ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ

Published : Dec 21, 2025, 10:58 PM IST
HC Balakrishna

ಸಾರಾಂಶ

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಜಿದ್ದಿನ ಮೂಲಕ ಅನುಷ್ಠಾನ ಮಾಡಲು ಮುಂದಾಗುತ್ತಿಲ್ಲ. ಈ ವಿಷಯವನ್ನು ರೈತರು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ರಾಮನಗರ (ಡಿ.21): ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಸಮಗ್ರ ಉಪನಗರ ಯೋಜನೆಯನ್ನು ಜಿದ್ದಿನ ಮೂಲಕ ಅನುಷ್ಠಾನ ಮಾಡಲು ಮುಂದಾಗುತ್ತಿಲ್ಲ. ಈ ವಿಷಯವನ್ನು ರೈತರು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರೇಟರ್ ಪ್ರಾಧಿಕಾರ ರೈತರ ಮಾಹಿತಿಗಾಗಿ ಹೊರತಂದಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈ ಯೋಜನೆಗೆ 2006ರಲ್ಲಿಯೇ ಚಾಲನೆ ಸಿಕ್ಕಿತ್ತು. ಅಂದಿನ ಬಿಡದಿ ಟೌನ್‌ಶಿಪ್ ಯೋಜನೆಗೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ಎಂದು ಈಗ ಹೊಸ ರೂಪ ನೀಡಲಾಗಿದೆ. ರೈತರು ಯಾವುದೇ ವಿಷಯವನ್ನಾಗಲಿ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ನಾನು ರೈತರ ಬಗ್ಗೆ ತಪ್ಪು ಮಾತನಾಡಿದ್ದರೆ ಕ್ಷಮೆ ಕೇಳುತ್ತೇನೆ. ನಮ್ಮ ಸರ್ಕಾರಕ್ಕೆ ರೈತರಿಗೆ ತೊಂದರೆ ಕೊಡಬೇಕು ಎಂಬ ಯಾವುದೇ ದುರುದ್ದೇಶವಿಲ್ಲ ಎಂದರು.

ಬಿಡದಿ ಉಪನಗರ ಯೋಜನೆ ಭೂಸ್ವಾಧೀನದಿಂದ ಭೂಮಿ ಕಳೆದು ಕೊಂಡ ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕೊಡುವ ಕೆಲಸವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಾಡಲಾಗುತ್ತಿದೆ. ರೈತರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಯಾರು ಮಧ್ಯವರ್ತಿಗಳಿಲ್ಲ, ರೈತರಿಗೆ ಯಾವುದೇ ಸಂದೇಹಗಳಿದ್ದರೆ ಸಹಾಯವಾಣಿ ಸಂಖ್ಯೆ- 7259198192 ಗೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು. ನಿಮ್ಮ ಸಮಸ್ಯೆಗಳಿಗೆ ನೇರವಾಗಿ ಅಧಿಕಾರಿಗಳೇ ಸ್ಪಂದಿಸಲಿದ್ದಾರೆ. ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ಅವರ ಮನವೊಲಿಸಲಿದ್ದೇವೆ. ಸದ್ಯದಲ್ಲಿಯೇ ರೈತರೊಂದಿಗೆ ಸಭೆ ಮಾಡಲಿದ್ದೇವೆ ಎಂದು ಅವರು ಹೇಳಿದರು.

ಯುವಕ-ಯುವತಿಯರಿಗೆ ಕೌಶಲ್ಯವೃದ್ದಿ ಕೇಂದ್ರ ತೆರೆದು ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ತರಬೇತಿ ನೀಡಿ ಉದ್ಯೋಗ ಅವಕಾಶ ಕಲ್ಪಿಸಲು ತೀರ್ಮಾನಿಸಿದ್ದು, ಜೋಗರದೊಡ್ಡಿ ಬಳಿ ನಿರ್ಮಿತಿ ಕೇಂದ್ರದಲ್ಲಿ ಕಚೇರಿ ತೆರೆಯಲಾಗುತ್ತಿದೆ.ಹಪ್ಪಳ, ಉಪ್ಪಿನಕಾಯಿ, ಸಾಂಬರ್ ಪೌಡರ್ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಕೈಗಾರಿಕೆಗಳಿಗೆ ಪೂರೈಸಲು ಸ್ತ್ರೀ ಶಕ್ತಿ ಗುಂಪುಗಳು ಹಾಗೂ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಅವಕಾಶ ಸಿಗುವಂತೆ ಮಾಡಲಿದ್ದೇವೆ. ಇದರಿಂದ ಆ ಭಾಗದ ಮಹಿಳೆಯರಿಗೆ ಉದ್ಯೋಗ ದೊರಕುವಂತಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಚರ್ಚಿಸಿ ಪರಿಹಾರ

ಮುಂದಿನ ದಿನಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಸಭೆ ಮಾಡಲಿದ್ದೇವೆ. ಸಮಸ್ಯೆ ಹಾಗೂ ಸಂದೇಹಗಳಿರುವ ರೈತರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಅರ್ಜಿ ನೀಡಿದರೆ ನಾವು ಸಭೆಯಲ್ಲಿ ಚರ್ಚಿಸಿ ಪರಿಹಾರ ಸೂಚಿಸುತ್ತೇವೆ. ರೈತರು ತಾಲೂಕು ಕಚೇರಿಗಾಗಲಿ, ಉಪವಿಭಾಗಾಧಿಕಾರಿ ಕಚೇರಿಗಾಗಲಿ ಅಲೆಯದೆ ನೇರವಾಗಿ ಬಂದು ಪ್ರಾಧಿಕಾರದ ಕಚೇರಿಗೆ ಅರ್ಜಿ ನೀಡಿದರೆ ನಾವೆ ಸಮಸ್ಯೆ ಬಗೆಹರಿಸಿಕೊಡುತ್ತೇವೆ ಎಂದು ಬಾಲಕೃಷ್ಣ ಹೇಳಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್‌ ನಟರಾಜು ಮಾತನಾಡಿ , ರೈತರು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು. ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಪುಸ್ತಕದ ರೂಪದಲ್ಲಿ ಮಾಹಿತಿಯಿದೆ. ನಿಮಗೆ ಯಾವುದೇ ರೀತಿಯ ಸಂದೇಹಗಳಿದ್ದರೂ ಪ್ರಾಧಿಕಾರದ ಕಚೇರಿಗೆ ಬಂದು ನೇರವಾಗಿ ಬಗೆಹರಿಸಿಕೊಳ್ಳಬಹುದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಬಿಡಿಎ ನಿರ್ದೇಶಕರಾದ ಪುಟ್ಟಯ್ಯ, ನರಸಿಂಹಯ್ಯ, ಕಲ್ಯಾಣಕುಮಾರಿ, ಆನಂದ ತೀರ್ಥ, ಜಿಬಿಡಿಎ ಹೆಚ್ಚುವರಿ ಆಯುಕ್ತ ಮಾರುತಿ ಪ್ರಸನ್ನಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ
ಸಿಎಂ ಕುರ್ಚಿ ಗೊಂದಲದಿಂದಾಗಿ ರಾಜ್ಯದಲ್ಲಿ ಅಸ್ತಿರತೆ ಸೃಷ್ಟಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ