ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಯಾಗಿದ್ದಾರೆ. ಮುಂದಿನ ಅವಧಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ಭದ್ರಾವತಿ (ಜೂ.05): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಯಾಗಿದ್ದಾರೆ. ಮುಂದಿನ ಅವಧಿಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು. ಶಾಸಕ ಬಿ.ಕೆ. ಸಂಗಮೇಶ್ವರ್ ಕುಟುಂಬ ಸಂಬಂಧಿಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಸಹೋದರ ಬಿ.ಕೆ. ಶಿವಕುಮಾರ್ ಅವರ ಗಾಂಧಿನಗರದ ನಿವಾಸದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ಒಂದು ಬಾರಿ ಶಾಸಕರಾಗುವುದೇ ಹೆಚ್ಚು. ಇಲ್ಲಿನ ಕ್ಷೇತ್ರದ ಜನರು ಸಂಗಮೇಶ್ವರ್ ಅವರನ್ನು 4 ಬಾರಿ ಆಯ್ಕೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಬಾರಿ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ 135 ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುವ ಮೂಲಕ ಅಭೂತಪೂರ್ವ ಇತಿಹಾಸ ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ಆದರ್ಶ ವ್ಯಕ್ತಿಯಾಗಿದ್ದಾರೆ. ಸಂಗಮೇಶ್ವರ್ ಅವರಿಗೂ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ.
ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್.ಡಿ.ಕುಮಾರಸ್ವಾಮಿ
ಸಂಗಮೇಶ್ವರ್ ಅವರಿಗೂ ಸಚಿವರಾಗುವ ಯೋಗವಿದ್ದು, ಸ್ವಲ್ಪ ವಿಳಂಬವಾಗಬಹುದು. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ 75 ವರ್ಷಗಳ ಕನಸು ನನಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದ ಮತದಾರರು ಚಿಂತೆ ಮಾಡುವ ಅಗತ್ಯವಿಲ್ಲ. ಈ ಕ್ಷೇತ್ರದ ಶಾಸಕರ ಕುಟುಂಬ ಸಂಬಂಧಿ ಆಗಿರುವ ನಾನು ನಿಮ್ಮ ಪರವಾಗಿದ್ದೇನೆ. ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ನಾನು ಸಹ ಕೈ ಜೋಡಿಸುತ್ತೇನೆ. ನೀವು ನಮ್ಮ ಮೇಲೆ ಹೊಂದಿರುವ ಅಭಿಮಾನ, ವಿಶ್ವಾಸಕ್ಕೆ ಚಿರಋುಣಿ ಆಗಿರುತ್ತೇನೆ ಎಂದರು.
ಇಲಾಖೆ ಬಗ್ಗೆ ಅಭಿಮಾನ: ನನಗೆ ನೀಡಿರುವ ಇಲಾಖೆ ಬಗ್ಗೆ ಅಭಿಮಾನವಿದೆ. ಹುಟ್ಟು ಮಕ್ಕಳಿಂದ ಹಿಡಿದು ಗರ್ಭಿಣಿ ಮಹಿಳೆ, ಅಂಗವಿಕಲರ ಹಾಗೂ ಸಾಯುವವರೆಗಿನ ವಯೋವೃದ್ಧರ ಸೇವೆ ಸಲ್ಲಿಸುವ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ. ಭದ್ರಾವತಿ ಕ್ಷೇತ್ರ ಸೇರಿದಂತೆ ನಾಡಿನಾದ್ಯಂತ ಇಲಾಖೆ ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಅಲ್ಪಸಂಖ್ಯಾತ ಸಮುದಾಯದ ಫೀರ್ ಷರೀಫ್, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ.ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ ಇನ್ನಿತರರು ಅಭಿನಂದನಾ ನುಡಿಗಳನ್ನಾಡಿದರು.
ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಶಾಸಕ ಬಿ.ಕೆ. ಸಂಗಮೇಶ್ವರ್ ಸಹೋದರರಾದ ಬಿ.ಕೆ. ಜಗನ್ನಾಥ್, ಬಿ.ಕೆ. ಮೋಹನ್, ಬಿ.ಕೆ. ಶಿವಕುಮಾರ್ ಹಾಗೂ ಮಕ್ಕಳು, ಕುಟುಂಬ ವರ್ಗದವರು, ಕಾಂಗ್ರೆಸ್ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ನಗರಸಭೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಗುಂಡ್ಲುಪೇಟೆಯನ್ನು ಮಾದರಿ ಕ್ಷೇತ್ರ ಮಾಡುವುದೇ ಗುರಿ: ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್
ಅದೃಷ್ಟ ತಂದ ಸೊಸೆ, ಮೊಮ್ಮಗಳು: ದೂರದ ಬೆಳಗಾವಿಗೂ ಭದ್ರಾವತಿಗೂ ನಂಟು ಬೆಳೆಯುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ನನ್ನ ಬಳಿ ಬಂದು ನಿಮ್ಮ ಮಗನಿಗೆ ಹೆಣ್ಣು ಹುಡುಕುತ್ತಿದ್ದೀರಾ ಎಂಬ ಮಾಹಿತಿ ಕೇಳಿಬಂತು. ನನ್ನ ಸಹೋದರನ ಮಗಳು ವೈದ್ಯೆಯಾಗಿದ್ದು, ಒಂದು ಸಲ ಬಂದು ನೋಡಿ ಎಂದು ಹೇಳಿದರು. ನಾನು ವೈದ್ಯೆಯಾಗಬೇಕು ಎಂಬ ಆಸೆ ಹೊಂದಿದ್ದೆ. ಆದರೆ ವೈದ್ಯೆಯಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಇಲ್ಲಿಗೆ ಬರಲು ತೀರ್ಮಾನಿಸಿದೆ. ಮೊದಲ ಸಲವೇ ಸಂಬಂಧ ಕೂಡಿ ಬಂತು. ಸೊಸೆ ಬಂದ ನಂತರ ನನ್ನ ತಮ್ಮ ವಿಧಾನ ಪರಿಷತ್ತು ಸದಸ್ಯನಾಗಿ ಆಯ್ಕೆಯಾಗಿದ್ದು, ನಾನು 2ನೇ ಬಾರಿಗೆ ಶಾಸಕಿಯಾಗಿದ್ದೇನೆ. ಇದೀಗ ನನ್ನ ಮೊಮ್ಮಗಳು ಜನಿಸಿದ ಮರುದಿನ ಸಚಿವೆ ಆಗಿದ್ದೇನೆ. ಸೊಸೆ ಮತ್ತು ಮೊಮ್ಮಗಳು ಇಬ್ಬರು ನಮ್ಮ ಕುಟುಂಬಕ್ಕೆ ಅದೃಷ್ಟ ತಂದಿದ್ದಾರೆ ಎಂದರು.