‘ಸತ್ಯವನ್ನೇ ಹೇಳುತ್ತೇನೆ, ನೇರವಾಗಿ ಮಾತನಾಡುತ್ತೇನೆ ಎಂಬ ಕಾರಣಕ್ಕಾಗಿ ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿಸಿದ್ದಾರೆ. ಇದರ ಹಿಂದೆ ಯಡಿಯೂರಪ್ಪ ಇದ್ದಾರೆ. ಆದರೆ, ನಾನು ಹೊಸ ಪಕ್ಷ ಕಟ್ಟುವುದಿಲ್ಲ. ಗೌರವಯುತವಾಗಿ, ‘ವಿತ್ ಪವರ್’ ಬಿಜೆಪಿಗೆ ವಾಪಸ್ ಬರುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ಬೆಂಗಳೂರು (ಮಾ.30): ‘ಸತ್ಯವನ್ನೇ ಹೇಳುತ್ತೇನೆ, ನೇರವಾಗಿ ಮಾತನಾಡುತ್ತೇನೆ ಎಂಬ ಕಾರಣಕ್ಕಾಗಿ ಪಕ್ಷದಿಂದ ನನ್ನನ್ನು ಉಚ್ಛಾಟನೆ ಮಾಡಿಸಿದ್ದಾರೆ. ಇದರ ಹಿಂದೆ ಯಡಿಯೂರಪ್ಪ ಇದ್ದಾರೆ. ಆದರೆ, ನಾನು ಹೊಸ ಪಕ್ಷ ಕಟ್ಟುವುದಿಲ್ಲ. ಗೌರವಯುತವಾಗಿ, ‘ವಿತ್ ಪವರ್’ ಬಿಜೆಪಿಗೆ ವಾಪಸ್ ಬರುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ. ತಮ್ಮನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗಲಿದ್ದು, ವಿಜಯದಶಮಿಗೆ ಏನೆಂಬುದನ್ನು ತೋರಿಸುತ್ತೇನೆ. 2028ರಲ್ಲಿ ನಾವೇ ಅಧಿಕಾರಕ್ಕೆ ಬರಲಿದ್ದು, ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಶಪಥ ಮಾಡಿದರು.
ನನ್ನನ್ನು ಮೂರು ಸಲ ಉಚ್ಚಾಟನೆ ಮಾಡಲಾಗಿದೆ. ಅಷ್ಟು ಸಲವೂ ಬಿ.ಎಸ್.ಯಡಿಯೂರಪ್ಪ ಅವರೇ ಅದಕ್ಕೆ ಕಾರಣ. ಮುಂದಿನ ದಿನದಲ್ಲಿ ಇದೆಲ್ಲಾ ಗೊತ್ತಾಗುತ್ತದೆ. ನನಗೀಗ ಯಾವುದೇ ಹೈಕಮಾಂಡ್ ಇಲ್ಲ. ಜನರು ಮತ್ತು ಹಿಂದೂಗಳೇ ನನಗೆ ಹೈಕಮಾಂಡ್. ವಿಜಯೇಂದ್ರ ಅವರ ದುರಂಹಕಾರ ಏನೆಂಬುದು ಸಂಸದರು, ಶಾಸಕರಿಗೆ ಗೊತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಹೊರತುಪಡಿಸಿದರೆ ಮತ್ಯಾವುದೇ ಸಂಸದರಿಗೂ ವಿಜಯೇಂದ್ರ ಅಧ್ಯಕ್ಷತೆ ಒಪ್ಪಿಗೆ ಇಲ್ಲ ಎಂದರು. ವಿಜಯೇಂದ್ರರ ಕೆಲಸದ ಶೈಲಿ ಯಾರಿಗೂ ಸಮಾಧಾನ ತರುತ್ತಿಲ್ಲ. ಪಕ್ಷದ ನಾಯಕರಿಗೆ ಅವರು ಗೌರವ ಕೊಡುವುದಿಲ್ಲ. ಮಾಜಿ ಸಚಿವ ಶ್ರೀರಾಮುಲು, ಸಂಸದ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್‌ಗೂ ಅವರು ಅವಮಾನ ಮಾಡಿದ್ದಾರೆ. ಅಧಿವೇಶನದ ವೇಳೆ ಅವರ ಜತೆ ನಾನು ಸರಸ ಸಲ್ಲಾಪ ಮಾಡಿಲ್ಲ ಎಂದು ವ್ಯಂಗ್ಯವಾಗಿಯೇ ಚಾಟಿ ಬೀಸಿದರು.
ಪಕ್ಷದ ಹೈಕಮಾಡ್ ನನ್ನನ್ನು ಉಚ್ಚಾಟನೆ ಮಾಡಿರುವುದರ ಹಿಂದೆ ಮತ್ತೊಂದು ಲೆಕ್ಕಾಚಾರ ಇರಬಹುದು. ವಿಜಯೇಂದ್ರಗೆ ಸಂದೇಶ ಕೊಡುವ ಉದ್ದೇಶವೂ ಇರಬಹುದು. ಆದರೆ, ಒಂದಂತು ಸತ್ಯ, ಮತ್ತೆ ಬಿಜೆಪಿ ನನ್ನನ್ನು ವಾಪಸ್ ಕರೆಸಿಕೊಳ್ಳಲಿದೆ. ಈ ಹಿಂದೆ ಎರಡು ಬಾರಿ ಉಚ್ಚಾಟನೆ ಮಾಡಿದಾಗಲೂ ಅವರೇ ವಾಪಸ್ ಕರೆಸಿಕೊಂಡಿದ್ದರು, ನಾನೇನು ಹೋಗಿ ಕೇಳಿರಲಿಲ್ಲ. ಈಗಲೂ ಗೌರವಯುತವಾಗಿ ವಾಪಸ್ ಬರುತ್ತೇನೆ. ಜೊತೆಗೆ, ಅಧಿಕಾರದೊಂದಿಗೆ ಬರುತ್ತೇನೆ (ವಿತ್ ಪವರ್). ಆಗ ಯಾರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡುತ್ತೇನೆ ಎಂದು ಹೇಳಿದರು. ರಾಜ್ಯದ 224 ಕ್ಷೇತ್ರದಲ್ಲಿಯೂ ನನಗೆ ಅಭಿಮಾನಿಗಳ ಮತ್ತು ಹಿಂದೂ ಕಾರ್ಯಕರ್ತರ ತಂಡ ಇದೆ. ಯಡಿಯೂರಪ್ಪ ತಮ್ಮ ಕುಟುಂಬದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಜಪ ಮಾಡುತ್ತಿದ್ದಾರೆ. ಆದರದು ಸಾಧ್ಯವಿಲ್ಲ. ಹಿಂದುತ್ವ ಪರ, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಿದ್ದೇನೆ.
ಪೆನ್‌ಡ್ರೈವ್ ಸಮೇತ ರಾಜಣ್ಣ ಪುತ್ರ ಪೊಲೀಸರಿಗೆ ದೂರು: ತುಮಕೂರು ಎಸ್‌ಪಿಗೆ ದೂರು ಸಲ್ಲಿಸಿದ ರಾಜೇಂದ್ರ
ನಮ್ಮ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುತ್ತಿದ್ದು, ವಿಜಯದಶಮಿಗೆ ನಾವು ಏನೆಂಬುದನ್ನು ತೋರಿಸುತ್ತೇವೆ ಎಂದು ಕಿಡಿಕಾರಿದರು. ಸದ್ಯಕ್ಕೆ ವಿಜಯೇಂದ್ರ ವಿಜೃಂಭಿಸುತ್ತಿರಬಹುದು. ಮುಂದೆ ನಾವು ವಿಜೃಂಭಿಸುವ ಕಾಲ ಬರಲಿದೆ. ಯಡಿಯೂರಪ್ಪ ಅವರ ರಾಜಕಾರಣ ಅಂತ್ಯವಾದಾಗ ನಾವು ವಿಜೃಂಭಿಸುತ್ತೇವೆ. ನನ್ನನ್ನು ಉಚ್ಛಾಟಿಸಿದ್ದಕ್ಕಾಗಿ ಹೋಗಿ ಕ್ಷಮೆ ಕೇಳಿಲ್ಲ. ವಿಷಾದ ವ್ಯಕ್ತಪಡಿಸುವುದಿಲ್ಲ. ನನ್ನೊಂದಿಗೆ ಶಾಸಕ ರಮೇಶ್ ಜಾರಕಿಹೊಳಿ ತಂಡ ಮಾತ್ರವಲ್ಲ, ಸಂಸದರು, ಶಾಸಕರು, ಹಿಂದು ಕಾರ್ಯಕರ್ತರ ದೊಡ್ಡ ಸಂಖ್ಯೆಯೇ ಇದೆ. ಉಚ್ಛಾಟನೆಯಿಂದ 10 ಪಟ್ಟು ಶಕ್ತಿ ಹೆಚ್ಚಳವಾಗಿದೆ. 2028ರಲ್ಲಿ ನಾವೇ ಅಧಿಕಾರಕ್ಕೆ ಬರಲಿದ್ದು, ನಾನು ಮುಖ್ಯಮಂತ್ರಿಯಾಗುತ್ತೇನೆ. ಅಲ್ಲದೇ, ಜನರು ಸಹ ನಾನು ಮುಖ್ಯಮಂತ್ರಿಯಾಗಬೇಕು ಎಂಬುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.