ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬಹಿರಂಗ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಯಿತಲ್ಲ. ಮೊಬೈಲ್ ಸಂಭಾಷಣೆಯಲ್ಲಿ ಎಲ್ಲವೂ ಬಯಲಾಗಿದೆ. ಡಿ.ಕೆ.ಶಿವಕುಮಾರ್, ಎಲ್.ಆರ್.ಶಿವರಾಮೇಗೌಡ, ವಕೀಲ ದೇವರಾಜೇಗೌಡ ನಡುವಿನ ಸಂಭಾಷಣೆ ಆಡಿಯೋ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಮೇಲೆ ಕೂಡಲೇ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ
ಬೆಂಗಳೂರು(ಮೇ.21): ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಕಳಂಕ ತಂದು ರಾಜಕೀಯವಾಗಿ ನಾಶ ಮಾಡಲು ರಾಜ್ಯ ಸರ್ಕಾರದಲ್ಲಿ ಮಿನಿ ಕ್ಯಾಬಿನೆಟ್ ಇದೆ. ಅದಕ್ಕಾಗಿ ‘ಸಿ.ಡಿ ಶಿವು’ ಸಂಚು ರೂಪಿಸಿರುವುದು ಖಚಿತವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬಹಿರಂಗ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಯಿತಲ್ಲ. ಮೊಬೈಲ್ ಸಂಭಾಷಣೆಯಲ್ಲಿ ಎಲ್ಲವೂ ಬಯಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಎಲ್.ಆರ್.ಶಿವರಾಮೇಗೌಡ, ವಕೀಲ ದೇವರಾಜೇಗೌಡ ನಡುವಿನ ಸಂಭಾಷಣೆ ಆಡಿಯೋ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಮೇಲೆ ಕೂಡಲೇ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
News Hour: ಪ್ರಜ್ವಲ್ ರೇವಣ್ಣಗೆ ಡೆಡ್‌ಲೈನ್ ನೀಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ!
ದೇವರಾಜೇಗೌಡ ಮತ್ತು ಶಿವರಾಮೇಗೌಡ ಸಂಭಾಷಣೆಯ ಆಡಿಯೋ ಕೇಳಿದ್ದೇನೆ. ಸದಾಶಿವನಗರದಲ್ಲಿ ವಾಸ ಇರುವವರು ಯಾರು? ಸದಾಶಿವ ನಗರದಲ್ಲಿ ವಾಸ ಇರುವುದು ಕುಮಾರಸ್ವಾಮೀನಾ? ‘ಸಿ.ಡಿ ಶಿವುʼನಾ? ಪ್ರಕರಣದಲ್ಲಿ ನನ್ನ ಹೆಸರು ಹೇಳುವಂತೆ ದೇವರಾಜೇಗೌಡ ಅವರಿಗೆ ಪ್ರಚೋದನೆ ನೀಡಲಾಗಿದೆ. ನನ್ನ ವಿರುದ್ಧ ಪ್ರಕರಣವನ್ನು ತಿರುಗಿಸುವ ಪ್ರಯತ್ನ ಮಾಡಲಾಗಿದೆ. ದೇವೇಗೌಡರು ಇನ್ನೂ ಯಾಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಲಾಗುತ್ತದೆ. ನನ್ನ ಮೇಲೆ, ನಮ್ಮ ಕುಟುಂಬದ ಮೇಲೆ ಯಾಕಿಷ್ಟು ಹಗೆತನ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ನನಗೆ ಕೆಟ್ಟ ಹೆಸರು ತರಲು ನಾಲ್ವರು ಸಚಿವರ ಸಮಿತಿ ರಚನೆ ಮಾಡಿದ್ದಾರೆ ಎಂದು ಸ್ವತಃ ದೇವರಾಜೇಗೌಡ ಹೇಳಿದ್ದಾರೆ. ನಮ್ಮ ಕುಟುಂಬವನ್ನು ಮುಗಿಸುವುದಕ್ಕೆ ಇಂತಹ 10 ಮಿನಿ ಕ್ಯಾಬಿನೆಟ್‌ಗಳನ್ನು ಬೇಕಾದರೂ ರಚನೆ ಮಾಡಲಿ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಿಯೋದಲ್ಲಿ ನಮ್ಮ ಕುಟುಂಬವನ್ನು ಬಲಿ ಹಾಕುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆ. ಉದ್ದೇಶ ಈಡೇರಿಕೆಗೆ ಅಮಾಯಕ ಹೆಣ್ಣುಮಕ್ಕಳ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಹಂಚಲಾಗಿದೆ. ರಾಜಕೀಯ ಸ್ವಾರ್ಥಕ್ಕಾಗಿ ಎಂತಹ ಕೀಳು ಮಟ್ಟಕ್ಕಾದರೂ ಇಳಿಯುತ್ತಾರೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.