ತೀವ್ರ ಕುತೂಹಲ ಮೂಡಿಸಿರುವ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಅದಕ್ಕೂ ಮುನ್ನ ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.
ಬೆಂಗಳೂರು, (ನ.07): ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜ್ಯದ ಉಪಚುನಾವಣೆ ಫಲಿತಾಂಶ ಇದೇ ನವೆಂಬರ್ 10ರಂದು ಹೊರಬೀಳಲಿದೆ. ಮತ್ತೊಂದೆಡೆ ಸಿ-ವೋಟರ್ ಸಂಸ್ಥೆ ನಡೆಸಿದ್ದ ಸಮೀಕ್ಷಾ ಫಲಿತಾಂಶ ಹೊರಬಿದ್ದಿದೆ.
ಉಪಸಮರಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು. ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರದ ಮತದಾರರು ನ.3ರಂದು ಅಭ್ಯರ್ಥಿಗಳ ಹಣೆಬರಹ ಬರೆದಿದ್ದು, ಬಹುತೇಕ ಮತದಾರರ ಒಲವು ಯಾರ ಕಡೆ ಇತ್ತು? ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು? ಎನ್ನುವುದನ್ನ ಸಿ ವೋಟರ್ ಸಂಸ್ಥೆ ಬಹಿರಂಗಪಡಿಸಿದೆ.
'ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲುವು ಪಕ್ಕಾ, ಈವರೆಗೂ ನಾನು ಹೇಳಿರುವ ಮಾತು ಸುಳ್ಳಾಗಿಲ್ಲ'
ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದ್ದ ಆರ್ ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವು ಸಾಧಿಸಲಿದ್ದಾರೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 2ನೇ ಸ್ಥಾನ ಪಡೆದುಕೊಳ್ಳಿದ್ದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 3ನೇ ಸ್ಥಾನ ಪಡೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಶೇಕಡವಾರು ಮತದಾನ
ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ 37.8ರಷ್ಟು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಶೇಕಡಾ. 31.1ರಷ್ಟು ಮತಗಳಿಕೆ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಶೇಕಡಾ 14 ರಷ್ಟು ಮತ ಚಲಾವಣೆಯಾಗಿದೆ ಎಂದು ಸಿ-ವೋಟರ್ ಸಮೀಕ್ಷೆ ತಿಳಿಸಿದೆ.