ಅಸೆಂಬ್ಲಿ ಚುನಾವಣೆಯಲ್ಲಿ ಪುತ್ತೂರಲ್ಲಿ ಬಂಡಾಯ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು ವಿಚಾರ ಮತ್ತೆ ದೆಹಲಿ ತಲುಪಿದೆ. ಅರುಣ್ ಕುಮಾರ್ ಪುತ್ತಿಲ ಅವರನ್ನು ದೆಹಲಿಗೆ ಕರೆಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತುಕತೆ ನಡೆಸಿದ್ದಾರೆ.
ಮಂಗಳೂರು (ಜು.09): ಅಸೆಂಬ್ಲಿ ಚುನಾವಣೆಯಲ್ಲಿ ಪುತ್ತೂರಲ್ಲಿ ಬಂಡಾಯ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಅರುಣ್ ಕುಮಾರ್ ಪುತ್ತಿಲ ಬಿಕ್ಕಟ್ಟು ವಿಚಾರ ಮತ್ತೆ ದೆಹಲಿ ತಲುಪಿದೆ. ಅರುಣ್ ಕುಮಾರ್ ಪುತ್ತಿಲ ಅವರನ್ನು ದೆಹಲಿಗೆ ಕರೆಸಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪಕ್ಷ ಸಂಘಟನೆಯಲ್ಲಿ ಮಹತ್ವದ ಜವಾಬ್ದಾರಿ ನೀಡುವ ಬಗ್ಗೆ ಪ್ರಸ್ತಾಪಗೊಂಡಿದೆ ಎಂದು ಹೇಳಲಾಗಿದೆ.
ಪುತ್ತೂರಿನಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ಪುತ್ತಿಲ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಚುನಾವಣೆಗೂ ಮೊದಲೇ ಸಾಕಷ್ಟುಪ್ರಯತ್ನ ನಡೆಸಿತ್ತು. ಆದರೆ ಅದು ಫಲಕಾರಿಯಾಗದೆ ಪುತ್ತಿಲ ಅವರು ಬಂಡಾಯ ಪಕ್ಷೇತರನಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದರು. ನಂತರದ ಬೆಳವಣಿಗೆಯಲ್ಲಿ ಪುತ್ತಿಲ ಬಿಕ್ಕಟ್ಟು ಹಿರಿದಾಗುತ್ತಾ ಹೋಗಿದ್ದು, ಅದನ್ನು ಸರಿಪಡಿಸುವುದೇ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ತಲೆನೋವಾಗಿ ಕಾಡಿತ್ತು. ಈ ಮಧ್ಯೆ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿ ಬಳಗ ಪುತ್ತೂರಲ್ಲಿ ಮಾತ್ರವಲ್ಲ ದ.ಕ.ಜಿಲ್ಲೆಯ ಎಲ್ಲ ಅಸೆಂಬ್ಲಿ ಕ್ಷೇತ್ರಗಳಿಗೆ ‘ಪುತ್ತಿಲ ಪರಿವಾರ’ ಹೆಸರಿನಲ್ಲಿ ಸಂಘಟನೆಯನ್ನು ವಿಸ್ತರಿಸಲು ತೊಡಗಿತ್ತು.
ಪತ್ರಕರ್ತರಿಗೂ ‘ಆರೋಗ್ಯ ಭಾಗ್ಯ’ ನೀಡಲು ಸಿಎಂ ಜತೆ ಚರ್ಚೆ: ಸ್ಪೀಕರ್ ಯು.ಟಿ.ಖಾದರ್
ಇದರ ಗಂಭೀರತೆ ಮನಗಂಡ ಬಿಜೆಪಿ ವರಿಷ್ಠರು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೂಲಕ ಅರುಣ್ ಕುಮಾರ್ ಪುತ್ತಿಲ ಅವರ ಅಹವಾಲು ಆಲಿಸಿದ್ದರು. ಪುತ್ತೂರಿಗೆ ಭೇಟಿ ನೀಡಿದ್ದ ಯತ್ನಾಳ್ ಅವರು ಅರುಣ್ ಕುಮಾರ್ ಪುತ್ತಿಲ ಜತೆ ಮಾತುಕತೆ ನಡೆಸಿ ಶೀಘ್ರ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪ್ರಧಾನಿ ನರೇಂದ್ರ ಮೋದಿ ಆಪ್ತ ಬಳಗದಲ್ಲಿ ಗುರುತಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜತೆ ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದರು. ಅಲ್ಲಿ ಕೂಡ ಪುತ್ತಿಲ ಬಿಕ್ಕಟ್ಟು ಶಮನಗೊಳಿಸುವ ಭರವಸೆ ಸಿಕ್ಕಿತ್ತು.
ಸಂತೋಷ್ ಜತೆ ನಡೆದ ಮಾತುಕತೆ ಏನು?: 15 ದಿನಗಳ ಹಿಂದೆ ಅರುಣ್ ಕುಮಾರ್ ಪುತ್ತಿಲ ತನ್ನ ಬಳಗದ ಜತೆ ದೆಹಲಿಗೆ ತೆರಳಿ ಬಿ.ಎಸ್.ಸಂತೋಷ್ ಜತೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ವೇಳೆ ಪುತ್ತಿಲ ಬಿಕ್ಕಟ್ಟನ್ನು ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಪರಿಹರಿಸುವ ಬಗ್ಗೆ ಭರವಸೆ ನೀಡಲಾಗಿದೆ. ಇಲ್ಲದಿದ್ದರೆ ಮತ್ತೆ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜಿಲ್ಲೆಯಲ್ಲಿ ಎದುರಿಸುವುದು ಕಷ್ಟವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಲಾಗಿದೆ. ಬಿ.ಎಲ್.ಸಂತೋಷ್ ಜತೆಗಿನ ಮಾತುಕತೆಯಲ್ಲಿ ಮುಖ್ಯವಾಗಿ ಪಕ್ಷ ಸಂಘಟನೆಯ ಜಬಾವ್ದಾರಿ ನೀಡುವಂತೆ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ ಎಂದು ತಿಳಿಯಲಾಗಿದೆ. ಒಂದು ವೇಳೆ ಪಕ್ಷ ಸಂಘಟನೆ ಜವಾಬ್ದಾರಿ ನೀಡದಿದ್ದರೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವುದು ಇಲ್ಲವೇ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಬಗ್ಗೆ ಪುತ್ತಿಲ ಬೆಂಬಲಿಗರು ಸಂತೋಷ್ ಅವರಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ದ.ಕ.ಜಿಲ್ಲೆಯಲ್ಲಿ ಚುನಾವಣೆಗೆ ಮುನ್ನ ಹಾಗೂ ನಂತರ ಬಿಜೆಪಿ ಹಾಗೂ ಸಂಘಪರಿವಾರ ನಡೆದುಕೊಂಡ ರೀತಿ, ಅಹಿತಕರ ಬೆಳವಣಿಗೆಗಳ ಕುರಿತು ಅರುಣ್ ಕುಮಾರ್ ಪುತ್ತಿಲ ಬಳಗ ಬಿ.ಎಲ್.ಸಂತೋಷ್ ಅವರಲ್ಲಿ ವಿಸ್ತೃತ ಮಾತುಕತೆ ನಡೆಸಿದ್ದು, ಎಲ್ಲ ಅಹವಾಲುಗಳನ್ನು ಅವರು ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ರಾಜ್ಯಾಧ್ಯಕ್ಷರ ಬದಲಾವಣೆ ಬಳಿಕ ಪಕ್ಷದ ಎಲ್ಲ ಘಟಕಗಳ ಬದಲಾವಣೆ ವೇಳೆ ಅರುಣ್ ಕುಮಾರ್ ಪುತ್ತಿಲ ಅವರ ಬೇಡಿಕೆ ಈಡೇರಿಕೆ ಬಗ್ಗೆ ವರಿಷ್ಠರು ಗಮನ ಹರಿಸುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.
ಜಾಲತಾಣಗಳಲ್ಲಿ 3 ಲಕ್ಷಕ್ಕೂ ಮಿಕ್ಕಿದ ಪುತ್ತಿಲ ಬೆಂಬಲಿಗರು: ಅರುಣ್ ಕುಮಾರ್ ಪುತ್ತಿಲ ಅವರನ್ನು ಅಸೆಂಬ್ಲಿ ಚುನಾವಣೆಯಲ್ಲಿ ಬೆಂಬಲಿಗರು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ನೀಡಿದ್ದರು. ಅದುವೇ ಪುತ್ತಿಲರ ಪ್ರಬಲ ಸ್ಪರ್ಧೆಗೆ ಕಾರಣವಾಗಿತ್ತು. ಇದೀಗ ಪುತ್ತಿಲ ಪರಿವಾರದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಬೆಂಬಲಿಗರು ಇದ್ದಾರಂತೆ. ಅಲ್ಲದೆ ಬಹುತೇಕ ಬೆಂಬಲಿಗರಿಗೆ ಗುರುತಿನ ಪತ್ರ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಪುತ್ತಿಲ ಪರಿವಾರದವರೇ ಹೇಳುವ ಪ್ರಕಾರ ಈಗಾಗಲೇ ಜಿಲ್ಲಾದ್ಯಂತ ಸುಮಾರು 780ರಷ್ಟುವಾಟ್‌್ಯಆ್ಯಪ್ ಗುಂಪುಗಳನ್ನು ರಚಿಸಿದ್ದು, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವೀಟರ್‌ಗಳಲ್ಲೂ ಪುತ್ತಿಲ ಪರಿವಾರದ ಬೆಂಬಲಿಗರು ಇದ್ದಾರೆ. ಈ ಮೂಲಕ ಪುತ್ತಿಲ ಬಿಕ್ಕಟ್ಟು ಶಮನವಾಗದಿದ್ದರೆ, ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗೂ ಬಿಜೆಪಿಗೆ ಸೆಡ್ಡು ಹೊಡೆಯಲು ಈ ಬೆಂಬಲಿಗರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಯ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ನಿಜ. ಮಾತುಕತೆ ವೇಳೆ ಪಕ್ಷ ಸಂಘಟನೆಯ ಹೊಣೆ ನೀಡುವಂತೆ ಕೋರಿದ್ದೇನೆ. ಅಲ್ಲದೆ ಈ ಹಿಂದೆ ನಡೆದ ವಿದ್ಯಮಾನಗಳನ್ನು ಅವರ ಗಮನಕ್ಕೆ ತರಲಾಗಿದ್ದು, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುವ ಬಗ್ಗೆ ಭರವಸೆ ನೀಡಿದ್ದಾರೆ.
-ಅರುಣ್ ಕುಮಾರ್ ಪುತ್ತಿಲ, ಹಿಂದೂ ಸಂಘಟಕ, ಪುತ್ತೂರು