ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧ: ಸಿಎಂ ಸಿದ್ದರಾಮಯ್ಯ

Published : Nov 23, 2025, 09:29 PM IST
Siddaramaiah

ಸಾರಾಂಶ

ಮೀನುಗಾರರ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು ಮತ್ಸ್ಯ ಮೇಳ’ ಉದ್ಘಾಟಿಸಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ನ.23): ಮೀನುಗಾರರ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು. ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೀನುಗಾರಿಕೆ ಇಲಾಖೆ ಹೆಬ್ಬಾಳದ ಪಶು ವೈದ್ಯಕೀಯ ಮಹಾ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ‘ವಿಶ್ವ ಮೀನುಗಾರಿಕಾ ದಿನಾಚರಣೆ ಮತ್ತು ಮತ್ಸ್ಯ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ 320 ಕಿ.ಮೀ. ಕರಾವಳಿ ಪ್ರದೇಶವಿದ್ದು, 5.5 ಲಕ್ಷ ಹೆಕ್ಟೇರ್ ಒಳನಾಡು ಜಲಪ್ರದೇಶವಿದೆ. ಮೀನು ರಫ್ತಿನಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ದೇಶದ ಮೀನು ಉತ್ಪಾದನೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. 10 ಲಕ್ಷ ಜನರು ಮೀನುಗಾರಿಕೆಯನ್ನು ಅವಲಂಬಿಸಿದ್ದು ಸರ್ಕಾರ ಮೀನುಗಾರರ ಅಭಿವೃದ್ಧಿಗೆ ಸಹಕಾರ ನೀಡಲಿದೆ ಎಂದರು.

₹3 ಸಾವಿರ ಕೋಟಿ ಮೀಸಲು: ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾಂತ್ರೀಕೃತ ದೋಣಿಗಳ ಡೀಸೆಲ್ ವಾರ್ಷಿಕ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಲೀಟರ್‌ಗೆ ಹೆಚ್ಚಿಸಲಾಗಿದೆ. ನಾಡದೋಣಿಗಳಿಗೆ ಕೈಗಾರಿಕಾ ಸೀಮೆ ಎಣ್ಣೆಯನ್ನು ಪ್ರತಿ ಲೀಟರ್‌ಗೆ ₹35 ರಂತೆ ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದೇವೆ. ಮೀನುಗಾರಿಕಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರ ಮೂರು ಸಾವಿರ ಕೋಟಿ ರು. ಮೀಸಲಿಟ್ಟಿದೆ ಎಂದು ವಿವರಿಸಿದರು.

ಪರಿಶಿಷ್ಟ ಜಾತಿ, ಪಂಗಡದ ಮಾರಾಟಗಾರರಿಗೆ ಮಾರುಕಟ್ಟೆಗೆ ಅನುಕೂಲವಾಗಲು ನಾಲ್ಕು ಚಕ್ರದ ವಾಹನ ಖರೀದಿಗೆ ಮೂರು ಲಕ್ಷ ರುಪಾಯಿವರೆಗೂ ವಿಶೇಷ ಸಹಾಯಧನ ನೀಡುತ್ತಿದ್ದೇವೆ. ಮಹಿಳಾ ಸಬಲೀಕರಣಕ್ಕಾಗಿ ‘ಮತ್ಸ್ಯ ಸಂಜೀವಿನಿ’ ಯೋಜನೆ ಪ್ರಾರಂಭಿಸಿದ್ದು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ತರಬೇತಿ ನೀಡಿ ಮೀನು ಮರಿಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮೃತ ಮೀನುಗಾರರ ಕುಟುಂಬಗಳಿಗೆ ₹10 ಲಕ್ಷ ಪರಿಹಾರದ ಚೆಕ್‌ ವಿತರಿಸಲಾಯಿತು. ಇಲಾಖೆಯ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಸೇರಿದಂತೆ ಬೈರತಿ ಸುರೇಶ್‌, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್‌, ನಿರ್ದೇಶಕ ದಿನೇಶ್ ಕುಮಾರ್ ಮತ್ತಿತರರು ಹಾಜರಿದ್ದರು.

ನನಗೆ ಗಾಳ ಹಾಕಿ ಮೀನು ಹಿಡಿಯುವ ಕಲೆ ಗೊತ್ತು

‘ಚಿಕ್ಕ ವಯಸ್ಸಿನಲ್ಲೇ ನನಗೆ ಮೀನು ಹಿಡಿಯುವ ಕಲೆಗಾರಿಕೆ ಇತ್ತು. ನನಗೆ ಗಾಳ ಹಾಕಿ ಮೀನು ಹಿಡಿಯುವುದೂ ಗೊತ್ತು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ‘ಮೀನು ಎಂದರೆ ಲಕ್ಷ್ಮಿ. ನಾನು ಮುಖ್ಯಮಂತ್ರಿಗಳಿಗೆ ಮಷೀರ್‌ ಮೀನು ತೋರಿಸಿದೆ. ನಾನು ಚಿಕ್ಕವನಾಗಿದ್ದಾಗ ಸಂಗಮದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಗಾಳ ಹಾಕಿಕೊಂಡು ಕೂರುತ್ತಿದ್ದೆ. ಇದಕ್ಕೆ ತಾಳ್ಮೆ ಇರಬೇಕು’ ಎಂದು ಮಾರ್ಮಿಕವಾಗಿ ಹೇಳಿದರು.

‘ನಾವು ರೈತರು ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತಾರೆ. ನೀವೆಲ್ಲಾ ಗಂಗೆಯ ಪುತ್ರರು. ಈ ಮೀನಿನ ವ್ಯವಹಾರ ಜಾತಿಯ ಮೇಲಿಲ್ಲ. ನೀತಿ, ಛಲ, ಆಸಕ್ತಿಯ ಮೇಲಿದೆ. ಮೀನು ಹಿಡಿಯುವುದು ಬೇರೆ, ಮಾರಾಟ ಮಾಡುವುದು ಬೇರೆ. ನಿಮಗೆ ಕೆಲವೊಮ್ಮೆ ನಿತ್ಯ ಮೀನು ಸಿಗುವುದಿಲ್ಲ. ಕೆಲವೊಮ್ಮೆ ವಾರವಾದರೂ ಮೀನು ಸಿಗುವುದಿಲ್ಲ. ತಾಳ್ಮೆಯಿಂದ ವೃತ್ತಿ ಕೈಗೊಳ್ಳುತ್ತಿದ್ದೀರಿ. ಬಯಲುಸೀಮೆ, ಕರಾವಳಿ ಒಳಗೊಂಡಂತೆ ನೂತನ ಮೀನುಗಾರಿಕಾ ನೀತಿ ರೂಪಿಸಲು ಸರ್ಕಾರ ಚಿಂತಿಸುತ್ತಿದೆ’ ಎಂದು ತಿಳಿಸಿದರು.

ರಾಜ್ಯ ಸರ್ಕಾರ 10 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದು, ಈ ಕೆರೆಗಳ ಪೈಕಿ ಸಣ್ಣ ಕೆರೆಗಳನ್ನು ಸೊಸೈಟಿಗೆ ಜವಾಬ್ದಾರಿ ನೀಡಿ, ಉಳಿದ ಕೆರೆಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮೀನುಗಾರಿಕೆ ಮಾಡಲು ಅವಕಾಶ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕರಾವಳಿ ವಿಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
63 ಪರ್ಸೆಂಟ್‌ ಭ್ರಷ್ಟಾಚಾರ ಬಿಜೆಪಿ ಕಾಲದ್ದು, ಅಶೋಕ್‌ಗೆ ಅರ್ಥವಾಗೇ ಇಲ್ಲ: ಸಿಎಂ