ಬಿಜೆಪೀಲಿ ಸಾಮೂಹಿಕ ನಾಯಕತ್ವದ ಮಂತ್ರ!

Published : Jun 28, 2025, 06:37 AM IST
karnataka bjp

ಸಾರಾಂಶ

ಪಕ್ಷದ ಹೈಕಮಾಂಡ್ ಮತ್ತು ಸಂಘ ಪರಿವಾರದ ಮುಖಂಡರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ನಾಯಕರು ಪರಸ್ಪರ ಕಿತ್ತಾಟ ಕೈಬಿಟ್ಟು ಸಾಮೂಹಿಕ ನಾಯಕತ್ವದ ಅಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

ಬೆಂಗಳೂರು : ಪಕ್ಷದ ಹೈಕಮಾಂಡ್ ಮತ್ತು ಸಂಘ ಪರಿವಾರದ ಮುಖಂಡರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ನಾಯಕರು ಪರಸ್ಪರ ಕಿತ್ತಾಟ ಕೈಬಿಟ್ಟು ಸಾಮೂಹಿಕ ನಾಯಕತ್ವದ ಅಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

ಅಂದರೆ, ರಾಜ್ಯಾಧ್ಯಕ್ಷ ಹುದ್ದೆಯ ನೇಮಕ ಕುರಿತಂತೆ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಹೀಗಾಗಿ, ಆ ವಿಷಯ ಮುಂದಿಟ್ಟುಕೊಂಡು ಪಕ್ಷ ಸಂಘಟನೆ ದುರ್ಬಲವಾಗುವುದನ್ನು ನೋಡಿಕೊಂಡು ಕುಳಿತುಕೊಳ್ಳಬಾರದು ಎಂಬ ಸಂಘ ಪರಿವಾರದ ಮುಖಂಡರ ತೀಕ್ಷ್ಣ ಎಚ್ಚರಿಕೆಗೆ ರಾಜ್ಯ ನಾಯಕರು ಮಣಿದಿದ್ದಾರೆ.

ಇದರ ಅಂಗವಾಗಿ ಶೀಘ್ರದಲ್ಲೇ ಅತೃಪ್ತ ಮುಖಂಡರನ್ನೂ ಒಳಗೊಂಡು ಪಕ್ಷದ ನಾಯಕರ ತಂಡಗಳನ್ನು ರಚಿಸಲಿದ್ದು, ಈ ತಂಡಗಳು ಜಿಲ್ಲಾವಾರು ಪ್ರವಾಸ ಕೈಗೊಂಡು ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳ ಆಯ್ಕೆ, ಸ್ಥಳೀಯ ಸಂಘಟನೆಯಲ್ಲಿನ ಕೊರತೆಗಳನ್ನು ಪರಿಹರಿಸಲಿದ್ದಾರೆ. ಜತೆಗೆ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನೂ ನಡೆಸಲಿದ್ದಾರೆ.

ತಂಡಗಳನ್ನು ಅಂತಿಮಗೊಳಿಸಿ ಪ್ರಕಟಿಸುವ ಮೊದಲು ಹಿರಿಯ ನಾಯಕರ ಗಮನಕ್ಕೆ ತರಬೇಕು. ಆಯಾ ಜಿಲ್ಲೆಗಳಿಗೆ ನಿಗದಿಯಾಗುವ ತಂಡಗಳಲ್ಲಿ ಅಲ್ಲಿನ ಸ್ಥಳೀಯ ಮುಖಂಡರಿಗೆ ಒಪ್ಪಿತವಾಗುವ ನಾಯಕರು ಇರಬೇಕು. ಬೇಕಾಬಿಟ್ಟಿಯಾಗಿ ತಂಡಗಳನ್ನು ರಚಿಸಬಾರದು ಎಂಬ ಚರ್ಚೆಯೂ ನಡೆದಿದೆ.ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಹೋರಾಟ ಮಾಡಿದರೆ ಸಾಲದು. ರಾಜ್ಯಾದ್ಯಂತ ನಡೆಯಬೇಕು. ರಾಜ್ಯ ಮಟ್ಟದ ವೈಫಲ್ಯಗಳ ಜತೆಗೆ ಸ್ಥಳೀಯ ವೈಫಲ್ಯಗಳ ವಿರುದ್ಧವೂ ಹೋರಾಟ ಮಾಡಬೇಕು.

ಹೋರಾಟಗಳನ್ನು ಪರಿಣಾಮಕಾರಿಯಾಗಿ ನಡೆಸುವ ಮೊದಲ ಪಕ್ಷದ ಸಂಘಟನೆ ಗಟ್ಟಿಯಾಗಿರಬೇಕು. ಹೀಗಾಗಿ, ಮೊದಲು ಸಂಘಟನೆ ಬಲಪಡಿಸುವತ್ತ ಗಮನಹರಿಸಬೇಕು ಎಂಬ ನಿಲವಿಗೆ ಬಿಜೆಪಿ ನಾಯಕರು ಬಂದಿದ್ದಾರೆ ಎಂದು ತಿಳಿದು ಬಂದಿದೆ.ಶುಕ್ರವಾರ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ನಿವಾಸದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪಕ್ಷದ ಹಿರಿಯ ನಾಯಕರು ಸಭೆ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ವಿ.ಸುನೀಲ್‌ಕುಮಾರ್, ಸಿ.ಟಿ.ರವಿ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಸರ್ಕಾರದ ಕಾರ್ಯವೈಖರಿ, ಭಂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ಕೈಗೆತ್ತಿಕೊಳ್ಳಬೇಕು, ಹೋರಾಟದ ರೂಪುರೇಷೆಗಳ ಕುರಿತು ಇಂದು ಚರ್ಚಿಸಿದ್ದೇವೆ ಎಂದು ತಿಳಿಸಿದರು.

ಸುಮಾರು 9ರಿಂದ 10 ತಂಡಗಳನ್ನು ರಚಿಸಿ ಜಿಲ್ಲೆಗಳಿಗೆ ಪ್ರವಾಸ ಮಾಡಬೇಕು. ಆ ಜಿಲ್ಲೆಯ ಸಮಸ್ಯೆಗಳನ್ನೂ ತೆಗೆದುಕೊಂಡು ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ರೂಪಿಸಬೇಕು. ಇವೆಲ್ಲ ವಿಚಾರಗಳನ್ನು ಚರ್ಚಿಸಿದ್ದೇವೆ. ಇದು ಆಂತರಿಕ ಬೇಗುದಿ ಸರಿಪಡಿಸುವುದು, ಮತ್ತೊಂದು ಅಲ್ಲ. ಜಿಲ್ಲೆಗಳಲ್ಲೂ ಸಣ್ಣ ಪುಟ್ಟ ಸಮಸ್ಯೆ ಇರುತ್ತದೆ. ಅವೆಲ್ಲವನ್ನೂ ಬಗೆಹರಿಸುವ ವಿಚಾರಗಳ ಕುರಿತು ಹಿರಿಯರೆಲ್ಲರೂ ಕುಳಿತು ಚರ್ಚಿಸಿದ್ದೇವೆ ಎಂದರು.ಇವತ್ತು ನಾವೆಲ್ಲರೂ ಕುಳಿತು ಸಮಗ್ರವಾಗಿ ಚರ್ಚೆ ಮಾಡಿದ್ದೇವೆ. ಇನ್ನೂ ಕೆಲವು ಪ್ರಮುಖರು ಬರಬೇಕಿತ್ತು. ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗಿಲ್ಲ ಎಂದು ವಿಜಯೇಂದ್ರ ತಿಳಿಸಿದರು.

ಸಂಘದ ಸೂಚನೆ ಮೇರೆಗೆ ‘ಅತೃಪ್ತ’ಲಿಂಬಾವಳಿ ಭಾಗಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ. ವಿಜಯೇಂದ್ರ ಅವರನ್ನು ಮುಂದುವರೆಸಬಾರದು ಎಂಬ ಬೇಡಿಕೆ ಮುಂದಿಟ್ಟಿರುವ ಅತೃಪ್ತ ನಾಯಕರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಶುಕ್ರವಾರದ ಸಭೆಯಲ್ಲಿ ಪಾಲ್ಗೊಂಡಿದ್ದು ಅಚ್ಚರಿ ಮೂಡಿಸಿತು.ವಿಜಯೇಂದ್ರ ಅವರ ಜತೆ ಲಿಂಬಾವಳಿ ರಾಜಿಯಾಗಿರಬಹುದು ಎಂಬ ಅನುಮಾನವೂ ಬಿಜೆಪಿ ಪಾಳೆಯದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇದನ್ನು ಲಿಂಬಾವಳಿ ಅವರ ಆಪ್ತರು ಬಲವಾಗಿ ಅಲ್ಲಗಳೆದಿದ್ದಾರೆ. ಸಂಘ ಪರಿವಾರದ ಮುಖಂಡರ ಸೂಚನೆ ಮೇರೆಗೆ ಲಿಂಬಾವಳಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷ ಸಂಘಟನೆ ಉದ್ದೇಶದಿಂದ ಭಾಗಿಯಾಗುವಂತೆ ಸಂಘದ ಪ್ರಮುಖರು ನೀಡಿದ ಸೂಚನೆಯನ್ನು ಪಾಲಿಸಿದರು ಎಂದು ಮೂಲಗಳು ಖಚಿತಪಡಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಮಹಾಮೇಳಾವ್ ಅನುಮತಿ ನಿರಾಕರಣೆ - ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ