2023ರ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿರುವ ಮಂಡ್ಯ ಜಿಲ್ಲೆಯೊಳಗೆ ಕಮಲ ಅರಳಿಸುವುದು ಬಿಜೆಪಿಯ ಮುಖ್ಯ ಗುರಿಯಾಗಿದೆ. ಅದಕ್ಕೆ ಬಿಜೆಪಿ ಚಾಣಕ್ಯ ತಂತ್ರವನ್ನು ರೂಪಿಸಿದ್ದು, ಮಂಡ್ಯದಿಂದಲೇ ಹಳೇ ಮೈಸೂರು ಭಾಗವನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ.
ಮಂಡ್ಯ ಮಂಜುನಾಥ
ಮಂಡ್ಯ (ಫೆ.16): 2023ರ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿರುವ ಮಂಡ್ಯ ಜಿಲ್ಲೆಯೊಳಗೆ ಕಮಲ ಅರಳಿಸುವುದು ಬಿಜೆಪಿಯ ಮುಖ್ಯ ಗುರಿಯಾಗಿದೆ. ಅದಕ್ಕೆ ಬಿಜೆಪಿ ಚಾಣಕ್ಯ ತಂತ್ರವನ್ನು ರೂಪಿಸಿದ್ದು, ಮಂಡ್ಯದಿಂದಲೇ ಹಳೇ ಮೈಸೂರು ಭಾಗವನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಚುನಾವಣಾ ಚಾಣಾಕ್ಷ ಎಂದೇ ಹೆಸರು ಗಳಿಸಿರುವ ಅಮಿತ್ ಶಾ ಕಳೆದ ವರ್ಷ ಡಿ.30ರಂದು ಮಂಡ್ಯದಲ್ಲಿ ಜನಸಂಕಲ್ಪ ಯಾತ್ರೆ ನಡೆಸಿದ ಬಳಿಕ ಜಿಲ್ಲೆಯೊಳಗೆ ಬಿಜೆಪಿ ಪರವಾದ ಹೊಸ ಅಲೆ ಮೇಲೆದ್ದಿತ್ತು. ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಹುಮ್ಮಸ್ಸನ್ನು ಮೂಡಿಸಿತ್ತು. ಹಲವು ತಾಲೂಕುಗಳಲ್ಲಿ ಬಿಜೆಪಿ ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಿತ್ತು. ಈ ಬೆಳವಣಿಗೆ ಕಾಂಗ್ರೆಸ್-ಜೆಡಿಎಸ್‌ನಲ್ಲೂ ನಡುಕ ಹುಟ್ಟಿಸುವಂತೆ ಮಾಡಿತ್ತು.
ಪ್ರತಿ ಚುನಾವಣೆಯಲ್ಲೂ ಆಟಕ್ಕುಂಟು-ಲೆಕ್ಕಕ್ಕಿಲ್ಲ ಎಂಬಂತಿರುತ್ತಿದ್ದ ಬಿಜೆಪಿಯನ್ನು ಪ್ರಸ್ತುತ ಸನ್ನಿವೇಶದಲ್ಲಿ ನಿರ್ಲಕ್ಷಿಸುವಂತಿಲ್ಲ ಎನ್ನುವಷ್ಟರ ಮಟ್ಟಿಗೆ ಭಯ ಮೂಡಿಸಿತ್ತು. ಇದಾದ 20 ದಿನಗಳಲ್ಲಿ ಮಂಡ್ಯ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ನೇಮಕಗೊಂಡರು. ಈ ಬೆಳವಣಿಗೆ ಜಿಲ್ಲಾ ಬಿಜೆಪಿಯೊಳಗೆ ತೀವ್ರ ಅಸಮಾಧಾನ ಸೃಷ್ಟಿಸಿತು. ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕಾರಣಕ್ಕೆ ಹೆಸರಾಗಿರುವ ಅಶೋಕ್‌ರಿಂದ ಜಿಲ್ಲೆಯೊಳಗೆ ಬಿಜೆಪಿ ಪಕ್ಷ ಸಂಘಟನೆ ಅಸಾಧ್ಯ ಎಂದರಿತ ಸ್ವಪಕ್ಷೀಯರೇ ಸಚಿವ ಆರ್.ಅಶೋಕ್ ವಿರುದ್ಧ ಗೋ-ಬ್ಯಾಕ್ ಅಭಿಯಾನ ನಡೆಸಿದರು. ಈ ಬೆಳವಣಿಗೆಯಿಂದ ಬೇಸರಗೊಂಡ ಆರ್.ಅಶೋಕ್ ಮಂಡ್ಯ ಉಸಾಬರಿಯೇ ನನಗೆ ಬೇಡ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದುಕೊಟ್ಟರು.
ಸಿದ್ದುರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು: ಸಚಿವ ಅಶ್ವತ್ಥ ನಾರಾಯಣ
ಡಾ.ಅಶ್ವತ್ಥನಾರಾಯಣ ಅಖಾಡ ಪ್ರವೇಶ: ಈಗ ಮಂಡ್ಯ ಜಿಲ್ಲಾ ಉಸ್ತುವಾರಿಗಿಂತ ಹೆಚ್ಚಾಗಿ ಚುನಾವಣಾ ಜವಾಬ್ದಾರಿ ನಿಭಾಯಿಸುವವರು ಬಿಜೆಪಿಯವರಿಗೆ ಬೇಕಿದೆ. ಅದಕ್ಕಾಗಿ ಪ್ರಬಲ ಒಕ್ಕಲಿಗ ನಾಯಕ ಎನಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಸಾರಥ್ಯ ನೀಡಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಪಕ್ಷ ಸಂಘಟನೆ ಹೆಸರಿನಲ್ಲಿ ಆಗಾಗ ಜಿಲ್ಲೆಗೆ ಭೇಟಿ ನೀಡುತ್ತಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೇ ಆ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಂತಿದೆ. ಅಶೋಕ್ ಉಸ್ತುವಾರಿಯಿಂದ ದೂರವಾದ ಬಳಿಕ ಜಿಲ್ಲೆಯ ಅಖಾಡ ಪ್ರವೇಶಿಸಿದ ಅಶ್ವತ್ಥನಾರಾಯಣ, ಪಕ್ಷ ಸಂಘಟನೆಗಾಗಿ ನಾನಿಲ್ಲಿಗೆ ಬಂದಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಜಿಲ್ಲೆಯ ಸಾರಥ್ಯ ವಹಿಸಿಕೊಳ್ಳುವ ಸುಳಿವು ನೀಡಿದ್ದಾರೆ. ಐದು ವರ್ಷ ನನಗೆ ಅಧಿಕಾರ ಕೊಡಿ. 50 ವರ್ಷಗಳಲ್ಲಿ ಮಾಡಲಾಗದ ಅಭಿವೃದ್ಧಿಯನ್ನು ನಾನು ಮಾಡಿ ತೋರಿಸುತ್ತೇನೆ ಎಂದು ಜೆಡಿಎಸ್, ಕಾಂಗ್ರೆಸ್‌ಗೆ ಸವಾಲನ್ನೂ ಹಾಕಿದ್ದಾರೆ.
ಚುನಾವಣಾ ನಾಯಕತ್ವ ಸಾಧ್ಯತೆ: ಮಂಡ್ಯ ಮೂಲದವರೇ ಆದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮಂಡ್ಯಕ್ಕೆ ಆಗಮಿಸಿದಾಗಲೆಲ್ಲಾ ಜೆಡಿಎಸ್‌ನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುವುದು ಸಾಮಾನ್ಯವಾಗಿದೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಮರ್ಥವಾಗಿ ಎದುರಿಸಿಕೊಂಡು ಬರುತ್ತಿರುವ ಡಾ.ಅಶ್ವತ್ಥನಾರಾಯಣ ಮಂಡ್ಯ ಜಿಲ್ಲೆಯ ನೇತೃತ್ವ ವಹಿಸಲು ಸೂಕ್ತ ನಾಯಕ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಈ ದೃಷ್ಟಿಯಿಂದ ಚುನಾವಣಾ ನಾಯಕತ್ವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೆಗಲೇರುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ.
ಹಳೇ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ ಕೇಂದ್ರ ನಾಯಕರು ಒಂದೆಡೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣರನ್ನು ಮಂಡ್ಯ ಕಡೆಗೆ ದಂಡೆತ್ತಿ ಕಳುಹಿಸುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿರುವ ಬಿ.ಎಸ್.ವಿಜಯೇಂದ್ರ ಅವರನ್ನೂ ಮಂಡ್ಯ ಕಡೆ ಮುಖ ಮಾಡಿಸಿದ್ದಾರೆ. ಫೆ.20ರಂದು ಮಂಡ್ಯ ನಗರದಲ್ಲಿ ಯುವ ಮೋರ್ಚಾಗಳ ಸಮಾವೇಶ ಏರ್ಪಡಿಸಿದ್ದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ ನೀಡಲು ಸಿದ್ಧತೆ ನಡೆಸಿದ್ದಾರೆ.
ಹೊಸ ಮುಖಗಳು ಬಂದರೂ ಅಚ್ಚರಿ ಇಲ್ಲ: ಜಿಲ್ಲೆಯೊಳಗೆ ಕಾಂಗ್ರೆಸ್, ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಇದೇ ಮೊದಲ ಬಾರಿಗೆ 2023ರ ಚುನಾವಣೆಯಲ್ಲಿ ಬಿಜೆಪಿ ತನ್ನೆಲ್ಲಾ ಶಕ್ತಿ-ಸಾಮರ್ಥ್ಯವನ್ನು ಪ್ರದರ್ಶಿಸಿ ಒಂದಷ್ಟುಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಹೊರಟಿದೆ. ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಹೊಸ ಮುಖಗಳನ್ನು ಅಖಾಡ ಪ್ರವೇಶಿಸುವಂತೆ ಮಾಡಿದರೂ ಆಶ್ಚರ್ಯಪಡಬೇಕಿಲ್ಲ ಎಂದೇ ಹೇಳಲಾಗುತ್ತಿದೆ. ಬಿಜೆಪಿ ಚಾಣಾಕ್ಯ ತಂತ್ರದಲ್ಲಿ ಅದೂ ಕೂಡ ಒಂದಾಗಿದೆ ಎನ್ನಲಾಗುತ್ತಿದ್ದು, ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎನ್ನಲಾಗಿದೆ.
ಸಂಸದೆ ಸುಮಲತಾ ಕಾಂಗ್ರೆಸ್ ಪಕ್ಷ ಸೇರಲು ಅಭ್ಯಂತರವಿಲ್ಲ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳಿಗೆ ಪರಾರಯಯವಾಗಿ ಮೂರನೇ ಪ್ರಬಲ ರಾಜಕೀಯ ಪಕ್ಷವಾಗಿ ಜಿಲ್ಲೆಯಲ್ಲಿ ಬಿಜೆಪಿ ಬೆಳವಣಿಗೆ ಸಾಧಿಸಲು ಗಂಭೀರ ಪ್ರಯತ್ನಕ್ಕಿಳಿದಿದೆ. ಜಿಲ್ಲೆಯೊಳಗೆ ಅಧಿಪತ್ಯ ಸಾಧಿಸುವುದನ್ನೇ ಪ್ರಮುಖ ಗುರಿಯಾಗಿಸಿಕೊಂಡಿದೆ. ಹಿಂದೆ ಹಳೇ ಮೈಸೂರು ಭಾಗವನ್ನು ನಿರ್ಲಕ್ಷಿಸುತ್ತಿದ್ದ ಬಿಜೆಪಿ ನಾಯಕರು ಈ ಬಾರಿ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಹಳೇ ಮೈಸೂರು ಭಾಗದ ಮೇಲೆ ಪ್ರಬಲ ಹಿಡಿತ ಸಾಧಿಸಲು ಹೊರಟಿರುವ ಬಿಜೆಪಿಯವರ ತಂತ್ರಗಾರಿಕೆ ಎಷ್ಟರಮಟ್ಟಿಗೆ ಫಲಿಸಲಿದೆ ಎನ್ನುವುದನ್ನು ಕಾದುನೋಡಬೇಕಿದೆ.