೆಗಳ ಸುಳಿವು ಸಹ ಕೊಟ್ಟಿದ್ದಾರೆ.

Tap to resize

Latest Videos

ನಾಯ​ಕ​ತ್ವ ಬದ​ಲು, ಹೊಸ ಮುಖ​ಕ್ಕೆ ಮಣೆ: ಸಂತೋಷ್‌ ಹೇಳಿಕೆ ಸಂಚಲನ

ಬಿಎಲ್ ಸಂತೋಷ್ ಮಹತ್ವದ ಸಭೆ
ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಹತ್ವದ ಚರ್ಚೆಗಳು ನಡೆದಿದ್ದು, 
 ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಸಹ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ, ಸಂಪುಟ ಪುನಾರಚನೆ ಪಟ್ಟಿಯ ಜತೆಗೆ ನಿಗಮ- ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿಯನ್ನೂ ಸಿದ್ದಗೊಳಿಸಲಾಗಿದೆ. ಬಿ.ಎಲ್ ಸಂತೋಷ್ , ಪ್ರಹ್ಲಾದ್ ಜೋಷಿ, ಸಿ.ಟಿ.ರವಿ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರ ಸಭೆಯಲ್ಲಿ ಪಟ್ಟಿ ಅಂತಿಮಗೊಂಡಿದೆ ಎನ್ನಲಾಗಿದೆ.

ಈ ಹಿಂದೆ ನಿಗಮ ಮಂಡಳಿ ಪಟ್ಟಿ ಸಿದ್ದಗೊಂಡಾಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದರಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಸಿದ್ದಗೊಂಡ ಪಟ್ಟಿಯನ್ನು ಮಂಗಳವಾರ ಅಮಿತ್ ಶಾ ಅವರ ಸಮ್ಮುಖದಲ್ಲಿ ಇಟ್ಟು ಅವರಿಂದ ಒಪ್ಪಿಗೆ ಪಡೆಯಲಾಗುತ್ತದೆ.  ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯುವ ಸಾಧ್ಯತೆ ಇದ್ದು, ಅಲ್ಲಿ ಎಲ್ಲ ಚರ್ಚೆಗಳಿಗೂ ತೆರೆ ಬೀಳುವ ಸಾಧ್ಯತೆ ಇದೆ.

ಬದಲಾವಣೆಯ ಸುಳಿವು ಕೊಟ್ಟ ಸಂತೋಷ್ 
ಯೆಸ್‌...ಬಿಎಲ್ ಸಂತೋಷ್ ಅವರು ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು ಕೊಟ್ಟಿದ್ದಾರೆ.  ಮುಂದಿನ ಚುನಾವಣೆಯ ಅಭ್ಯರ್ಥಿ ಆಯ್ಕೆ ಹಾಗೂ ವಂಶಾಡಳಿತ ರಾಜಕಾರಣದ ಕುರಿತಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆ ಈಗ ಬಿಜೆಪಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಯಾರನ್ನು ಗುರಿಯಾಗಿಸಿಕೊಂಡು ಸಂತೋಷ್ ಈ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಪಕ್ಷದಲ್ಲಿ ಗುಸುಗುಸು ಆರಂಭವಾಗಿದೆ.

ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಸಂಘಟನಾತ್ಮಕ ಸಿದ್ಧತೆ ಸೇರಿದಂತೆ ಬಿಜೆಪಿಯಲ್ಲಿ ಸಾಕಷ್ಟು ಸಿದ್ಧತೆ ನಡೆಯುತ್ತಿರುವಾಗಲೇ ಸಂತೋಷ್ ಅವರ ಹೇಳಿಕೆ ಈಗ ಎಲ್ಲಿಲ್ಲದ ಚರ್ಚೆಗೆ ಕಾರಣವಾಗಿದೆ. ಸಂಘಟನಾತ್ಮಕವಾಗಿ ಆಯಕಟ್ಟಿನ ಸ್ಥಾನದಲ್ಲಿರುವ ಸಂತೋಷ್ ಕೇವಲ “ವಾಕ್ ಚಪಲ”ಕ್ಕಾಗಿ ಈ ಮಾತನಾಡಿರಲು ಸಾಧ್ಯವಿಲ್ಲ. ಪಕ್ಷದ ವಲಯದಲ್ಲಿ ನಡೆಯಬಹುದಾದ ಮಹತ್ತರ ಬದಲಾವಣೆ  ಸುಳಿವನ್ನೇ ಅವರು ನೀಡಿದ್ದಾರೆ ಎಂದು ರಾಜಕೀಯ ಲೆಕ್ಕಾಚಾರವಾಗಿದೆ. 

ಸಂತೋಷ್ ಅವರ ಹೇಳಿಕೆಯಲ್ಲಿ ಪ್ರಮುಖವಾಗಿ ನಾಲ್ಕು ಅಂಶಗಳು ಈಗ ಚರ್ಚೆಗೆ ಕಾರಣವಾಗಿದೆ. ನಾಯಕತ್ವದ ವಯಸ್ಸಿನ ಬಗ್ಗೆ ಸಂತೋಷ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಹಿರಿಯರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ.  ಉತ್ತರ ಪ್ರದೇಶ, ಗುಜರಾತ್ ಹಾಗೂ ದಿಲ್ಲಿ ಕಾರ್ಪೋರೇಷನ್ ಚುನಾವಣೆಗೆ ನಡೆಸಿದ ಅಭ್ಯರ್ಥಿ ಆಯ್ಕೆಯ ಉದಾಹರಣೆ ನೀಡಿದ್ದಾರೆ. ‌ಒಂದು ಕ್ಷೇತ್ರದಲ್ಲಿ ಹಲವು ಬಾರಿ ಗೆದ್ದವರಿಗೆ ಇದರಿಂದ ನಡುಕ ಶುರುವಾಗಿದೆ.

ವಂಶ ರಾಜಕಾರಣ:
ಎಲ್ಲದಕ್ಕಿಂತ ಮುಖ್ಯವಾಗಿ ವಂಶವಾಹಿನಿ ರಾಜಕಾರಣದ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಅಪ್ಪನಿಂದ ಮಗನಿಗೆ ಅಧಿಕಾರ ಹಸ್ತಾಂತರಿಸಿರುವ ಪ್ರಕ್ರಿಯೆಯನ್ನು ಅವರು ಬಲವಾಗಿ ವಿರೋಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಈ ವಿಚಾರ ಪ್ರಸ್ತಾಪಿಸಿರುವುದರಿಂದ ಸಂತೋಷ್ ಹೇಳಿಕೆಗೆ ಈಗ ಮಹತ್ವ ಲಭಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ನಾಯಕತ್ವ ಬದಲಾವಣೆ ಬಗ್ಗೆ ಸಂತೋಷ್ ಸೂಚ್ಯವಾಗಿ ಹೇಳಿರಬಹುದೇ ಎಂದು ಚರ್ಚೆಯಾಗುತ್ತಿದ್ದು, ಇನ್ನೆರಡು ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟತೆ ಸಿಗಲಿದೆ. 

click me!