ಕಾರ್ಯಕರ್ತರು ಕಣ್ಣೀರು ಹಾಕ್ತಿದ್ದಾರೆ; ಚಿಂತನ ಮಂಥನ ಸಭೆಯಲ್ಲಿ BL Santhosh ಆಕ್ರೋಶ

By Gowthami KFirst Published Jul 16, 2022, 1:15 PM IST
Highlights

ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಚಿಂತನ ಮಂಥನ ಸಭೆ ನಡೆಸಿತು.  ಈ ಸಭೆಯಲ್ಲಿ ಬಿಎಲ್ ಸಂತೋಷ್ ಅನೇಕ ವಿಚಾರಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.‌ ಸಭೆಯಲ್ಲಿ ಏನು ಹೇಳಿದ್ರು ಎಂಬ ವಿವರ ಇಲ್ಲಿದೆ.

ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು.16): ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿಯನ್ನು ಬಲಗೊಳಿಸುವ ಕಾರ್ಯಕ್ಕೆ ಕೈ ಹಾಕಿರುವ ಹೈಕಮಾಂಡ್ ನೆನ್ನೆ ನಗರದ ಹೊರವಲಯದಲ್ಲಿ ಇರುವ ಖಾಸಗಿ ರೆಸಾರ್ಟ್ ನಲ್ಲಿ ಚಿಂತನ ಮಂಥನ ಸಭೆ ನಡೆಸಿತು.‌ ಸಭೆಯಲ್ಲಿ ಸಚಿವರು, ಪ್ರಮುಖ ಶಾಸಕರು, ಪದಾಧಿಕಾರಿಗಳು ಸೇರಿ ಒಟ್ಟು 50 ಜನ ಭಾಗಿ ಆಗಿದ್ರು. ಸಭೆಯ ನೇತೃತ್ವ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಿತು. ಜೊತೆಗೆ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಉಸ್ತುವಾರಿ ಅರುಣ್ ಸಿಂಗ್ ಇದ್ದರು. ಇನ್ನುಳಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ , ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸೇರಿ ಕೋರ್ ಕಮಿಟಿ ಸದಸ್ಯರು ಭಾಗಿ ಆಗಿದ್ರು.‌ ಈ ಸಭೆಯಲ್ಲಿ ಬಿಎಲ್ ಸಂತೋಷ್ ಅನೇಕ ವಿಚಾರಗಳ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.‌

ಬೆಂಗಳೂರು ಕಾರ್ಯಕರ್ತರು ಕಣ್ಣೀರು ಹಾಕ್ತಾ ಇದ್ದಾರೆ
ಬೆಂಗಳೂರು ಭಾಗದ ಶಾಸಕರು ಸಚಿವರ ಮೇಲೆ ಗರಂ ಆದ ಸಂತೋಷ್, ನಿಮ್ಮಕಾರ್ಯ ವೈಖರಿಗೆ ಬೆಂಗಳೂರಿನ ಕಾರ್ಯಕರ್ತರು ಅಕ್ಷರಶಃ ಕಣ್ಣೀರು ಹಾಕ್ತಿದ್ದಾರೆ. ಅವರಿಗೆ ನೀವು ಸಮಯ ನೀಡಲ್ಲ. ಅವರ ಕಷ್ಟ ಸುಖ ವಿಚಾರಿಸಲ್ಲ ಎನ್ನುವ ಮೂಲಕ ಬೆಂಗಳೂರಿನ ಹಿರಿಯ ಸಚಿವರನ್ನು ಪರೋಕ್ಷವಾಗಿ ಗುರಿಯಾಗಿಸಿ ಈ ಮಾತು ಹೇಳಿದ್ದಾರೆ ಎಂದು ಚರ್ಚೆ ಆಗುತ್ತಿದೆ..

ಹೊಂದಾಣಿಕೆ ರಾಜಕೀಯ ಬಿಡಿ
ಮುಂದುವರಿದು ಮಾತನಾಡಿದ ಬಿಎಲ್ ಸಂತೋಷ್, ಹೊಂದಾಣಿಕೆ ರಾಜಕೀಯ ಬಿಡಬೇಕು. ಪಕ್ಷಕ್ಕೆ ನಿಷ್ಠೆ ತೋರಿಸಿ ಎಂದು ಖಡಕ್ ಆಗಿ ಸೂಚಿಸಿದ್ದಾರೆ. ಪಕ್ಷ ನಿಮ್ಮನ್ನು ಶಾಸಕರಾಗಿ ಮಾಡಿ ಸಚಿವ ಸ್ಥಾನ ಕೂಡ ನೀಡಿದೆ. ಆದ್ರೆ ನೀವಿಲ್ಲಿ ಹೊಂದಾಣಿಕೆ ಮಾಡಿಕೊಂಡು ರಾಜಕೀಯ ಮಾಡ್ತಾ ಇದ್ದೀರಿ ಎಂದು ಯಾರ ಹೆಸರನ್ನು ನೇರವಾಗಿ ಹೇಳದೆ ಪರೋಕ್ಷವಾಗಿ ಯಾರಿಗೆ ವಿಷಯ ತಲುಪಿಸಬೇಕೊ ಅವರಿಗೆ ವಿಷಯವನ್ನು ಖಾರವಾಗಿ ಮುಟ್ಟಿಸಿದ್ದಾರೆಂದು ತಿಳಿದು ಬಂದಿದೆ..

ಸಚಿವರು ತಮ್ಮ ಇಲಾಖೆಗೆ ಮಾತ್ರ ಸೀಮಿತವಾಗಿ ಇರಬೇಡಿ
ಸಚಿವರ ಕಾರ್ಯವೈಖರಿ ಬಗ್ಗೆಯೂ ಪ್ರಸ್ತಾಪ ಮಾಡಿದ ಬಿಎಲ್ ಸಂತೋಷ್, ಸಭೆಯಲ್ಲಿ ಸಚಿವರಿಗೆ ಅನೇಕ ಸೂಚನೆ ನೀಡಿದ್ದಾರೆ. ನೀವು ನಿಮ್ಮ ಇಲಾಖೆಗೆ ಮಾತ್ರ ಸ್ಟಿಕ್ ಆನ್ ಆಗಿದ್ದೀರಿ. ಒಂದು ಸರ್ಕಾರವಾಗಿ ಕೆಲಸ ಮಾಡಿ. ಸರ್ಕಾರದ ಸಮರ್ಥನೆಯನ್ನು ಪ್ರತಿ ಸಚಿವನು ಮಾಡಬೇಕು. ಕೇವಲ ಮುಖ್ಯಮಂತ್ರಿ, ಸಿಟಿ ರವಿ ಮಾತ್ರ ಸಮರ್ಥನೆ ಮಾಡಿಕೊಳ್ಳಬೇಕಾ ಎಂದು ಸಚಿವರಿಗೆ ಸಭೆಯಲ್ಲಿ ಪ್ರಶ್ನೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

19 ಶಾಸಕರಿಗೆ 19 ಕ್ಷೇತ್ರದ ಗುರಿ
ಇನ್ನು ಸಭೆಯಲ್ಲಿ ಕೆಲ ಪ್ರಮುಖ ಶಾಸಕರಿಗೆ ತಮ್ಮ ಕ್ಷೇತ್ರ ಹೊರತು ಪಡಿಸಿ ಬೇರೊಂದು ಕ್ಷೇತ್ರ ಗೆಲ್ಲಿಸುವ ಜವಬ್ದಾರಿ ನೀಡಲಾಗಿದೆ. 
ಸಿಟಿ ರವಿ - ಬೇಲೂರು
ರಾಜುಗೌಡ - ಅಫ್ಜಲ್ ಪುರ
ಗೋಪಾಲಯ್ಯ - ಸಕಲೇಶಪುರ
ಮುನಿರತ್ನ - ಗಾಂಧಿನಗರ
ಡಾ.ಅಶ್ವಥ್ ನಾರಾಯಣ್- ಮಾಗಡಿ. ಹೀಗೆ ಇನ್ನು ಅನೇಕ ಶಾಸಕರಿಗೆ ಜವಬ್ದಾರಿ ನೀಡಿದ್ದು , ತಮಗೆ ನೀಡಿರುವ ಕ್ಷೇತ್ರವನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿಯನ್ನು ಆಯಾ ಶಾಸಕರಾಗಿ ನೀಡಲಾಗಿದೆ. 

50 ಕ್ಷೇತ್ರ 50 ದಿನ ಸಿಎಂ ರೌಂಡ್ಸ್
ಸರ್ಕಾರದ ಸಾಧನೆ, ಚುನಾವಣೆ ತಯಾರಿ, ಜನರಿಗೆ ಸರ್ಕಾರದ ಯೋಜನೆ ತಲುಪಿದೆಯಾ ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು, _ಮುಂದಿನ 50 ದಿನ 50 ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಪ್ರವಾಸ ಮಾಡಲು ಪಕ್ಷ ನಿರ್ಧರಿಸಿದೆ. 

ಸಚಿವ ರಾಮಲುಗೆ ಯಡಿಯೂರಪ್ಪ ಕ್ಲಾಸ್
ನೆನ್ನೆ ಸಭೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರದ ಸಾಧನೆ ಸಮಾವೇಶ ಮಾಡುವ ಬಗ್ಗೆ ಸೂಚನೆ ನೀಡಿದ್ದಾರೆ. ಹತ್ತಾರು ಸಭೆ ಸಮಾರಂಭ ಮಾಡುವ ಮೂಲಕ ಜನರ ಬಳಿ ಹೋಗಲು ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಇದೇ ವೇಳೆ ಸಚಿವ ಶ್ರೀರಾಮಲುಗೆ ಬಿಎಸ್ ಯಡಿಯೂರಪ್ಪ ಕ್ಲಾಸ್ ತಗೆದುಕೊಂಡಿರುವ ಮಾಹಿತಿ ಲಭಿಸಿದೆ. ವಾಲ್ಮಿಕಿ ಮೀಸಲಾತಿ ಹೋರಾಟದಲ್ಲಿ ಮಾತೆತ್ತಿದ್ರೆ ರಾಜೀನಾಮೆ ಕೊಡೊದಾಗಿ ಹೇಳ್ತಿಯಲ್ಲ. ಅದ್ರಿಂದ ಪಕ್ಷಕ್ಕೆ ಎಷ್ಟು ಡ್ಯಾಮೆಜ್ ಆಗತ್ತೆ ಗೊತ್ತಾ ನಿನಗೆ. ಹುಚ್ಚು ಹುಚ್ಚು ಮಾತಾಡೋದು ಮೊದಲು ಬಿಡು ಎಂದು ಯಡಿಯೂರಪ್ಪ ರಾಮಲುಗೆ ಗದರಿದ್ದಾರೆ ಎಂದು ತಿಳಿದು ಬಂದಿದೆ. 

ಆರ್ ಅಶೋಕ್'ಗೆ ಮಂಡ್ಯದಲ್ಲಿ ನಿಲ್ಲಿಸಿ!
ಇನ್ನು ಹಿರಿಯ ಸಚಿವರ ಕಾರ್ಯವೈಖರಿ, ಪಕ್ಷದಲ್ಲಿ ಅಧಿಕಾರ ಅನುಭವಿಸಿದವರ ಮೂಲಕ ಪಕ್ಷ ಸಂಘಟನೆ ಮಾಡಿಸಿ ಎಂದು ಶಾಸಕ ರಾಜುಗೌಡ ನಾಯಕ್ ಸಭೆಯಲ್ಲಿ ಪ್ರಸ್ತಾಪ ಮಾಡಿದ್ರಂತೆ. ಈ ವೇಳೆ ಆರ್ ಅಶೋಕ್ ಗೆ ಮಂಡ್ಯದಲ್ಲಿ ಟಿಕೆಟ್ ನೀಡಿ, ಸೋಮಣ್ಣರಿಗೆ ಚಾಮರಾಜನಗರ ಕಡೆ ಟಿಕೆಟ್ ಕೊಡಿ, ಒಂದೇ ಕಡೆ ಹಿರಿಯ ಸಚಿವರು ಇದ್ದರೆ ಪಕ್ಷ ಬೆಳೆಯತ್ತಾ ಎಂದು ಪ್ರಶ್ನೆ ಮಾಡಿದ್ರಂತೆ ರಾಜುಗೌಡ.
ಕೇವಲ ಬೆಂಗಳೂರು ಭಾಗದಲ್ಲಿನ ಶಾಸಕರಿಗೆ ಸಚಿವ ಸ್ಥಾನ ನೀಡ್ತಿರಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾವೇನು ಮಾಡಿದ್ದೇವೆ. 40 ಕ್ಷೇತ್ರದಲ್ಲಿ 19 ಕ್ಷೇತ್ರ ಗೆದ್ದಿದ್ದೇವೆ. ಅದೇನು ಕಡಿಮೆಯೆ? ಎಲ್ಲಾ ಬೆಂಗಳೂರಿಗೆ ‌ನೀಡಿದ್ರು, ಇಲ್ಲಿ ಎಷ್ಟು ಸೀಟ್ ಗೆದ್ದಿದ್ರಿ ಎಂದು ಓಪನ್ ಆಗಿ ರಾಜುಗೌಡ ತಮ್ಮ ಮಾತುಗಳನ್ನು ಹೇಳಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ. 

ಲಿಂಗಾಯತ ಒಕ್ಕಲಿಗರಿಗೆ ಸಿಎಂ ಪಟ್ಟ. ಬೇರೆ ವರ್ಗಕ್ಕೆ ಟಿಕೆಟ್ ನೀಡಿ
ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ ರಾಜುಗೌಡ, ಹೇಗಿದ್ದರೂ ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಕ್ಕೆ ಸಿಎಂ ಪೋಸ್ಟ್ ನೀಡ್ತಿರಿ. ಆದ್ರೆ ಚುನಾವಣೆಯಲ್ಲಿ ಬೇರೆ ವರ್ಗಕ್ಕೆ ಎಂ ಎಲ್ ಎ ಟಿಕೆಟ್ ನೀಡಿ ಎಂದು ಸಲಹೆ ನೀಡಿದ್ರಂತೆ ರಾಜುಗೌಡ ನಾಯಕ್.

ಜಾರಕಿಹೊಳಿ - ಸವದಿ- ಕತ್ತಿ ಜಟಾಪಟಿ
ಬೆಳಗಾವಿ ರಾಜಕೀಯಕ್ಕೆ ಸಂಬಂಧಪಟ್ಟಂತೆ ಪರೋಕ್ಷವಾಗಿ ರಮೇಶ್ ಜಾರಕಿಹೊಳಿಯನ್ನು ಟಾರ್ಗೆಟ್ ಮಾಡಿದ ಸಚಿವ ಉಮೇಶ್ ಕತ್ತಿ ಮತ್ತು ಲಕ್ಷ್ಮಣ ಸವದಿ ಪಕ್ಷದ್ರೋಹ ಮಾಡೋರ ಮೇಲೆ ಕ್ರಮಕ್ಕೆ ಕತ್ತಿ ಆಗ್ರಹಿಸಿದ್ರಂತೆ. ಮತ್ತೊಂದು ಕಡೆ ಪಕ್ಷದ್ರೋಹ ತಾಯಿ ದ್ರೋಹ ಎಂದ ಸವದಿ ಮಾತಿಗೆ ರಮೇಶ್ ಜಾರಕಿಹೊಳಿ ಗರಂ ಆದ್ರು ಎಂದು ತಿಳಿದು ಬಂದಿದೆ. ನಾನು ನನ್ನ ತಮ್ಮನ ವಿರುದ್ಧ ಕೆಲಸ ಮಾಡಿದ್ದೇನೆ. ಪಕ್ಷ ವಿರೋಧ ಮಾಡೋರ ಮೇಲೆ ಕ್ರಮ ಕೈಗೊಳ್ಳಿ ಎಂದು ರಮೇಶ್ ಜಾರಕಿಹೊಳಿ ಸಭೆಯಲ್ಲಿ ಹೇಳಿದ್ರು ಎಂದು ಗೊತ್ತಾಗಿದೆ.

ಒಟ್ಟಾರೆ ನೆನ್ನೆ ಚಿಂತನ ಸಭೆಯಲ್ಲಿ ಅನೇಕ ವಿಚಾರಗಳು ಪ್ರಸ್ತಾಪ ಆಗಿದ್ದು ಬೆಳಗ್ಗೆ ಇಂದ ರಾತ್ರಿ ತನಕ ಸಭೆ ಆಗಿದೆ. ಜೆಡಿಎಸ್ ಜೊತೆ ಪಕ್ಷದ ಸಂಬಂಧ ಹೇಗಿರಬೇಕು ಎನ್ನುವ ಕುರಿತಂತೆ, ಬಿಜೆಪಿ ಕೆಜೆಪಿ ಡಿವೈಡ್ ಆದ ಪರಿಣಾಮ ಏನಾಯ್ತು ಎನ್ನುವ ತನಕ ಹೀಗೆ ಹತ್ತು ಹಲವು ವಿಷಯಗಳು ಸಭೆಯಲ್ಲಿ ಹಾದುಹೋಗಿವೆ ಎಂದು ಮೂಲಗಳು ಖಚಿತ ಪಡಿಸಿದರು.

click me!