
ಮಂಗಳೂರು (ನ.23): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಲು ನಾನು ಯಾವುದೇ ಅಧಿಕಾರ ಹೊಂದಿಲ್ಲ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೇಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ನಗರದ ಸರ್ಕೀಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚಣೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಿ.3ರಂದು ಬ್ರಹ್ಮಶ್ರೀ ನಾರಾಯಣಗುರು ಮತ್ತು ಮಹಾತ್ಮಾ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ.
ಅಂದರೆ ಸಿದ್ದರಾಮಯ್ಯ ಅವರೇ ಡಿಸೆಂಬರ್‌ನಲ್ಲೂ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದರು. ಮತಗಳ್ಳತನ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಐದು ಕೋಟಿ ಸಹಿ ಸಂಗ್ರಹ ನಡೆಸುತ್ತಿದ್ದು, ರಾಜ್ಯದಲ್ಲಿ 1.24 ಕೋಟಿ ಸಹಿ ಸಂಗ್ರಹಿಸಿ ರವಾನಿಸಲಾಗಿದೆ. ಐದು ಕೋಟಿ ಸಹಿಯನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು. ಡಿ. 14ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಮತಗಳ್ಳತನ ವಿರುದ್ಧ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಮತಗಳ್ಳತನ ವಿಚಾರದಲ್ಲಿ ಚುನಾವಣಾ ಆಯೋಗ ತಪ್ಪು ಮಾಡಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬದಲಾವಣೆಯಂತಹದ್ದೇನೂ ಇಲ್ಲ. ನಮ್ಮ ಹೈಕಮಾಂಡ್ ಯಾರಿಗೆ ಮುಖ್ಯಮಂತ್ರಿ ಅಂದಿದೆಯೋ ಅವರನ್ನು ಒಪ್ಪಿದ್ದೇವೆ. ನಾಳೆ ನಿಮ್ಮನ್ನೇ (ಮಾಧ್ಯಮ) ಮುಖ್ಯಮಂತ್ರಿಯೆಂದರೂ ನಮ್ಮ ಸಿಎಲ್‌ಪಿ ನಾಯಕರೆಂದು ಒಪ್ಪುತ್ತೇವೆ ಎಂದು ಜಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪ್ರತಿಯೊಬ್ಬರಿಗೂ ವೈಯಕ್ತಿಕ ಅಭಿಪ್ರಾಯ ಎಂಬುದಿರುತ್ತದೆ. ಆದರೆ, ನಮ್ಮ ವರಿಷ್ಠರ ತೀರ್ಮಾನವೇ ನಮಗೆ ಅಂತಿಮ. ಯಾರದ್ದಾದರೂ ಹೆಸರು ಸೂಚಿಸುವಂತೆ ಹೈಕಮಾಂಡ್ ಕೇಳಿದರೆ ಖಂಡಿತಾ ನಾನು ಹೆಸರು ಹೇಳುತ್ತೇನೆ. ನಾಳೆ ಬೆಂಗಳೂರಿನಲ್ಲಿ ಸಂಪುಟ ಸಭೆ ಇದೆ. ನಾನಿರುವ ಸಮಿತಿ ಸಭೆಯೂ ಇದೆ. ಸಿಎಂ ಬದಲಾವಣೆ ವಿಚಾರ ಸೇರಿದಂತೆ ಮಾಧ್ಯಮಗಳ ಮುಂದೆ ಮಾತನಾಡುವಂತಹ ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ದೇವೇಂದ್ರಪ್ಪ ಹೇಳಿದರು.
ಸಂಪುಟ ಪುನಾರಚನೆಯಲ್ಲಿ 15 ಜನ ಹೊಸಬರಿಗೆ ಅವಕಾಶ ನೀಡಬೇಕೆಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಹಿಂದೆ ಪರಿಶಿಷ್ಟ ಪಂಗಡದ ಮೂವರು ಸಚಿವರಿದ್ದರು. ಈ ಪೈಕಿ ಇಬ್ಬರು ಕಾರಣಾಂತರದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾಗಿ, ಅವೆರಡೂ ಸ್ಥಾನಗಳನ್ನು ತುಂಬಿಕೊಳ್ಳುವ ಸಾಧ್ಯತೆ, ಅವಕಾಶಗಳೂ ಹೆಚ್ಚಾಗಿವೆ. ಅದನ್ನು ಸರ್ಕಾರ ಮಾಡಬಹುದೆಂಬ ವಿಚಾರ ಮಾಧ್ಯಮಗಳಿಂದಲೇ ನಾನು ಗಮನಿಸಿದ್ದೇನಷ್ಟೇ. ಅದನ್ನು ಹೊರತುಪಡಿಸಿದರೆ ಸಂಪುಟ ಪುನಾರಚನೆ, ಸಿಎಂ ಬದಲಾವಣೆ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ನನ್ನಲ್ಲಿ ಇಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.