ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ‘ಸೊನ್ನೆ ಪೋಸ್ಟರ್‌’

By Kannadaprabha NewsFirst Published May 21, 2024, 7:31 AM IST
Highlights

ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದರು. ಈ ಸರ್ಕಾರ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಆಶಯ ಜನರದ್ದಾಗಿತ್ತು. ನುಡಿದಂತೆ ನಡೆಯುವ ಸರ್ಕಾರ ಎಂದು ಕಾಂಗ್ರೆಸ್ಸಿಗರು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದಾರೆ. ಹೊಗಳುಭಟರು, ಜಾಹೀರಾತಿನ ಮೂಲಕ ತಮ್ಮನ್ನು ತಾವು ಹೊಗಳಿಸಿಕೊಳ್ಳುವುದು ಮತ್ತು ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ 

ಬೆಂಗಳೂರು(ಮೇ.21):  ‘ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ. ಈ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ; ಗುದ್ದಲಿ ಪೂಜೆಯ ಉದಾಹರಣೆಯೂ ಇಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ರಾಜ್ಯ ಸರ್ಕಾರ ಮೊದಲ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೋಮವಾರ ಪಕ್ಷದ ಕಚೇರಿಯಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ಅವರೊಂದಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದರು. ಈ ಸರ್ಕಾರ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಆಶಯ ಜನರದ್ದಾಗಿತ್ತು. ನುಡಿದಂತೆ ನಡೆಯುವ ಸರ್ಕಾರ ಎಂದು ಕಾಂಗ್ರೆಸ್ಸಿಗರು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದಾರೆ. ಹೊಗಳುಭಟರು, ಜಾಹೀರಾತಿನ ಮೂಲಕ ತಮ್ಮನ್ನು ತಾವು ಹೊಗಳಿಸಿಕೊಳ್ಳುವುದು ಮತ್ತು ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Latest Videos

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಒಂದು ನಿರರ್ಥಕ ವರ್ಷ, ಅತಿ ಕೆಟ್ಟ ಆಡಳಿತ - ಅರ್ ಅಶೋಕ್

ಗ್ಯಾರಂಟಿಯೂ ಅಭಿವೃದ್ಧಿಯೇ ಎಂದು ಬಿಂಬಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಗ್ಯಾರಂಟಿಗೆ ಪ್ರಚಾರ ಕೊಟ್ಟು, ಅದರ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಬರಗಾಲದ ವಿಚಾರದಲ್ಲಿ ಸರ್ಕಾರದ ನಡವಳಿಕೆ ಅಕ್ಷಮ್ಯ ಅಪರಾಧ. ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಹೋರಾಟ ಮಾಡಿದರು. ರಾಜ್ಯದಲ್ಲಿ 692ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರವು ಕೃಷಿ ಸಾಲ, ಬೆಳೆ ನಷ್ಟಕ್ಕೆ ಪರಿಹಾರ ಕೊಡುವ ನಿಟ್ಟಿನಲ್ಲಿ ಗಂಭೀರವಾದ ಅಥವಾ ಜವಾಬ್ದಾರಿಯುತ ಸರ್ಕಾರವಾಗಿ ನಡೆದುಕೊಳ್ಳದೆ ಇರುವುದು ದುರದೃಷ್ಟಕರ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯ ಕೊಡುಗೆಯನ್ನು ಜನರಿಗೆ ಕೊಟ್ಟಿದೆ. ಸ್ಟ್ಯಾಂಪ್ ಪೇಪರ್ ದರ ಹೆಚ್ಚಳ, ವಿದ್ಯುತ್ ದರ ಏರಿಕೆ, ಪಹಣಿ ಪತ್ರ ಶುಲ್ಕ ಏರಿಕೆ ಮಾಡಿದ್ದಾರೆ. ರೈತರು ಟ್ರಾನ್ಸ್‌ಫಾರ್ಮರ್ ಪಡೆಯಲು ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ 25 ಸಾವಿರ ಕಟ್ಟಿದರೆ ಸಾಕಿತ್ತು. ಈಗ ಟಿಸಿ ಪಡೆಯಲು 2.5 ಲಕ್ಷದಿಂದ 3 ಲಕ್ಷ ಖರ್ಚು ಮಾಡಬೇಕಾದ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತಂದಿದೆ. ಇದೊಂದು ನೀಚ ನಿರ್ಧಾರ ಎಂದು ಟೀಕಿಸಿದರು.

ವರ್ಷ ಒಂದು, ಸಮಸ್ಯೆ ನೂರೊಂದು -ಅಶೋಕ್‌:

ಪ್ರತಿಪಕ್ಷದ ನಾಯಕ ಅಶೋಕ್ ಮಾತನಾಡಿ, ಒನ್ ಇಯರ್ ಖಜಾನೆ ಫುಲ್ ಕ್ಲಿಯರ್. ಖಾಲಿ ಖಾಲಿಯಾಗಿದೆ. ವರುಷ ಒಂದು ಸಮಸ್ಯೆಗಳು ನೂರೊಂದು ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಲೂಟಿ ಎಷ್ಟು ಕೋಟಿ ಎಂದು ಜನರು ಲೆಕ್ಕ ಹಾಕುತ್ತಿದ್ದಾರೆ. ನೇಹಾ, ಮೀನಾ, ಅಂಜಲಿ ಎಂಬ ಮಹಾಲಕ್ಷ್ಮಿಯರು... ನಮ್ಮ ಮನೆಯ ಮಹಾಲಕ್ಷ್ಮಿಯರಿಗಿಲ್ಲ ಬದುಕುವ ಭಾಗ್ಯ... ನೇಹಾ, ಮೀನಾ, ಅಂಜಲಿ ಆಯ್ತು, ಮುಂದೆ ಯಾರೆಂದು ನಮ್ಮ ಹೆಣ್ಣು ಮಕ್ಕಳು ಆತಂಕದಿಂದ ಕಾಯುತ್ತಿದ್ದಾರೆ ಎಂದರು.

click me!