
ನವದೆಹಲಿ: ಇತ್ತೀಚೆಗಷ್ಟೇ ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿಹಾರದ ನಿತಿನ್ ನಬೀನ್ ಅವರಿಗೆ ರಾಜ್ಯಸಭೆಗೆ ಪದೋನ್ನತಿ ನೀಡಲು ಪಕ್ಷದ ಹೈಕಮಾಂಡ್ ಚಿಂತನೆ ನಡೆಸುತ್ತಿದ್ದು, ಅದಕ್ಕಾಗಿ ಬಂಕಿಪುರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಮುಂದಿನ ತಿಂಗಳು ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ನತಿನ್ ಅಲಂಕರಿಸುವವರಿದ್ದಾರೆ ಎನ್ನಲಾಗುತ್ತಿದ್ದು, ಅದಕ್ಕೂ ಮೊದಲು ಈ ಬದಲಾವಣೆಯಾಗುವ ನಿರೀಕ್ಷೆಯಿದೆ. ಡಿ.14ರಂದು 45 ವರ್ಷದ ಇವರನ್ನು ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ದಿಢೀರನೆ ನೇಮಿಸಲಾಗಿತ್ತು. ಅದಾದ 2 ದಿನದ ಬಳಿಕ(ಡಿ.16) ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಶಾಸಕ ಸ್ಥಾನದಲ್ಲಿ ಮುಂದುವರೆದಿದ್ದರು. ಇದೀಗ ಅದನ್ನೂ ಬಿಟ್ಟು ರಾಜ್ಯಸಭೆಗೆ ಹೋಗಲಿದ್ದಾರೆ. ಈ ಮೂಲಕ, ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿರುವವರು ರಾಜ್ಯಸಭಾ ಸದಸ್ಯರೂ ಆಗಿರುವ ಸಂಪ್ರದಾಯವನ್ನು ಮುಂದುವರೆಸಲಿದ್ದಾರೆ. ಪ್ರಸ್ತುತ ಪಕ್ಷದ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರೂ ರಾಜ್ಯಸಭೆಯ ಚುನಾಯಿತ ಸದಸ್ಯರಾಗಿದ್ದಾರೆ.
ಮುಂದಿನ ವರ್ಷ ಏಪ್ರಿಲ್‌ನಲ್ಲಿ ಬಿಹಾರದ 5 ರಾಜ್ಯಸಭಾ ಸಂಸದರ ಅವಧಿ ಮುಗಿಯಲಿದ್ದು, ಅವರ ಸೀಟುಗಳು ಖಾಲಿ ಆಗಲಿವೆ. ಬಿಹಾರದಿಂದ ರಾಜ್ಯಸಭಾ ಸದಸ್ಯರಾಗಲು 41 ಶಾಸಕರ ಬೆಂಬಲ ಅಗತ್ಯ. ಆದರೆ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 89 ಸೀಟುಗಳನ್ನು ತನ್ನದಾಗಿಸಿಕೊಂಡಿರುವುದರಿಂದ ನಿತಿನ್ ನಬೀನ್‌ರನ್ನು ರಾಜ್ಯಸಭೆಗೆ ಕಳಿಸುವುದು ಕಷ್ಟವಾಗಲಿಕ್ಕಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.