ಏಪ್ರಿಲ್ 1 ರಂದು ಅಮಿತ್ ಶಾ ಬಂದ ಬಳಿಕ ಎಲ್ಲವೂ ತಿಳಿಯಲಿದೆ ಎಂದು ಸರ್ಕಾರದಲ್ಲಿ ಮಹತ್ತರ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್,
ಚಾಮರಾಜನಗರ (ಮಾ.30): ಸರ್ಕಾರದಲ್ಲಿ ಮಹತ್ತರ ಬದಲಾವಣೆ ಆಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಏಪ್ರಿಲ್ 1 ರಂದು ಅಮಿತ್ ಶಾ (Amit Shah ) ಬಂದ ಬಳಿಕ ಎಲ್ಲವೂ ತಿಳಿಯಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B S Yediyurappa) ಹೇಳಿದರು. ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ಧಾರ್ಮಿಕ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಏ.1 ರಂದು ಅಮಿತ್ ಶಾ ರಾಜ್ಯಕ್ಕೆ ಬರಲಿದ್ದು ಅವರು ಏನು ಸಲಹೆ-ಸೂಚನೆ ಕೊಡುತ್ತಾರೋ ಗೊತ್ತಿಲ್ಲ, ಅವರ ಬಂದ ಬಳಿಕ ಎಲ್ಲವೂ ತಿಳಿಯಲಿದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು ಶಾ ಭೇಟಿ ಬಳಿಕ ಅದು ಕೂಡ ತಿಳಿದು ಬರಲಿದೆ ಎಂದು ತಿಳಿಸಿದರು.
undefined
ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ವಿಶ್ವಾಸ ಗೆಲ್ಲಿಸುವ ಉದ್ದೇಶದಿಂದ ನಾನು, ಸಿಎಂ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಿದ್ದು ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರ ಪಡೆಯಲಿದ್ದು 130-140 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ ಚುನಾವಣೆಗೆ ಕೋಡಿಹಳ್ಳಿ ಚಂದ್ರಶೇಖರ್ ನೂತನ ಪಕ್ಷ ರಚನೆ ಘೋಷಣೆ
10-15 ವರ್ಷ ಓಡಾಡುತ್ತೇನೆ, ಪಕ್ಷ ಸಂಘಟಿಸುತ್ತೇನೆ: ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೇವರು ಶಕ್ತಿ ಕೊಟ್ಟರೇ ಇನ್ನೂ 10-15 ವರ್ಷ ಓಡಾಡುತ್ತೇನೆ, ಪಕ್ಷ ಸಂಘಟಿಸುತ್ತೇನೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗಿಂತ ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಮಗಳಿಗೆ ತೆರಳಿ ಜನರ ಕಷ್ಟ ಸುಖ ಕೇಳುತ್ತೇನೆ ಎಂದರು.
ಇನ್ನು, ಬಿ.ಎಸ್.ಯಡಿಯೂರಪ್ಪ ಅವರಿಗೆ ದಾರಿಯುದ್ದಕ್ಕೂ ಗ್ರಾಮಗಳಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಗೌಡಹಳ್ಳಿ ಗ್ರಾಮದಲ್ಲಿ ಸುತ್ತೂರು ಶ್ರೀ ಹಾಗೂ ಯಡಿಯೂರಪ್ಪ ಅವರನ್ನು ಮೆರವಣಿಗೆ ಮೂಲಕ ನೂತನ ಮಠಕ್ಕೆ ಕರೆದೊಯ್ದು ಮಹಾಂತಸ್ವಾಮಿ, ಸಿದ್ದಲಿಂಗಸ್ವಾಮಿಗಳ ಗದ್ದುಗೆ ಲಿಂಗ ಪ್ರತಿಷ್ಟಾಪನೆ, ಬಸವಭವನ, ಬಸವದ್ವಾರ , ಪ್ರಸಾದ ನಿಲಯವನ್ನು ಉದ್ಘಾಟಿಸಲಾಯಿತು..
ನಂಬಿದವರನ್ನು ಕೈಬಿಟ್ಟಿಲ್ಲ, ಅರ್ಜುನನಾಗಿದ್ದವರು ಈಗ ಕೃಷ್ಣರಾಗಿದ್ದಾರೆ: ಈ ಹಿಂದೆ ಅರ್ಜುನನಾಗಿ ಹೋರಾಡಿದ್ದ ಬಿ.ಎಸ್.ಯಡಿಯೂರಪ್ಪ ಇನ್ಮುಂದೆ ಕೃಷ್ಣನ ರೀತಿ ಸಾರಥಿಯಾಗುತ್ತಾರೆ ಎಂದು ಕೊಳ್ಳೇಗಾಲ (Kollegal ) ಶಾಸಕ ಎನ್.ಮಹೇಶ್ (MLA N mahesh) ಹೇಳಿದರು. ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದ ವಿರಕ್ತ ಮಠ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ, ಅರ್ಜುನನ ರೀತಿ ಇದ್ದ ಯಡಿಯೂರಪ್ಪ ಕೃಷ್ಣನ ರೀತಿ ಸಾರಥಿಯಾಗಿ ಪಕ್ಷವನ್ನು ಮುನ್ನೆಡೆಸಿ ಚುನಾವಣೆ ಎದುರಿಸಲಿದ್ದಾರೆ ಎನ್ನುವ ಮೂಲಕ ಕಿಂಗ್ ಮೇಕರ್ ಆಗಿದ್ದಾರೆಂದು ಸೂಚ್ಯವಾಗಿ ತಿಳಿಸಿದರು.
ಯಡಿಯೂರಪ್ಪ ರನ್ನು ನಂಬಿದವಾರ್ಯಾರು ಹಾಳಾಗಿಲ್ಲ, ಅವರನ್ನು ನಂಬಿದವರಿಗೆ ದಡ ಮುಟ್ಟಿಸಿದ್ದಾರೆ, ಅವರನ್ನು ನಂಬಿದವರನ್ನು ಯಡಿಯೂರಪ್ಪ ಎಂದಿಗೂ ಕೈ ಬಿಟ್ಟಿಲ್ಲ ಎಂದು ಬಿಎಸ್ವೈ ಗುಣಗಾನ ಮಾಡಿದ ಮಹೇಶ್ ಯಡಿಯೂರಪ್ಪ ಅವರಂತೆ ಜನರೊಟ್ಟಿಗೆ ಕನೆಕ್ಟ್ ಆಗುವ ಮತ್ತೋರ್ವ ನಾಯಕನನ್ನು ನಾನು ನೋಡಿಲ್ಲ ಎಂದು ಹಾಡಿ ಹೊಗಳಿದರು.
ಮೌನವಾಗಿಯೇ ಇರುವ ಯಡಿಯೂರಪ್ಪ ಜನಾನುರಾಗಿಯಾಗಿ ಕೆಲಸ ಮಾಡಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ ಯಡಿಯೂರಪ್ಪ ಅವರ ಜನಪ್ರಿಯತೆ ಕುಗ್ಗಿಲ್ಲ. ಯಡಿಯೂರಪ್ಪ ಅವರದು ಒಂದು ರೀತಿ ಮಾತೃ ಹೃದಯ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿ ಚಾಮರಾಜನಗರ ಜನರು ಅನ್ನ ತಿನ್ನುವಂತೆ ಮಾಡಿದ್ದಾರೆ ಎಂದು ಹೇಳಿದರು.
Kalaburagi SSLC Exam ವಿದ್ಯಾರ್ಥಿಗಳಿಗೆ ಚೀಟಿ ಕೊಡಲು ಗೋಡೆ ಹತ್ತಿ ಸರ್ಕಸ್!
ರಾಜಾಹುಲಿಗೆ ಖಾವಿಗಳ ಜೈಕಾರ: ಇನ್ನು, ವಿರಕ್ತ ಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹತ್ತಾರು ಮಠಾದೀಶರು ಬಿಎಸ್ವೈ ರನ್ನು ಗುಣಗಾನ ಮಾಡಿ ಅವರ ಅಧಿಕಾರವಧಿಯನ್ನು ಹಾಡಿ ಹೊಗಳಿದರು. ವಾಟಾಳು ಮಠದ ಶ್ರೀ ಮಾತನಾಡಿ, ಯಡಿಯೂರಪ್ಪ ಅವರಿಗೆ ಶಕ್ತಿ ಏನು ಹಿನ್ನಡೆಯಾಗಿಲ್ಲ ಇನ್ನೂ ಎರಡು ಅವಧಿಗೆ ಮುಖ್ಯಮಂತ್ರಿಯಾಗುವ ಶಕ್ತಿ ಅವರಲ್ಲಿದೆ ಎಂದರು. ಮಠ-ಮಾನ್ಯಗಳಿಗೆ ಹಣ ಕೊಟ್ಡಿದ್ದನ್ನು ಪ್ರಸ್ತಾಪಿಸಿದ ಹಲವಾರು ಮಠಾಧೀಶರು ಯಡಿಯೂರಪ್ಪ ನಡೆಯಿಂದ ಮಠಗಳು ಉಳಿಯುವ ಪರಿಸ್ಥಿತಿ ನಿರ್ಮಾಣವಾಯಿತು, ಮಠಗಳು ಸಮಾಜದ ಬೆಳವಣಿಗೆಗೆ ಅವಶ್ಯಕತೆ ಅಲ್ಲಾ ಅದು ಅಗತ್ಯತೆ ಎಂಬುದನ್ನು ಸಾರಿದರು ಎಂದು ಖಾಕಿಗಳು ಬಿಎಸ್ವೈ ಪರ ಬ್ಯಾಟ್ ಬೀಸಿದರು.
ಸುತ್ತೂರು ಶ್ರೀ ಮಾತನಾಡಿ, ಕಾವೇರಿ ನ್ಯಾಯಾಧೀಕರಣದಲ್ಲಿ ಪ್ರಕರಣ ಇದ್ದಾಗಲೇ ಕೆರೆಗೆ ನೀರು ತುಂಬುವ ಯೋಜನೆ ಜಾರಿಗೊಳಿಸಿ ಲಕ್ಷಾಂತರ ರೈತರ ಬಾಳಿಗೆ ಆಶಾಕಿರಣವಾದರು. ಸಿಎಂ ಆಗುವ ಮುನ್ನ ಇದ್ದ ಜನಪ್ರಿಯತೆ, ಸಿಎಂ ಆದಾಗಿನ ಜನಪ್ರಿಯತೆ ಅಧಿಕಾರದಿಂದ ಇಳಿದ ಬಳಿಕವೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದರು.
ವೇದಿಕೆಯಲ್ಲೇ ಕೊಳ್ಳೇಗಾಲ ಟಿಕೆಟ್ ಫೈನಲ್ ಮಾಡಿದ ಬಿಎಸ್ವೈ,ಉಳಿದ ಆಕಾಂಕ್ಷಿಗಳಿಗೆ ನಡುಕ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ (Kollegal Assembly) ಸ್ಪರ್ಧಿಸಲು ತಾಮುಂದು ನಾಮುಂದು ಎಂಬಂತೆ ಇರುವ 5-6 ಮಂದಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಶಾಕ್ ನೀಡಿದ್ದು ಚುನಾವಣೆಗೆ ಇನ್ನು ಒಂದು ವರ್ಷವಿರುವಾಗಲೇ ಅಭ್ಯರ್ಥಿ ಅಂತಿಮಗೊಳಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮಕ್ಕಾಗಿ ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಬಿಎಸ್ವೈ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಬಾರಿ ಮಹೇಶ್ ರನ್ನು ಶಾಸನಸಭೆ ಕಳುಹಿಸಿದಂತೆ ಮುಂದಿನ ಬಾರಿಯೂ ಅವರನ್ನು ಆರಿಸಿ ಕಳುಹಿಸಿಕೊಡಿ ಎಂದು ಮನವಿ ಮಾಡುವ ಮೂಲಕ ಎನ್.ಮಹೇಶ್ ಅವರೇ ಬಿಜೆಪಿ ಅಭ್ಯರ್ಥಿ ಎಂದು ತಿಳಿಸಿದರು.
ಯಡಿಯೂರಪ್ಪ ಈ ಹೇಳಿಕೆಯಿಂದ ಈಗಾಗಲೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಸಂಸದ ವಿ.ಶ್ರೀನಿವಾಸಪ್ರಸಾದ್ ಅಳಿಯ ಡಾ.ಮೋಹನ್, ಚಾಮರಾಜನಗರ ಸಿಪಿಐ ಬಿ.ಪುಟ್ಟಸ್ವಾಮಿ, ಕಿನಕಹಳ್ಳಿ ರಾಚಯ್ಯ ಅವರಿಗೆ ಬಿಎಸ್ವೈ ಹೇಳಿಕೆಯಿಂದ ಬೇಸರವಾಗಿದ್ದರೂ ಅಚ್ಚರಿಯಿಲ್ಲ.
ಅವರು ಬಿಟ್ಟು ಇವರ್ಯಾರು ಎಂಬ ಹತ್ತಾರು ಮಾತುಗಳಿಗೆ ಯಡಿಯೂರಪ್ಪ ಇಂದು ಫುಲ್ ಸ್ಟಾಪ್ ಹಾಕಿದ್ದು ಮಹೇಶ್ ಅವರೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಸಾರಿದ್ದಾರೆ.