ನನ್ನ ವಿರುದ್ಧ ಬಿಜೆಪಿಗರ ಸುಳ್ಳು ಆರೋಪ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Aug 21, 2024, 11:13 AM IST
Highlights

ಬಡವರ ಏಳಿಗೆಗಾಗಿ ಸಮಾಜದಲ್ಲಿನ ಅಸಮಾನತೆ ವಿರುದ್ಧ ಹೋರಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಸಹಿಸದೆ ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು (ಆ.21): ಬಡವರ ಏಳಿಗೆಗಾಗಿ ಸಮಾಜದಲ್ಲಿನ ಅಸಮಾನತೆ ವಿರುದ್ಧ ಹೋರಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಸಹಿಸದೆ ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ವಿರೋಧಿಗಳು. ಈ ಸಮುದಾಯಗಳು, ಬಡವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತರಾಗಬಾರದು ಎಂದು ಬಯಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಬದುಕು- ಕೆಲಸಗಳು ನಮಗೆ ಮಾರ್ಗದರ್ಶಿಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರಧಾನಿಯಾಗಿ ಟೆಲಿಕಾಂ ಕ್ರಾಂತಿ, ಮತದಾನದ ವಯಸ್ಸು 21 ರಿಂದ 18ಕ್ಕೆ ಇಳಿಕೆ ಮುಂತಾದ ಕ್ರಮಗಳ ಮೂಲಕ ಆಧುನಿಕ ಭಾರತ ನಿರ್ಮಾಣದ ಕನಸು ಕಂಡರು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಕಾರಣಕರ್ತರಾದರು. ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ ಇಲ್ಲದ ಸಾಮಾಜಿಕ ನ್ಯಾಯ, ಸಮಾನ ಅವಕಾಶದ ಪರವಾಗಿದ್ದರು. ಮಹಿಳೆಯರಿಗೆ ರಾಜಕೀಯ ಸ್ಥಾನ ಮಾಡನ ಕೊಡಿಸಿದರು ಎಂದು ಸಿದ್ದರಾಮಯ್ಯ ಹೇಳಿದರು.

Latest Videos

ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರು ದೀರ್ಘ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಹಿಂದುಳಿದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ರಾಜಕೀಯದಲ್ಲಿ ಅವಕಾಶ ನೀಡಿ ವಿಧಾನಸೌಧ ಪ್ರವೇಶಿಸಲು ಅವಕಾಶ ನೀಡಿದರು. ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿಷೇಧ, ಸಾಲ ಮನ್ನಾ ಸೇರಿದಂತೆ ಅನೇಕ ಪ್ರಗತಿಪರ ಕಾನೂನುಗಳನ್ನು ತಂದರು ಎಂದು ಮುಖ್ಯಮಂತ್ರಿ ಸ್ಮರಿಸಿದರು.

ವಿದ್ಯಾರ್ಥಿ ದೆಸೆಯಿಂದಲೂ ನನ್ನ ವಿರುದ್ಧ ಹುನ್ನಾರ: ಸಿಎಂ ಸಿದ್ದರಾಮಯ್ಯ

ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಚಿಕ್ಕ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ನೀಡಿದರು. ಅನೇಕ ಕ್ರಾಂತಿಕಾರಿ ಕೆಲಸಗಳನ್ನು ಮಾಡಿದ್ದ ಅವರು ಬದುಕಿದ್ದರೆ 2025ರ ವೇಳೆಗೆ ಭಾರತ ಜಗತ್ತಿನ ನಂಬರ್ ಒನ್ ದೇಶವಾಗಿ ಅಭಿವೃದ್ಧಿ ಆಗುತ್ತಿತ್ತು ಎಂದರು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್‌, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸಿದರು.

click me!